'ಯಡಿಯೂರಪ್ಪ, ಈಶ್ವರಪ್ಪ ಮುನಿಸು ಶಮನ'

By Kannadaprabha NewsFirst Published Apr 9, 2021, 12:41 PM IST
Highlights

ಪಕ್ಷದ ಹಿರಿಯರು ಗೊಂದಲ ನಿವಾರಿಸಿದ್ದಾರೆ| ಇಬ್ಬರು ನಾಯಕರೂ ಒಂದಾಗಿದ್ದಾರೆ| ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ| ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯತ್ನಾಳ್‌ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದ ಅರುಣ್‌ ಸಿಂಗ್‌| 

ಮಂಗಳೂರು(ಏ.09): ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್‌.ಈಶ್ವರಪ್ಪ ಒಂದೇ ತಟ್ಟೆಯಲ್ಲಿ ಊಟ ಮಾಡಿದವರಾಗಿದ್ದು, ಅವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿವೆ. ಪಕ್ಷದ ಹಿರಿಯರು ಗೊಂದಲ ನಿವಾರಿಸಿದ್ದು, ರಾಜ್ಯದ ಆಡಳಿತ ಸುಭದ್ರವಾಗಿ ಮುನ್ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ಪಕ್ಷದ ಹಿರಿಯ ನಾಯಕರು. ಅವರು ಪಕ್ಷದ ಅಧ್ಯಕ್ಷರಾಗಿಯೂ, ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ರಾಜ್ಯದ ಪ್ರಮುಖ ನಾಯಕರು. ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ನೀಡಿರುವುದು ಹೌದು, ನಾನು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಗೊಂದಲ ಬಗೆಹರಿದಿದ್ದು, ಇಬ್ಬರು ನಾಯಕರೂ ಒಂದಾಗಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ಬಿಜೆಪಿ ಗೆಲುವು ಖಚಿತ: 

ನಾನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇನೆ. ಈ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಗೆಲುವಿಗಾಗಿ ಅವಿರತ ಶ್ರಮಿಸುತ್ತಿದ್ದು, ಬಿಜೆಪಿ ಗೆಲುವು ಖಚಿತ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನತೆ ಇದನ್ನು ಗುರುತಿಸಿದ್ದಾರೆ. ಚುನಾವಣೆಗೆ ಗೆಲ್ಲಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಅವರ ಯಾವ ಪಿತೂರಿಯೂ ನಡೆಯದು. ಕಾಂಗ್ರೆಸ್‌ ಉಪ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯತ್ನಾಳ್‌ ಹೇಳಿಕೆ ಕುರಿತ ಪ್ರಶ್ನೆಗೆ ಅರುಣ್‌ ಸಿಂಗ್‌ ಉತ್ತರಿಸಲು ನಿರಾಕರಿಸಿದರು.
 

click me!