ಮಧ್ಯಂತರ ಚುನಾವಣೆಗೆ ಹೋಗಲು ಕಾಂಗ್ರೆಸ್‌, ಜೆಡಿಎಸ್‌ ಕುತಂತ್ರ

By Web DeskFirst Published Nov 29, 2019, 7:40 AM IST
Highlights

ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಮತದಾನದ ಮೂಲಕ ಉತ್ತರ ಕೊಡಿ ಸಿಎಂ ಯಡಿಯೂರಪ್ಪ|ಇನ್ನು ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರಿದರೆ ತಬ್ಬಲಿಗಳಂತೆ ಬೀದಿಯಲ್ಲಿ ತಿರುಗಾಡಬೇಕಾಗುತ್ತದೆ ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಗೆ ಗೊತ್ತಾಗಿದೆ| ಅದಕ್ಕಾಗಿ ನಮ್ಮ ಬಗ್ಗೆ ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುತ್ತಾರೆ| ಆದರೆ, ಡಿ. 9 ರಂದು ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ| ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲರನ್ನು ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಯಡಿಯೂರಪ್ಪ ಮನವಿ|
 

ಹಾವೇರಿ[ನ.29]: ಯಡಿಯೂರಪ್ಪನವರಿಗೆ ಬಹುಮತ ಬರಬಾರದು, ಮಧ್ಯಂತರ ಚುನಾವಣೆಗೆ ಹೋಗಬೇಕು ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕುತಂತ್ರವಾಗಿದೆ. ಆದರೆ, ಡಿಸೆಂಬರ್‌ 9 ರಂದು 15 ಕ್ಷೇತ್ರದಲ್ಲಿ ನಿಮಗೆ ಯಾವ ರೀತಿ ಜನ ಸ್ಪಂದಿಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ಹಿರೇಕೆರೂರು ಕ್ಷೇತ್ರದ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

6 ತಿಂಗಳಿಗೊಮ್ಮೆ ವಿಧಾನಸಭೆ ಚುನಾವಣೆ ಮಾಡಲು ಸಾಧ್ಯವೇನು? ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಯೋಗ್ಯತೆಯೇನು ಎನ್ನುವುದು ಡಿ. 9 ರಂದು ಗೊತ್ತಾಗುತ್ತದೆ. ಬಿಜೆಪಿಗೆ ಬಿದ್ದ ಮತಗಳನ್ನು ನೋಡಿ ಆ ಪಕ್ಷಗಳ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಒಂದು ತಾಸಿನೊಳಗೇ ಕಾಲ್ಕೀಳಲಿದ್ದಾರೆ. ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಾಗಿದೆ. ಈಗ ಪೈಪೋಟಿ ಇರುವುದು ಎಷ್ಟುಮತಗಳ ಅಂತರ ಎನ್ನುವುದಕ್ಕೆ ಮಾತ್ರ ಎಂದು ವಿಶ್ವಾಸ ವ್ಯಕ್ತಪಡಿಸಿದರು.

15 ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿ ಇಂದಿನಿಂದ ಎರಡನೇ ಸುತ್ತು ಆರಂಭಿಸುತ್ತಿದ್ದೇನೆ. ನಿರೀಕ್ಷೆಗೂ ಮೀರಿ ಜನಬೆಂಬಲ ಸಿಗುತ್ತಿದೆ. 9 ರಂದು ಫಲಿತಾಂಶ ಬಂದ ಮೇಲೆ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಮತದಾರರೇ ಉತ್ತರ ಕೊಡಬೇಕು. ಮಹಿಳಾ ಸಬಲೀಕರಣಕ್ಕಾಗಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು, ಇನ್ನು ಮೂರೂವರೆ ವರ್ಷದಲ್ಲಿ ಒಬ್ಬರೂ ಮನೆ ರಹಿತರು ಇರಬಾರದು ಎಂಬ ಸಂಕಲ್ಪ ತೊಟ್ಟಿದ್ದೇನೆ. ನಾನು ಅಧಿಕಾರಕ್ಕೆ ಬಂದ ಮೂರೇ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ  6 ಸಾವಿರದೊಂದಿಗೆ ಮತ್ತೆ 4 ಸಾವಿರ ಹಣವನ್ನು ಎಲ್ಲ ರೈತರಿಗೆ ಕೊಡುತ್ತಿದ್ದೇನೆ. ಪ್ರವಾಹದಿಂದ ರಾಜ್ಯದಲ್ಲಿ ಮೂರೂವರೆ ಲಕ್ಷ ರೈತರು ಮನೆಮಠ ಕಳೆದುಕೊಂಡರು. ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಬಜೆಟ್‌ನಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತೇನೆ ಎಂದರು.

ಬಿ.ಸಿ. ಪಾಟೀಲ ಸೇರಿದಂತೆ 17 ಶಾಸಕರು ರಾಜೀನಾಮೆ ನೀಡಿದ್ದರಿಂದ ನಿಮ್ಮ ಯಡಿಯೂರಪ್ಪ ಸಿಎಂ ಆಗಿದ್ದಾನೆ. ನಮ್ಮ ಪಕ್ಷಕ್ಕೆ ಬಿ.ಸಿ. ಪಾಟೀಲ ಬಂದ ತಕ್ಷಣ ಕ್ಷೇತ್ರಕ್ಕೆ 250 ಕೋಟಿ ಅನುದಾನ ಕೊಟ್ಟಿದ್ದೇನೆ. ಅವರೊಂದಿಗೆ ಇನ್ನೂ 16 ಶಾಸಕರು ರಾಜೀನಾಮೆ ಕೊಟ್ಟು ಬರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ನಮ್ಮ ಮೇಲೆ ಅವರೆಲ್ಲ ನಂಬಿಕೆ ಇಟ್ಟುಕೊಂಡು ಬಂದಿದ್ದಾರೆ. ಅವರೆಲ್ಲ ಅಲ್ಲೇ ಇದ್ದಿದ್ದರೂ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಅದನ್ನು ಧಿಕ್ಕರಿಸಿ ನಮ್ಮ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಬಂದಿದ್ದಾರೆ. ಅವರ ನಂಬಿಕೆಗೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದರು.

ಸಂಧ್ಯಾ ಸುರಕ್ಷಾ, ಮಹಿಳಾ ಕಲ್ಯಾಣಕ್ಕಾಗಿ, ವಿದವಾ ವೇತನ, ಭಾಗ್ಯಲಕ್ಷ್ಮೀ ಯೋಜನೆ ಇವೆಲ್ಲ ಯಡಿಯೂರಪ್ಪನ ಕೊಡುಗೆ. ನೀವೇನು ಮಾಡಿದ್ದೀರಿ? ಇದನ್ನೆಲ್ಲ ಸರಿಯಾರಿ ಅನುಷ್ಠಾನಕ್ಕೆ ತರುವ ಯೋಗ್ಯತೆ ವಿರೋಧ ಪಕ್ಷಗಳಿಗಿಲ್ಲ. ಹಿರೇಕೆರೂರು ಕ್ಷೇತ್ರವನ್ನು ಪಕ್ಕದ ಶಿಕಾರಿಪುರದಂತೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುತ್ತೇನೆ. ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ. ನೀರಾವರಿಗೆ ಆದ್ಯತೆ ನೀಡುವುದರೊಂದಿಗೆ ಮುಂದಿನ ಬಜೆಟ್‌ನಲ್ಲಿ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಕಲ್ಪಿಸಲಾಗುವುದು. ಇದಕ್ಕೆ ಎಲ್ಲ ರೀತಿಯ ತ್ಯಾಗ ಮಾಡಲು ಸಿದ್ಧ ಎಂದರು.

ಬೀದಿಯಲ್ಲಿ ನಿಲ್ಲಬೇಕಾಗುತ್ತದೆ

ಇನ್ನು ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರಿದರೆ ತಬ್ಬಲಿಗಳಂತೆ ಬೀದಿಯಲ್ಲಿ ತಿರುಗಾಡಬೇಕಾಗುತ್ತದೆ ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಗೆ ಗೊತ್ತಾಗಿದೆ. ಅದಕ್ಕಾಗಿ ನಮ್ಮ ಬಗ್ಗೆ ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುತ್ತಾರೆ. ಆದರೆ, ಡಿ. 9 ರಂದು ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲರನ್ನು ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!