ಮುಂದುವರಿದ ಪಕ್ಷಾಂತರ ಪರ್ವ : ಒಂದೇ ಪಕ್ಷದಲ್ಲಿದ್ದವರೀಗ ಶತ್ರುಗಳಾದ್ರು

By Kannadaprabha NewsFirst Published Nov 28, 2019, 3:22 PM IST
Highlights

ರಾಜ್ಯದಲ್ಲಿ ಉಪ ಚುನಾವಣೆ ಬೆನ್ನಲ್ಲೇ ವಿವಿಧ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷ ಬದಲಾಗುತ್ತಿದ್ದು ಮಿತ್ರರಾಗಿದ್ದವರು ಈಗ ಶತ್ರುಗಳಾಗಿದ್ದಾರೆ. 

ಸಂತೋಷ ದೈವಜ್ಞ

ಮುಂಡಗೋಡ [ನ.28]:  ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದ್ದು, ಆ ಪಕ್ಷದಿಂದ ಈ ಪಕ್ಷಕ್ಕೆ ಈ ಪಕ್ಷದಿಂದ ಆ ಪಕ್ಷಕ್ಕೆ ಸೇರ್ಪಡೆ ಪ್ರಕ್ರಿಯೆಗಳು ನಡೆಯುತ್ತಿದ್ದು, ರಾಜಕೀಯ ನಿಂತ ನೀರಲ್ಲ ಎಂಬುವುದಕ್ಕೆ ಸಾಕ್ಷಿಯಾಗಿ ಪಕ್ಷಾಂತರ ಪರ್ವ ನಡೆಯುತ್ತಿ ರುವುದು ಒಂದು ಕಡೆಯಾದರೆ, ರಾಜಕಾರಣ ದಲ್ಲಿ ಯಾರು ಶತ್ರುವಲ್ಲ ಮಿತ್ರನು ಅಲ್ಲ ಎಂಬಂಂತೆ ಬದ್ದ ವೈರಿಗಳು ಒಂದಾಗಿದ್ದು, ಒಂದೇ ಪಕ್ಷದಲ್ಲಿದ್ದವರು ಈಗ ಶತ್ರುಗಳಾಗಿದ್ದಾರೆ.

ಶಿವರಾಮ ಹೆಬ್ಬಾರ ಕಾಂಗ್ರೆಸ್‌ನಲ್ಲಿದ್ದಾಗ ಚುನಾವಣೆಯಲ್ಲಿ ಅವರ ವಿರುದ್ಧ ಬದ್ಧ ವೈರಿಯಾಗಿ ಸೆಣಸುತ್ತಿದ್ದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಈಗ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಪರವಾಗಿ ಟೊಂಕಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ.

ಇನ್ನೊಂದೆಡೆ ಎಲ್ಲ ಚುನಾವಣೆಗಳನ್ನು ಕಾಂಗ್ರೆಸ್ ವಿರುದ್ದವೇ ಮಾಡಿಕೊಂಡು ಬಂದಿರುವ ವಿ.ಎಸ್. ಪಾಟೀಲ್ ಅವರ ಪುತ್ರ ಬಾಪುಗೌಡ ಪಾಟೀಲ ಅವರು ತಮ್ಮ ಬೆಂಬಲಿಗರೊಂದಿಗೆ ದಿಢೀರ್‌ನೇ ಕಾಂಗ್ರೆಸ್ ಸೇರಿದರೆ, ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಅತಿಕ್ರಮಣ ಹೋರಾಟಗಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಕೂಡ ಈಗ ಕಾಂಗ್ರೆಸ್ ಸೇರಿದ್ದು, ಅತಿಕ್ರಮಣದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನ ನಡೆಸಿದ್ದು, ಕ್ಷೇತ್ರದ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡು ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ೧೫ ಜನರಿಗೂ ಅವರವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿಕೊಂಡು ಸರ್ಕಾರ ಸುಭದ್ರಗೊಳಿಸಿಕೊಳ್ಳುವ ತವಕದಲ್ಲಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಂಡಾಯ, ಪಕ್ಷಾಂತರ ಹಾಗೂ ಅಸಮಾದಾನವೆಂಬುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಹೋದ ಕಡೆ ಜನ ಸಾಗರ ಕಂಡು ಬರುತ್ತಿದೆ ಆದರೂ ಮೇಲ್ನೋಟಕ್ಕೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದಂತೆ ಕಂಡರೂ ಮೂಲ ಬಿಜೆಪಿಗರ ಗೊಂದಲ ಇಂದಿಗೂ ಪರಿಹಾರವಾಗಿಲ್ಲ. ಹಳೆಯ ಬಿಜೆಪಿ ಹೊಸ ಬಿಜೆಪಿ ಎಂಬ ಮುಸುಕಿನ ಗುದ್ದಾಟ ಮುಂದುವರಿದಿದೆ. ಶಿವರಾಮ ಹೆಬ್ಬಾರ ಇದಕ್ಕೆ ಮೂಲಮ್ ಹಚ್ಚಿ ಸರಿಪಡಿಸಲು ಮುಂದಾಗಿದ್ದಾರೆ. 

ಲಾಭ ಪಡೆಯುತ್ತಿರುವ ಕಾಂಗ್ರೆಸ್: ಶಿವರಾಮ ಹೆಬ್ಬಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿರುವುದರಿಂದ ಕಾಂಗ್ರೆಸ್‌ನಲ್ಲಿ ನಾಯಕರ ಸಂಖ್ಯೆ ಕ್ಷೀಣಿಸಿತ್ತು. ಹಾಗಾಗಿ ಕಳೆದುಕೊಂಡಿದ್ದ ಜಾಗದಿಂದಲೇ ಪಡೆದುಕೊಳ್ಳುವ ಮಾರ್ಗ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರು ಬಿಜೆಪಿಯ ಭಿನ್ನಾಭಿಪ್ರಾದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೆ ವಿ.ಎಸ್. ಪಾಟೀಲ್ ಅವರ ಪುತ್ರ ಬಾಪುಗೌಡ ಪಾಟೀಲ್ ಹೊಸ ನಾಯಕತ್ವದಿಂದ ಮೂಲ ಬಿಜೆಪಿಗರಿಗೆ ಬೆಲೆ ಸಿಗುತ್ತಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್ ತೆಕ್ಕೆಗೆ ಜಾರಿದರೆ, ಕಾಂಗ್ರೆಸ್‌ನಿಂದ ಕೂಡ ಸಾಕಷ್ಟು ಜನ ಬಿಜೆಪಿ ಸೇರುತ್ತಿದ್ದು, ಪಕ್ಷಾಂತರ ಪರ್ವ ಮುಂದುವರಿದಿದೆ.

click me!