Tumakuru News: ರಾಷ್ಟ್ರೀಯ ಹೆದ್ದಾರಿ ರಸ್ತೆ ಗುಂಡಿ ಕೂಡಲೇ ಮುಚ್ಚಿ

By Kannadaprabha NewsFirst Published Sep 14, 2022, 4:14 AM IST
Highlights

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಸೇವಾಪಥ ರಸ್ತೆಯ ದುರವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳನ್ನು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತುಮಕೂರು (ಸೆ.14) :ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಸೇವಾಪಥ ರಸ್ತೆಯ ದುರವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳನ್ನು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಹಲವಾರು ಕೈಗಾರಿಕಾ ಸಂಘ ಸಂಸ್ಥೆಗಳು, ರೈತ ಸಂಘ, ಸುತ್ತಮುತ್ತಲ ಗ್ರಾಮಪಂಚಾಯಿತಿ ಅಧ್ಯಕ್ಷರು ಸಾರ್ವಜನಿಕರು ಒತ್ತಾಯಿಸಿದ ಘಟನೆ ಮಂಗಳವಾರ ಜರುಗಿತು. ಜಿಲ್ಲೆಯ ತುಮಕೂರು ನಗರದ 80 ಅಡಿ ರಸ್ತೆಯಲ್ಲಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮಂಗಳವಾರ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇವಾಪಥ ರಸ್ತೆಗಳ ಅವ್ಯವಸ್ಥೆ ಕುರಿತಂತೆ ಪ್ರಾದೇಶಿಕ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಕಿಲ್ಲರ್‌ ಗುಂಡಿಯಿಂದ ಪಾರಾದ ಮಹಿಳೆ: ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿನೇ ಇಲ್ವಾ?

ಈ ಸಂದರ್ಭದಲ್ಲಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ತುಮಕೂರು ಜಿಲ್ಲೆ ಕೈಗಾರಿಕಾ ಹಬ್‌ ಆಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲಾಗಿದೆ. ಆದರೆ ತುಮಕೂರು ಭಾಗದ ರಾಷ್ಟ್ರೀಯ ಹೆದ್ದಾರಿಗಳು ಸಾವಿಗೆ ರಹದಾರಿಯಾಗಿದೆ. ಇಲ್ಲಿ ವಾಹನಗಳ ನಿರಂತರ ಓಡಾಟ ಹೆಚ್ಚಾಗಿದ್ದು, ಇಂತಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಯ ಬದಲಿಗೆ ರಸ್ತೆಯನ್ನೇ ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿ, ಪ್ರತಿ ನಿತ್ಯ ಕನಿಷ್ಠ ಮೂರ್ನಾಲ್ಕು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಒಂದು ಕಿ.ಮೀ. ನಲ್ಲಿ ಕನಿಷ್ಠ 500 ಗುಂಡಿಗಳಿದ್ದರೂ ಸಹ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ ಎಂದರು.

ಗಡ್ಕರಿಗೂ ಮನವಿ: ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳ ಅವ್ಯವಸ್ಥೆಯಿಂದ ಹಾಳಾಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದೇವೆ ಜೊತೆಗೆ ನೆಲಮಂಗಲದಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚು ಗುಂಡಿಗಳು ಬಿದ್ದಿದ್ದು, ಡ್ರೋಣ್‌ ಮೂಲಕ ಸರ್ವೆ ಮಾಡಿಸಿ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿಯವರಿಗೆ ತಲುಪಿಸಿದ್ದೇವೆ. ಇದಕ್ಕೆ ಸ್ಪಂಧಿಸಿದ ಸಚಿವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಟಿ ಕಾರ್ಯದರ್ಶಿಗಳು ಮತ್ತು ಯೋಜನಾ ನಿರ್ದೇಶಕರನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಇನ್ನೊಂದು ವಾರದಲ್ಲಿ ಛಾಯಾಚಿತ್ರ ಹಾಗೂ ವಿಡಿಯೋ ಸಮೇತ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ ಎಂದರು.

ಪರಿಹಾರ ಯಾರು ಕೊಡುತ್ತಾರೆ:

ಇಡೀ ರಾಜ್ಯದಲ್ಲೇ ತುಮಕೂರು ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಬ್ರಾಂಡ್‌ ಆಗಿದ್ದು, ಕೈಗಾರಿಕೆ, ರಸ್ತೆ, ನೀರಿನ ಸೌಕರ್ಯ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನುರಿತ ಕಾರ್ಮಿಕರು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಜಿಲ್ಲೆಯಾಗಿದೆ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಮಾತ್ರವಲ್ಲ, ಸವೀರ್‍ಸ್‌ ರಸ್ತೆಗಳ ದುರವಸ್ಥೆ ಹಾಗೂ ಸರಿಯಾಗಿ ನಿರ್ವಹಣೆಯಿಲ್ಲದೆ ಮಹಿಳೆಯರು, ವೃದ್ದರು ಮಕ್ಕಳು ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ, ಗುಂಡಿಗಳಿಂದ ಕೂಡಿದ ರಸ್ತೆಗಳೇ ಹೆಚ್ಚು, ಇಂತಹ ರಸ್ತೆಗಳಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ಇದೇ ರಸ್ತೆಯಲ್ಲಿ ಓಡಾಡುವ ಜಾನುವಾರುಗಳ ಕಾಲು ಮುರಿದಿದ್ದು, ಇದಕ್ಕೆ ಪರಿಹಾರ ಯಾರು ಕೊಡುತ್ತಾರೆ ಎಂದು ಮುರಳೀಧರ ಹಾಲಪ್ಪ ಪ್ರಶ್ನಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಯೋಜನಾ ಅಧಿಕಾರಿ ಶಿರಿಶ್‌ ಗಂಗಾಧರ್‌, ತುಮಕೂರಿನಿಂದ ನೆಲಮಂಗಲದವರೆಗೂ 6 ಪಥದ ರಸ್ತೆ ನಿರ್ಮಾಣಕ್ಕೆ ಅಗ್ರಿಮೆಂಟ್‌ ಫೆಬ್ರವರಿ ತಿಂಗಳಲ್ಲಿ ಆಗಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ತುಮಕೂರು ಬೈಪಾಸ್‌ ರಸ್ತೆ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಅಲ್ಲಿಯವರೆಗೂ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತಹ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ.50 ರಷ್ಟುಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ ಶೇ.50 ರಷ್ಟುಗುಂಡಿಗಳನ್ನೂ ಸಹ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. 6 ಪಥದ ರಸ್ತೆ ನಿರ್ಮಾಣವಾಗುವುದರ ಜೊತೆಗೆ ಸುಸಜ್ಜಿತವಾದ ಸೇವಾಪಥ ರಸ್ತೆಯನ್ನೂ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಟೋಲ್‌ ಶುಲ್ಕ ನವೆಂಬರ್‌ವರೆಗೂ ವಿಸ್ತರಣೆ: ಟೋಲ್‌ ಶುಲ್ಕ ಅವಧಿಯನ್ನು ವಿಸ್ತರಣೆ ಮಾಡುವಂತೆ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ನವೆಂಬರ್‌ವರೆಗೂ ವಿಸ್ತರಣೆ ಮಾಡಿದೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಲೀಕರ ಸಂಘದ ಕುರಂದ್ವಾಡ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಮ್‌.ಎನ್‌. ಲೋಕೇಶ್‌, ಸತ್ಯಮಂಗಲ ಕೈಗಾರಿಕಾ ಸಂಘ, ಅಂತರಸನಹಳ್ಳಿ ಕೈಗಾರಿಕಾ ಸಂಘ, ಹಿರೇಹಳ್ಳಿ ಕೈಗಾರಿಕಾ ಸಂಘ, ವಸಂತನರಸಾಪುರ ಕೈಗಾರಿಕಾ ಸಂಘದ ಪದಾಧಿಕಾರಿಗಳು, ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ನಜೀರ್‌ ಅಹಮದ್‌, ಶಿವಕುಮಾರ್‌, ಗ್ರಾ.ಪಂ ಸದಸ್ಯರಾದ ಖದೀರ್‌, ಬಶೀರ್‌, ರೈತ ಮುಖಂಡರಾದ ಮಲ್ಲಿಕಾರ್ಜುನ್‌, ಗಿರಿಯಪ್ಪ, ಯದುಕುಮಾರ್‌, ಮುಖಂಡರಾದ ರೇವಣ್ಣಸಿದ್ದಯ್ಯ, ವೈ.ಎನ್‌.ನಾಗರಾಜ, ಕೆಂಚಮಾರಯ್ಯ, ಮಂಜುನಾಥ್‌, ಪ್ರಕಾಶ್‌, ಅಶ್ವತ್ಥ, ಅತೀಕ್‌ ಅಹಮದ್‌, ಶಿವಾಜಿ, ಫರ್ಜಾನಬೇಗಂ, ಮರಿಚೆನ್ನಮ್ಮ, ಕಮಲಮ್ಮ, ಸೌಭಾಗ್ಯಮ್ಮ, ಸಾಹೇರ, ಗೀತಾ, ಟಿ.ಎನ್‌.ಶ್ರೀಕಂಠಸ್ವಾಮಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ನಾಲ್ಕು ಪಂಚಾಯಿತಿಗಳ ಅಧ್ಯಕ್ಷರುಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

 

ರಸ್ತೆ ಗುಂಡಿ ತೋರಿಸಿ, ಬಹುಮಾನ ಗೆಲ್ಲಿ: ಹೀಗೊಂದು ವಿಶಿಷ್ಟ ಸ್ಪರ್ಧೆ..!

51 ಅಪಘಾತ ಜಾಗ: ಮನವಿಗೆ ಸ್ಪಂಧಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೆಲಮಂಗಲದಿಂದ ಊರುಕೆರೆವರೆಗೂ 6 ಪಥದ ರಾಷ್ಟ್ರೀಯ ಹೆದ್ದಾರಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ 51 ಆಕ್ಸಿಡೆಂಟ್‌ ಸ್ಪಾಟ್‌ಗಳಿವೆ ಎಂದು ಹೇಳುತ್ತಾರೆ. ಸರ್ಕಾರ ಇತ್ತ ಗಮನ ಹರಿಸಿ ಆಕ್ಸಿಡೆಂಟ್‌ ಸ್ಪಾಟ್‌ಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.

click me!