Viral video: ಪೇಜಾವರ ಶ್ರೀಗಳ ಎದೆಗೆ ಕಾಲಿಟ್ಟು ಮೇವು ತಿನ್ನುವ ಆಡು!

By Ravi NayakFirst Published Sep 13, 2022, 9:51 PM IST
Highlights

ಮಡಿ, ಪೂಜೆ, ಪ್ರವಚನ, ಇತ್ಯಾದಿಗಳಲ್ಲೇ ಸದಾಕಾಲ ವ್ಯಸ್ತರಾಗಿರುವ ಶ್ರೀಪಾದರು, ಪ್ರಾಣಿಗಳೊಂದಿಗೆ ಇಷ್ಟೊಂದು ಸಲುಗೆಯಿಂದ ಬೆರೆಯಲು ಸಾಧ್ಯವೇ ಎಂದು ನಿಮಗನ್ನಿಸಬಹುದು. ಹೌದು ಪೇಜಾವರ ಶ್ರೀಗಳ ಎದೆಗೆ ಕಾಲುಕೊಟ್ಟು ಆಡೊಂದು, ಸೊಪ್ಪು ತಿನ್ನುತ್ತಿರುವ ವಿಡಿಯೋ, ಫೋಟೋ ಸದ್ಯ ಎಲ್ಲರ ಗಮನ ಸೆಳೆದಿದೆ.

ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.13) : ಪೇಜಾವರ ಶ್ರೀಗಳ ಎದೆಗೆ ಕಾಲುಕೊಟ್ಟು ಆಡೊಂದು, ಸೊಪ್ಪು ತಿನ್ನುತ್ತಿರುವ ವಿಡಿಯೋ, ಫೋಟೋ ಸದ್ಯ ಎಲ್ಲರ ಗಮನ ಸೆಳೆದಿದೆ. ಮಡಿ, ಪೂಜೆ, ಪ್ರವಚನ, ಇತ್ಯಾದಿಗಳಲ್ಲೇ ಸದಾಕಾಲ ವ್ಯಸ್ತರಾಗಿರುವ ಶ್ರೀಪಾದರು, ಪ್ರಾಣಿಗಳೊಂದಿಗೆ ಇಷ್ಟೊಂದು ಸಲುಗೆಯಿಂದ ಬೆರೆಯಲು ಸಾಧ್ಯವೇ ಎಂದು ನಿಮಗನ್ನಿಸಬಹುದು; ಹೌದು, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರ ಪ್ರಾಣಿ ಪ್ರೇಮ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಪೇಜಾವರ ಶ್ರೀ(PejawarShree) ವಿಶ್ವ ಪ್ರಸನ್ನ ತೀರ್ಥರಿಗೆ ಪ್ರಾಣಿಗಳು ಅಂದ್ರೆ ವಿಶೇಷ ಪ್ರೀತಿ, ಈ ಹಿಂದೆಯೂ ಅನೇಕ ಬಾರಿ ಶ್ರೀಗಳ ಪ್ರಾಣಿ ಪ್ರೀತಿಯ ಅನೇಕ ಘಟನಾವಳಿಗಳನ್ನು ಉಡುಪಿ(Udupi)ಯ ಜನ ಕಂಡಿದ್ದಾರೆ .ಉಡುಪಿಯ ನೀಲಾವರ ಗೋಶಾಲೆ(Neelavara goshale)ಯಲ್ಲಿ ಸಾವಿರಾರು ದೇಶಿಯ ಗೋವುಗಳನ್ನು ಸಾಕಿ ಸಲಹುತ್ತಿರೋದು ಕೂಡಾ ಇದಕ್ಕೆ ‌ಸಾಕ್ಷಿ. 

ಉಡುಪಿ ಕೃಷ್ಣಮಠದಲ್ಲಿ ಅಷ್ಟಮಿಗೆ ಭರದ ಸಿದ್ಧತೆ: ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ತಯಾರಿ

ಸದ್ಯ ನೀಲಾವರ ಗೋಶಾಲೆಯಲ್ಲಿ, ಎರಡು ಆಡುಗಳನ್ನು ಸಾಕುತ್ತಿದ್ದು, ಆಡು, ಪೇಜಾವರ ಶ್ರೀಗಳ ಎದೆ ಮೇಲೆ ತನ್ನ ಎರಡು ಕಾಲನ್ನು ಇಟ್ಟು ಸೊಪ್ಪು ತಿನ್ನುತ್ತಿರುವ ವಿಡಿಯೋ(Video) ಸಖತ್ ವೈರಲ್(Viral) ಆಗಿದೆ. ಉಡುಪಿಯ ಪೆರ್ಣಂಕಿಲ ದೇವಸ್ಥಾನ(Pernankila Temple)ದಲ್ಲಿ ಕುಟುಂಬವೊಂದು ಅಜದಾನ ಕೊಟ್ಟಿತ್ತು. ಸದ್ಯ, ಆ ಎರಡು ಆಡುಗಳನ್ನು ನೀಲಾವರ ಗೋಶಾಲೆಯಲ್ಲಿ ಸಾಕಲಾಗುತ್ತಿದೆ. 

ಪೇಜಾವರ ಶ್ರೀಗಳು ನೀಲಾವರ ಗೋಶಾಲೆಯಲ್ಲಿ ಇದ್ದಾಗ, ಆಡುಗಳಿಗೆ ಆಹಾರ ತಿನ್ನಿಸುತ್ತಾ ಅವುಗಳನ್ನು ಮುದ್ದು ಮಾಡುತ್ತಾರೆ.  ಶ್ರೀಗಳು, ಇತ್ತೀಚಿಗೆ ನೀಲಾವರ ಗೋಶಾಲೆಗೆ ಬಂದಾಗ, ಆಡಿಗೆ ಸೊಪ್ಪು ನೀಡಿದಾಗ ಆಡು ಪೇಜಾವರ ಶ್ರೀಗಳ ಎದೆ ಮೇಲೆ ತನ್ನ ಎರಡು ಕಾಲನಿಟ್ಟು, ಸೊಪ್ಪು ತಿನ್ನುತ್ತಿತ್ತು,  ಇದನ್ನು ಸ್ಥಳದಲ್ಲೇ ಇದ್ದ ಭಕ್ತರೊಬ್ಬರು ತಮ್ಮ ಮೊಬೈಲ್‌(Mobile)ನಿಂದ ಸೆರೆ ಹಿಡಿದು ಸಾಮಾಜಿಕ, ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋ ನೋಡಿದವರು ಶ್ರೀಗಳ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನೀಲಾವರ ಗೋಶಾಲೆಗೆ ಬಂದಾಗೆಲ್ಲ ಈ ಆಡುಗಳನ್ನು ಹುಡುಕಿಕೊಂಡು ಹೋಗಿ ಶ್ರೀಪಾದರು ಸೊಪ್ಪು ತಿನ್ನಿಸುತ್ತಾರೆ. ಆಡುಗಳು ಕೂಡ ಅಷ್ಟೇ ಸಲಿಗೆಯಿಂದ ಓಡೋಡಿ ಬಂದು ಇವರ ಕೈಯಿಂದ ಸೊಪ್ಪು ತಿನ್ನಲು ಹಾತೊರೆಯುತ್ತವೆ. ಇದೇ ರೀತಿ ವಿಶ್ವ ಪ್ರಸನ್ನ ತೀರ್ಥರು(Vishwa prasanna teertha) ಕೃಷ್ಣಮಠ(Krishna Mutt)ದಲ್ಲಿ ತಮ್ಮ ಪರ್ಯಾಯದ ಅವಧಿಯಲ್ಲಿ ಕುದುರೆ(Horse)ಗಳನ್ನು ಸಾಕಿದ್ದರು. ಪ್ರತಿದಿನ ಅವುಗಳಿಗೆ ಮೇವು ಕೊಟ್ಟು ಖುಷಿಪಡುತ್ತಿದ್ದರು. ಕೆಲವೊಮ್ಮೆ ಕುದುರೆಗಳ ಬೆನ್ನೇರಿ ನಗರ ಸಂಚಾರ ನಡೆಸುತ್ತಿದ್ದರು. ಅಂತಯೇ ಗಾಯಾಳು ಪಕ್ಷಿಗಳನ್ನು ಕೂಡ ಮಠದಲ್ಲಿ ಶ್ರೀಪಾದರು ಸಾಕಿದ ಉದಾಹರಣೆಗಳಿವೆ.

ಅನಾಥ ಗೋವುಗಳ ಆಪ್ತರಕ್ಷಕ:

ಕರಾವಳಿ ಭಾಗದಲ್ಲಿ ದಿನಬೆಳಗಾದರೆ ಅಕ್ರಮ ಗೋಸಾಗಾಟದ ಪ್ರಕರಣಗಳು ವರದಿಯಾಗುತ್ತವೆ. ಇಂತಹ ಅನೇಕ ಪ್ರಕರಣಗಳಲ್ಲಿ ಗಾಯಾಳು ಹಸುಗಳನ್ನು ಕಾರ್ಯಕರ್ತರು ರಕ್ಷಿಸುತ್ತಾರೆ. ರಕ್ಷಿಸಿದ ಹಸುಗಳು ನೇರ ಪೊಲೀಸ್ ಠಾಣೆ ತಲುಪಿದರೆ, ಬಹುತೇಕ ಪೊಲೀಸರು ಈ ಹಸುಗಳನ್ನು ತಂದು ನೀಲಾವರ ಗೋಶಾಲೆಯಲ್ಲಿ ಬಿಡುತ್ತಾರೆ. ಈ ರೀತಿ ಬಂದ ನೂರಾರು ಗಾಯಾಳು ಹಸುಗಳನ್ನು ಪೇಜಾವರ ಶ್ರೀಗಳು ಸಾಕಿ ಸಲಹುತ್ತಿದ್ದಾರೆ. ನೀಲಾವರದ ಗೋಶಾಲೆಯಲ್ಲಿ 1200ಕ್ಕೂ ಅಧಿಕ ಗೋವುಗಳಿವೆ. ಯಾವುದೇ ಹಸು ಹಾಲು ನೀಡದಿದ್ದರೂ, ಇವುಗಳ ಲಾಲನೆ ಪಾಲನೆಯಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ. ನೀಲಾವರ ಮಾತ್ರವಲ್ಲದೆ ಕೊಡವೂರು, ಹೆಬ್ರಿ ಭಾಗದಲ್ಲೂ ಪೇಜಾವರ ಶ್ರೀಗಳು ಗೋಶಾಲೆ ನಡೆಸುತ್ತಿದ್ದಾರೆ.

ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ : ಏನೇನಿದೆ ಸ್ಪೆಷಲ್..?

ಶ್ರೀಗಳು ನೀಲಾವರ ಗೋಶಾಲೆಗೆ ಬಂದರೆ ಸಾಕು, ಹಸುಗಳು ಓಡೋಡಿ ಬರುತ್ತವೆ. ಅವರು ಕುಳಿತುಕೊಳ್ಳುವುದನ್ನೆ ಕಾದು, ಅವರಿಗೆ ಮುತ್ತಿಕುತ್ತವೆ. ನೀಲಾವರ ಗೋಶಾಲೆಗೆ ಭೇಟಿ ನೀಡಿದವರಿಗೆಲ್ಲ ಈ ಒಂದು ಅಪರೂಪದ ದೃಶ್ಯ ಕಾಣುವ ಸೌಭಾಗ್ಯ ಸಿಗುತ್ತದೆ. ಪ್ರಾಕೃತಿಕ ರೀತಿಯಲ್ಲಿ ಹಾವುಗಳನ್ನು ಕೂಡ ಹಿಡಿಯುವುದರಲ್ಲಿ ಶ್ರೀಗಳು ಸಿದ್ದಹಸ್ತರು. ಹಾವುಗಳಿಗೆ ಯಾವುದೇ ಹಾನಿಯಾಗದಂತೆ, ಸರಳವಾಗಿ ಹಿಡಿದು ಸುರಕ್ಷಿತವಾಗಿ ಬಿಟ್ಟು ಶ್ರೀಗಳು ಅನೇಕ ಬಾರಿ ಚಮತ್ಕಾರ ತೋರಿಸಿದ್ದಾರೆ.

click me!