ವಿದೇಶಿಯರ ಸ್ವರ್ಗವೀಗ ಭಣ..ಭಣ...: ವಿರೂಪಾಪುರ ಗಡ್ಡೆ ಇನ್ನು ನೆನಪು ಮಾತ್ರ!

By Kannadaprabha News  |  First Published Mar 4, 2020, 10:52 AM IST

ಜಿಲ್ಲಾಡಳಿತದ ನೇತೃತ್ವದಲ್ಲಿ ಕಾರ್ಯಾಚರಣೆ | ನೆಲಕ್ಕುರುಳಿದ ಕೋಟ್ಯಂತರ ವೆಚ್ಚದ ಕಟ್ಟಡಗಳು | 5ಕ್ಕೂ ಹೆಚ್ಚು ಮನೆಗಳ ತೆರವು| ವಿರೂಪಾಪುರ ಗಡ್ಡೆಯ ಅಕ್ರಮ ರೆಸಾರ್ಟ್ ನೆಲಸಮ| 


ರಾಮಮೂರ್ತಿ ನವಲಿ 

ಗಂಗಾವತಿ(ಮಾ.04): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಆರಂಭಗೊಂಡಿತು. ಮಧ್ಯಾಹ್ನದ ಹೊತ್ತಿಗೆ ಬಹುತೇಕ ರೆಸಾರ್ಟ್‌ಗಳು ನೆಲಸಮವಾಗಿದ್ದು, ಇದರೊಂದಿಗೆ ಬಹು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆದ ಹೋರಾಟ ಅಂತ್ಯಗೊಂಡಂತಾಗಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಫೆ. 11 ರಂದು ಸುಪ್ರಿಂಕೋರ್ಟ್ ಆಕ್ರಮ ರೆಸಾರ್ಟ್‌ಗಳ ತೆರವಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಅಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಬೆಳಗ್ಗೆ 6 ಗಂಟೆಯಿಂದ ಪ್ರಾರಂಭಗೊಂಡ ರೆಸಾರ್ಟ್‌ಗಳ ತೆರವು ಕಾರ್ಯ ಮಧ್ಯಾಹ್ನ ಹೊತ್ತಿಗೆ ಮುಕ್ತಾಯವಾಯಿತು. 

8 ತಂಡ ರಚನೆ: 

ರೆಸಾರ್ಟ್ ತೆರವಿಗೆ ಜಿಲ್ಲಾಡಳಿತ 8 ತಂಡ ರಚಿಸಿತ್ತು. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಮಾರುತಿ, ಸಹಾಯಕ ಆಯುಕ್ತರಾದ ಸಿ.ಡಿ. ಗೀತಾ, ಹಂಪಿ ಪ್ರಾದಿಕಾರದ ಆಯುಕ್ತ ಲೋಕೇಶ, ಗಂಗಾವತಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ, ಕಾರಟಗಿ ತಹಸೀಲ್ದಾರ್ ಕವಿತಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. 

ಯುದ್ದೋಪಾದಿಯಲ್ಲಿ ತೆರವು ಕಾರ್ಯ: 

ಗಂಗಾವತಿ, ಕೊಪ್ಪಳ ಸೇರಿದಂತೆ ಹೊಸಪೇಟೆ ನಗರಗಳಿಂದ ಬಂದಿದ್ದ ಜೆಸಿಬಿ, ಹಿಟಾಚಿ ಯಂತ್ರಗಳು ಕಾರ್ಯಾಚರಣೆ ಕೈಗೊಂಡವು. 8 ಜೆಸಿಬಿ, 2 ಹಿಟಾಚಿ ಯಂತ್ರಗಳು ಸೇರಿದಂತೆ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಲಾಗಿತ್ತು. ರೆಸಾರ್ಟ್‌ಗಳಲ್ಲಿರುವ ಬೆಲೆ ಬಾಳುವ ವಸ್ತು ತೆರವುಗೊಳಿಸಿಬೇಕೆಂಬ ಸೂಚನೆ ನೀಡಿದ್ದರೂ ರೆಸಾರ್ಟ್ ಮಾಲೀಕರು ನಿರ್ಲಕ್ಷ್ಯ ಮಾಡಿದ್ದರು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಸ್ವತಃ ತಾವೇ ಬೆಲೆ ಬಾಳುವ ವಸ್ತುಗಳನ್ನು ತೆಗೆದು ಹಾಕಿಕೊಂಡರು. 

ಮೂರು ರೆಸಾರ್ಟ್‌ಗಳಿಗೆ ತಡೆಯಾಜ್ಞೆ: 

ವಿರೂಪಾಪುರಗಡ್ಡೆಯಲ್ಲಿರುವ ಮೂರು ರೆಸಾರ್ಟ್‌ಗಳಿಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಆ ರೆಸಾರ್ಟ್‌ಗಳ ತೆರವು ಕಾರ್ಯ ನಡೆಯಲಿಲ್ಲ. ನರಗಿಲ್ಲಾ ರೆಸಾರ್ಟ್, ಲಾಫಿಂಗ್ ಬುದ್ದಾ ರೆಸಾರ್ಟ್ ಮತ್ತು ಲಕ್ಷ್ಮೀ ಗೋಲ್ಡನ್ ಬೀಚ್ ರೆಸಾರ್ಟ್‌ಗಳಿಗೆ ತಡೆಯಾಜ್ಞೆ ಇರುವುದರಿಂದ ಈ ರೆಸಾರ್ಟ್‌ಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಲಿಲ್ಲ. ಸುಮಾರು 15 ದೊಡ್ಡ ರೆಸಾರ್ಟ್‌ಗಳು ಸೇರಿದಂತೆ ಸಣ್ಣ-ಪುಟ್ಟ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆಯಿತು. 

144ನೇ ಕಲಂ ಜಾರಿ: 

ರೆಸಾರ್ಟ್‌ಗಳ ತೆರವು ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ 144ನೇ ಕಲಂ ಜಾರಿ ಮಾಡಲಾಗಿತ್ತು. ಆನೆಗೊಂದಿ ಮಾರ್ಗದ ಹಳೇ ಸೇತುವೆಯಿಂದ ವಿರೂಪಾಪುರಗಡ್ಡೆ ಮಾರ್ಗದ ಹಂಪಿ ತುಂಗಭದ್ರಾ ನದಿ ತೀರದವರೆಗೂ 144ನೇ ಕಲಂ ಜಾರಿ ಮಾಡಲಾಗಿತ್ತು. ಹಳೇ ಸೇತುವೆ ಬಳಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. 

200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ: 

ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೊಪ್ಪಳ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿರಾರಪುರಗಡ್ಡೆಯಲ್ಲಿರುವ 15ಕ್ಕೂ ಹೆಚ್ಚು ರೆಸಾರ್ಟ್‌ಗರ್ಳನ್ನು ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಈ ಮಾಲೀಕರಿಗೆ ಪರ್ಯಾಯವಾಗಿ ಹಂಪಿ ಸಮೀಪವಿರುವ ಕಡ್ಡಿ ರಾಂಪುರ ಬಳಿ ಇವರಿಗೆ ನೀಡಲಾಗುತ್ತದೆ. ಮೂರು ರೆಸಾರ್ಟ್‌ಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಅವಕಾಶ ನೀಡಿದೆ ಎಂದು ಕೊಪ್ಪಳ ಡಿಸಿ ಸುನೀಲ್ ಕುಮಾರ ಹೇಳಿದ್ದಾರೆ.  

ವಿದೇಶಿಯರ ಸ್ವರ್ಗವೀಗ ಭಣ..ಭಣ...

ವಿದೇಶಿಯರ ಸ್ವರ್ಗ ಮತ್ತು ಸ್ವದೇಶಿ ಪ್ರವಾಸಿಗರ ಮೋಜಿನ ತಾಣ ಇನ್ನು ನೆನಪು ಮಾತ್ರ. ಹತ್ತು ಹಲವು ದೇಶಗಳ ಪ್ರವಾಸದ ಅನುಭವ ನೀಡುತ್ತಿದ್ದ ದೇಶಿಯ ತಾಣ ನೆಲಸಮಗೊಂಡಿದೆ. ಸದಾ ವಿದೇಶಿ ಪ್ರವಾಸಿಗರಿಂದಲೇ ಗಿಜಿಗುಡುತ್ತಿದ್ದ ಆನೆಗೊಂದಿ ಬಳಿಯ ವಿರುಪಾಪುರಗಡ್ಡೆಯಲ್ಲಿ ಈಗ ಬಣ ಬಣ. ಗಂಟುಮೂಟೆ ಕಟ್ಟಿಕೊಂಡು ವಿದೇಶಿಯರು ಜಾಗ ಖಾಲಿ ಮಾಡಿದರೆ, ದೇಶಿಯರು ತಮ್ಮ ಸಾಮಗ್ರಿಗಳನ್ನು ಕಣ್ಣೀರಿಡುತ್ತಲೇ ಖಾಲಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. 

ಇದು ಆನೆಗೊಂದಿ ಬಳಿಯ ವಿರುಪಾಪುರಗಡ್ಡೆಯಲ್ಲಿ ಮಂಗಳವಾರ ಬೆಳಗಿನ ಜಾವ ಜೆಸಿಬಿಗಳು ಅಬ್ಬರಿಸಿದ ಬಳಿಕ ಕಂಡುಬಂದ ದೃಶ್ಯ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಷರತ್ತುಬದ್ಧ ಪ್ರದೇಶದಲ್ಲಿ ತಲೆ ಎತ್ತಿದ್ದ ಅಕ್ರಮ ರೆಸಾರ್ಟ್‌ಗಳು ಹಾಗೂ ಜನವಸತಿಯನ್ನು ಸುಪ್ರೀಂಕೋರ್ಟ್ ತಡೆಯಾಜ್ಞೆ ತೆರವಾಗಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಪ್ಪಳ ಜಿಲ್ಲಾಡಳಿತ ಜಂಟಿಯಾಗಿ ಕಾರ್ಯಾಚರಣೆ ಮಾಡಿ ತೆರವು ಮಾಡಲಾಯಿತು. 

ವಿದೇಶಿಯರ ಸ್ವರ್ಗ:

ಹಂಪಿ ಆನೆಗೊಂದಿ ಪ್ರದೇಶಕ್ಕೆ ಬರುತ್ತಿದ್ದ ವಿದೇಶಿ ಪ್ರವಾಸಿಗರು ಐತಿಹಾಸಿಕ ಪ್ರದೇಶಗಳಲ್ಲಿ ಎಷ್ಟು ಹೊತ್ತು ಸುತ್ತಾಡುತ್ತಿದ್ದರೋ ಗೊತ್ತಿಲ್ಲ. ಆದರೆ, ಅವರು ಬಹುತೇಕ ಸಮಯವನ್ನು ವಿರುಪಾರುಗಡ್ಡೆಯಲ್ಲಿಯೇ ಕಳೆಯುತ್ತಿದ್ದರು. ಇದೊಂದು ರೀತಿಯಲ್ಲಿ ವಿದೇಶಿಯರ ಸ್ವರ್ಗ ಎಂದೇ ಖ್ಯಾತಿಯಾಗಿದ್ದರಿಂದ ಇಲ್ಲಿಯ ಹೋಟೆಲ್ ಕೊಠಡಿಗಳು ಖಾಲಿ ಇರುವುದನ್ನು ನೋಡಿಕೊಂಡು ವಿದೇಶಿಯರು ತಮ್ಮ ಪ್ರವಾಸ ಪ್ರಾರಂಭಿಸುತ್ತಿದ್ದರು. ಅಷ್ಟು ಫೇಮಸ್ ಆಗಿದ್ದವು ಇಲ್ಲಿನ ರೆಸಾರ್ಟ್‌ಗಳು. 

ಇಸ್ರೇಲ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಥಾಲಿ ಇಲ್ಲಿ ಜನಪ್ರಿಯವಾಗಿತ್ತು. ವಿಮಾನಯಾನಕ್ಕೆ ಟಿಕೆಟ್, ನಾನಾ ದೇಶದ ವಿಶೇಷತೆಯುಳ್ಳ ಸ್ಪಾ, ದೇಶಿಯ ಮಸಾಜ್, ವಿದೇಶಿಯ ಮಸಾಜ್ ಸಹ ಇಲ್ಲಿ ಲಭ್ಯವಿತ್ತು. ಅಷ್ಟೇ ಅಲ್ಲಾ, ಲಾಸ್ ಎಂಜಲಿಸ್‌ನಲ್ಲಿ ರಿಲೀಸ್ ಆಗುತ್ತಿದ್ದ ಸಿನಿಮಾಗಳು ಇಲ್ಲಿಯ ಹೋಟೆಲ್‌ಗಳ ಹೋಮ್ ಥೇಟರ್‌ನಲ್ಲಿ ರಿಲೀಸ್ ಆಗುತ್ತಿದ್ದವು. ಇದಕ್ಕಾಗಿಯೇ ಇದನ್ನು ವಿದೇಶಿಯರ ಸ್ವರ್ಗ ಎಂದೇ ಕರೆಯಲಾಗುತ್ತಿತ್ತು. 

ಭಾರತೀಯರಿಗೆ ಪ್ರವೇಶವಿಲ್ಲ: 

2005ಕ್ಕೂ ಮುನ್ನ ಇಲ್ಲಿಯ ರೆಸಾರ್ಟ್‌ಗಳ ಮುಂದೆ ಭಾರತೀಯರಿಗೆ ಪ್ರವೇಶ ಇಲ್ಲ ಎನ್ನುವ ಬೋರ್ಡ್ ಸಹ ನೇತು ಹಾಕಲಾಗಿರುತ್ತಿತ್ತು. ಕೇವಲ ವಿದೇಶಿಯರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುವ ರೆಸಾರ್ಟ್‌ಗಳು ಸ್ಥಳೀಯರನ್ನು ಕೊನೆಯ ದರ್ಜೆಯ ಪ್ರವಾಸಿಗರನ್ನಾಗಿ ಕಾಣುತ್ತಿದ್ದವು. ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಈ ಬೋರ್ಡ್‌ಗಳು ಕಾಣೆಯಾದವು. ಆದರೆ, ನಂತರವೂ ದೇಶಿಯ ಪ್ರವಾಸಿಗರನ್ನು ಕೀಳಾಗಿಯೇ ಕಾಣುವ ಪರಿಪಾಟ ಇದ್ದೇ ಇತ್ತು. 

ಸ್ವದೇಶಿಯರ ಮೋಜಿನ ತಾಣ:

ಮೊದ ಮೊದಲು ದೇಶಿಯರಿಗೆ ಪ್ರವೇಶ ನೀಡದ ರೆಸಾರ್ಟ್ ನಂತರ ಪ್ರವೇಶ ನೀಡಲು ಪ್ರಾರಂಭಿಸಿದವು. ಪದೇ ಪದೆ ಮಾಧ್ಯಮದಲ್ಲಿ ವರದಿಗಳು ಪ್ರಸಾರವಾಗಿದ್ದರಿಂದ ರೆಸಾರ್ಟ್ ಮಾಲೀಕರಿಗೆ ಮಾರಕವಾಗಬೇಕಾಗಿರುವುದು ವರವಾಗಿ ಪರಿಣಮಿಸಿತು. ದೇಶದ ಕೊಲ್ಕತ್ತಾ, ಮುಂಬೈ, ಹೈದ್ರಾಬಾದ್, ದೆಹಲಿ ಹೀಗೆ ದೇಶದ ಮಹಾನಗರದ ಪ್ರವಾಸಿಗರು ವಿಕೇಂಡ್‌ಗೆ ಇಲ್ಲಿಗೆ ಬರಲಾರಂಭಿಸಿದರು. ಆರು ತಿಂಗಳ ಕಾಲ ವಿದೇಶಿಯರ ತಾಣವಾಗಿದ್ದರೆ ಉಳಿದ ಅವಧಿಯಲ್ಲಿ ಇದು ಸ್ವದೇಶಿಯರ ಮೋಜಿನ ತಾಣವಾಗಿ ಹೊರಹೊಮ್ಮಿತು. 

ರೇವ್ ಪಾರ್ಟಿ: 

ಇಲ್ಲಿ ರೇವ್ ಪಾರ್ಟಿ ಸಹ ನಡೆಯುತ್ತಿದ್ದವು. ತುಂಗಭದ್ರಾ ನದಿಯ ದಡದಲ್ಲಿ ಭಾರತ ಹುಣ್ಣಿಮೆಯಂದು ಇಲ್ಲಿ ಭೂಲೋಕದ ಸ್ವರ್ಗವೇ ಸೃಷ್ಟಿಯಾಗುತ್ತಿತ್ತು. ಮಧ್ಯರಾತ್ರಿ ಮದ್ಯದ ಅಮಲಿನಲ್ಲಿ ಬೆತ್ತಲೆ ನೃತ್ಯವೂ ನಡೆಯುತ್ತಿತ್ತು ಎನ್ನುವ ಆರೋಪವೂ ಇಲ್ಲಿ ಬಲವಾಗಿ ಕೇಳಿಬರುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಅದು ಕಣ್ಮರೆಯಾಯಿತು. 

30 ವರ್ಷಗಳ ಇತಿಹಾಸ: 

ಆಂಧ್ರ ಮೂಲದವರು 1960ರ ಸಾಲಿನಲ್ಲಿ ತುಂಗಭದ್ರಾ ನಡುಗಡ್ಡೆಯಲ್ಲಿ ಉಳುಮೆ ಮಾಡುತ್ತಿದ್ದರು. ಇದರಲ್ಲಿ ಒಂದಿಷ್ಟು ಒತ್ತುವರಿ ಪ್ರದೇಶಗಳು ಆಗಿದ್ದವು. ಆನೆಗೊಂದಿ ಮತ್ತು ಹಂಪಿಗೆ ಪ್ರವಾಸಿಗರು ಬರುತ್ತಿದ್ದರಿಂದ ಕ್ರಮೇಣ ಹೋಟೆಲ್‌ಗಳು ತಲೆ ಎತ್ತಿದ್ದವು. ಹೊಸಪೇಟೆಯಲ್ಲಿ ದುಬಾರಿ ಹೋಟೆಲ್ ಬಿಸಿ ಅನುಭವಿಸಿದ ವಿದೇಶಿ ಪ್ರವಾಸಿಗರು ಈ ಗುಡಿಸಲು ಹೋಟೆಲ್‌ನಲ್ಲಿ ತಂಗಲು ಪ್ರಾರಂಭಿಸಿದರು. ಇದರ ರುಚಿ ನೋಡಿದ ಚಿಕ್ಕ ಚಿಕ್ಕ ಹೋಟೆಲ್ ಮಾಲೀಕರು ಬೃಹತ್ತಾದ ರೆಸಾರ್ಟ್‌ಗಳನ್ನು ಪ್ರಾರಂಭಿಸಿದರು. ಪರಿಣಾಮ ಅಲ್ಲೊಂದು ಲೋಕವೇ ಸೃಷ್ಟಿಯಾಯಿತು. ತೆರವು ಕಾರ್ಯಾಚರಣೆ: ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಪ್ಪಳ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ, ವಿರುಪಾಪುರಗಡ್ಡೆಯಲ್ಲಿನ ರೆಸಾರ್ಟ್‌ಗಳನ್ನು ನೆಲಸಮ ಮಾಡಿದ್ದಾರೆ. ಈಗ ಸ್ಥಳೀಯರು ವಾಸಿಸುತ್ತಿರುವ ಮನೆಗಳ ತೆರವಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ.

ಗಮನ ಸೆಳೆದಿದ್ದ ಕನ್ನಡಪ್ರಭ 

ಭಾರತೀಯರಿಗೆ ಇಲ್ಲಿ ಪ್ರವೇಶ ಇಲ್ಲ ಎನ್ನುವ ತಲೆಬರಹದಡಿ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇದು ರಾಜ್ಯ ಸರ್ಕಾರದ ಗಮನವನ್ನಷ್ಟೇ ಅಲ್ಲಾ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮಂತ್ರಿಯ ಗಮನ ಸೆಳೆದಿತ್ತು. ಕೂಡಲೇ ವಿಶೇಷ ತಂಡವನ್ನು ರಚನೆ ಮಾಡಿ, ಇಲ್ಲಿಗೆ ಕಳುಹಿಸಿಕೊಡಲಾಗಿತ್ತು. ಆ ವರ್ಷದ ಭಾರತ ಹುಣ್ಣಿಮೆಗೆ ರಾತ್ರಿಯ ರೇವ್ ಪಾರ್ಟಿಗೆ ಬ್ರೇಕ್ ಬಿದ್ದಿತ್ತು.
 

click me!