ಮಸೀದಿ ಲೆಟರ್‌ ಹೆಡ್‌ ಬಳಕೆ: ಮುಸ್ಲಿಂ ಸಮಾಜದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

By Kannadaprabha NewsFirst Published Feb 24, 2020, 11:26 AM IST
Highlights

ಮೂವರಿಗೆ ಚಾಕು ಇರಿತ, ಮೂವರ ಬಂಧನ, 16 ಜನರ ವಿರುದ್ಧ ಪ್ರಕರಣ ದಾಖಲು| ಹಾವೇರಿ ಜಿಲ್ಲೆಯ ಸಚಣೂರು ಪಟ್ಟಣದಲ್ಲಿ ನಡೆದ ಘಟನೆ| 16 ಜನರ ಮೇಲೆ ಪ್ರಕರಣ ದಾಖಲು| ಮೂವರ ಬಂಧನ| 

ಸವಣೂರು(ಫೆ.24): ಮಸೀದಿಯೊಂದರ ಲೆಟರ್‌ ಹೆಡ್‌ ಬಳಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಕುರಿತು ಮುಸ್ಲಿಂ ಸಮಾಜದ ಎರಡು ಗುಂಪುಗಳ ಮಧ್ಯೆ ಶನಿವಾರ ರಾತ್ರಿ ಮಾರಾಮಾರಿ ನಡೆದು ಮೂವರಿಗೆ ಚಾಕು ಇರಿದ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಮಲ್ಲಿಕರೆಹಾನ ನಾನಾಮಲ್ಲಿಕ್‌, ಮೌಲಾಲಿ ಗುತ್ತೆವಾಲೆ, ಮಹ್ಮದಜಾಫರ್‌ ಖಂದೀಲವಾಲೆ ಹಲ್ಲೆಗೊಳಗಾಗಿದ್ದಾರೆ. ಮಲ್ಲಿಕರೆಹಾನ ಸವಣೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹ್ಮದಜಾಫರ್‌ ಮತ್ತು ಮೌಲಾಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಪಟ್ಟಣದ ಖಾಸಿಂಖಾನಿ ಮಸೀದಿಯ ಮುತವಲ್ಲಿ ಹಾಗೂ ಜಮಾತ್‌ನ ಹಿರಿಯರು ಸೇರಿ ರಿಯಾಜ್‌ಅಹ್ಮದ್‌ ಚೌಧರಿ ಅವರ ಅಂಗಡಿಗೆ ಹೋಗಿ ನಮ್ಮ ಮಸೀದಿಯ ಲೇಟರ್‌ ಪ್ಯಾಡ್‌ ಮೇಲೆ ಸೀಲ್‌ ಮತ್ತು ಸಹಿ ಮಾಡಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ರಿಯಾಜ್‌ಅಹ್ಮದ ಚೌಧರಿ ಗುಂಪು ಇನ್ನೊಂದು ಗುಂಪಿನ ಮಲ್ಲಿಕರೆಹಾನ ನಾನಾಮಲ್ಲಿಕ್‌, ಮೌಲಾಲಿ ಗುತ್ತೆವಾಲೆ, ಮಹ್ಮದ್‌ಜಾಫರ್‌ ಖಂದೀಲವಾಲೆ ಅವರಿಗೆ ಹೊಟ್ಟೆ, ಭುಜಕ್ಕೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಸವಣೂರು ಪೊಲೀಸ್‌ ಠಾಣೆಯಲ್ಲಿ ಎರಡು ಗುಂಪಿನಿಂದ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಮಲ್ಲಿಕರೆಹಾನ ನಾನಾಮಲ್ಲಿಕ ಅವರು ರಿಯಾಜ್‌ಅಹ್ಮದ್‌ ಚೌಧರಿ ಸೇರಿದಂತೆ ಅವರ ಗುಂಪಿನ ಜಾಕೀರ್‌ಅಹ್ಮದ್‌ ಫರಾಶ, ಮಹ್ಮದ್‌ಉಮರ ಅಳ್ನಾವರ, ಅಬುಸೈಯ್ಯದ್‌ ಮಲ್ಲೂರಿ, ಆಸೀಫ್‌ ಚೌಧರಿ, ಆರೀಫ್‌ ಚೌಧರಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾಜ್‌ಅಹ್ಮದ ಚೌಧರಿ, ಜೀಶಾನಖಾನ್‌ ಪಠಾಣ, ಅಮ್ಜದ್‌ಖಾನ್‌ ಪಠಾಣ, ಸಲಿಂ ಬನ್ನೂರ, ವಾಹಿದ್‌ ಫರಾಶ, ಭಾಷಾ ದುಖಾಂದಾರ, ಮಲ್ಲಿಕರೆಹಾನ ನಾನಾಮಲ್ಲಿಕ, ಮೌಲಾಲಿ ಗುತ್ತೆವಾಲೆ, ಮಹ್ಮದ್‌ಜಾಫರ್‌ ಖಂದೀಲವಾಲೆ, ನನ್ನೇಸಾಬ್‌ ಕಿಸ್ಮತಗಾರ, ಲಾಲ ಖಿಸ್ಮತಗಾರ, ಅಬ್ದುಲನಾಸೀರ್‌ ಖಿಸ್ಮತಗಾರ, ಖಾಜಾಮೋದಿನ ಖಿಸ್ಮತಗಾರ, ಮುಕ್ತಿಯಾರ ಖಂದೀಲವಾಲೆ, ಮೊಹ್ಮದ್‌ ಚೋಪದಾರ, ಅಬ್ದುಲ್‌ ಚೋಪದಾರ, ಖಾಜಾ ಬಂಕಾಪುರ ಸೇರಿದಂತೆ ಒಟ್ಟು 16 ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಘಟನೆ ಸಂಬಂಧ ರಿಯಾಜಅಹ್ಮದ ಚೌಧರಿ, ಆಸೀಫ್‌ ಚೌಧರಿ, ಆರೀಫ್‌ ಚೌಧರಿ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
 

click me!