ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದೇವಾಲಯ ಹಾಗೂ ಮಸೀದಿ ನಡುವಿನ ಚರಂಡಿ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದು ಲಾಠಿ ಪ್ರಹಾರ ನಡೆದಿದೆ.
ಸಾಗರ [ಮಾ.16]: ದೇವಸ್ಥಾನ ಹಾಗೂ ಮಸೀದಿಗಳ ನಡುವೆ ಮುಚ್ಚಿರುವ ಚರಂಡಿ ತೆಗೆಸುವ ಸಂಬಂಧ ಎರಡು ಕೋಮುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ಕಲ್ಲುತೂರಾಟ ನಡೆದ ಪರಿಣಾಮ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.
ಪಟ್ಟಣದ ಮಹಾಗಣಪತಿ ದೇವಸ್ಥಾನ ಹಾಗೂ ಜಾಮಿಯಾ ಮಸೀದಿ ನಡುವೆ ಮುಚ್ಚಿರುವ ಚರಂಡಿ ತೆಗೆಸುವ ಸಂಬಂಧ ಭಾನುವಾರ ಬೆಳಗ್ಗೆ ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಶಾಸಕ ಎಚ್.ಹಾಲಪ್ಪ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು.
ಶೀಘ್ರ ರಾಜಕೀಯದಲ್ಲೊಂದು ಮಹತ್ವದ ಬದಲಾವಣೆ : ಬೇಳೂರು ಕೊಟ್ಟರು ಸುಳಿವು...
ಬಳಿಕ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆಗಿರುವ ತೀರ್ಮಾನವನ್ನು ಹಿಂದೂ ಸಮಾಜದ ಪ್ರಮುಖರಾದ ಅ.ಪು.ನಾರಾಯಣಪ್ಪ ನೆರೆದವರಿಗೆ ತಿಳಿಸುತ್ತಿದ್ದ ಸಂದರ್ಭದಲ್ಲಿ ಮಸೀದಿ ಸಮೀಪ ನೆರೆದಿದ್ದವರಿಂದ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಬಂದಿದೆ ಎನ್ನಲಾಗಿದ್ದು ಇದಕ್ಕೆ ಪ್ರತಿಯಾಗಿ ಹಿಂದೂ ಸಮಾಜದ ಪ್ರಮುಖರು ಮತ್ತು ಯುವಕರು ‘ಭಾರತ್ ಮಾತಾಕೀ ಜೈ, ಜೈ ಶ್ರೀರಾಮ್’ ಇನ್ನಿತರೆ ಘೋಷಣೆ ಕೂಗಿದ್ದಾರೆ.
ಇದರಿಂದ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಿ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಒಂದು ಕಲ್ಲು ಸರ್ಕಲ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯ್‌್ಕ ಅವರ ಹಣೆಗೆ ಬಡಿದರೆ, ಇನ್ನೊಂದು ಕಲ್ಲು ಸಂಘ ಪರಿವಾರದ ಪ್ರಮುಖರಾದ ಅ.ಪು.ನಾರಾಯಣಪ್ಪ ಅವರ ಎದೆಗೆ ಬಡಿದಿದೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ನೆರೆದ ಗುಂಪನ್ನು ಚದುರಿಸಿದ್ದಾರೆ. ಬಳಿಕ ಮುಸ್ಲಿಂ ಮುಖಂಡರು ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಲ್ಲ, ಧರ್ಮದ ಪರವಾಗಿ ಘೋಷಣೆ ಕೂಗಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದು ಎರಡೂ ಕಡೆಯಿಂದ ಗಲಾಟೆ ನಿಂತಿದೆ.