
ಮೈಸೂರು: 2019ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾ.ರಾ. ನಂದೀಶ್ ಅವರು ಸುಮಲತಾ ಅವರು ಗೆಲ್ಲುತ್ತಾರೆಂದು 10 ಲಕ್ಷ ರೂಪಾಯಿಗಳನ್ನು ಬೆಟ್ಟಿಂಗ್ ಕಟ್ಟಿದ್ದರು, ಆ ಬೆಟ್ಟಿಂಗ್ ಹಣವನ್ನು ಮೈಸೂರಿನ ಅವರ ಕಚೇರಿಯಲ್ಲಿ ಪಡೆದುಕೊಂಡರು ಎನ್ನುವ ಆರೋಪವನ್ನು ಹೂಟಗಳ್ಳಿ ಗ್ರಾಮದ ಜಿ.ಟಿ.ದೇವೇಗೌಡರ ಬೆಂಬಲಿಗ ಸುರೇಶ್ ಕೆಲವು ದಿನಗಳ ಹಿಂದೆ ಆರೋಪಿಸಿದ್ದು ಜೆಡಿಎಸ್ ಪಕ್ಷದಲ್ಲಿ ಕಿಡಿ ಎಬ್ಬಿಸಿದೆ.
ಸಾಲಿಗ್ರಾಮ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕುಪ್ಪಹಳ್ಳಿ ಸೋಮಶೇಖರ್ ಪ್ರತಿಕ್ರಿಯಿಸಿ ಹೌದು ನಾನೇ ಹತ್ತು ಲಕ್ಷ ರೂಪಾಯಿಗಳನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಸಾ.ರಾ.ನಂದೀಶ್ ಗೆ ಕೊಟ್ಟಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದು ಈ ಬಗ್ಗೆ ಜೆಡಿಎಸ್ ಎರಡು ಬಣಗಳ( ಜಿ ಟಿ ದೇವೇಗೌಡ, ಹರೀಶ್ ಗೌಡ ಮತ್ತು ಸಾ.ರಾ, ಮಹೇಶ್ ಬಣ) ಮುಖಂಡರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದು ಬೆಟ್ಟಿಂಗ್ ವಿಚಾರದಲ್ಲಿ ಸತ್ಯದ ಬಗ್ಗೆ ಪ್ರಮಾಣಿಕರಿಸಲು ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ ಆಣೆ ಪ್ರಮಾಣಕ್ಕೆ ಒತ್ತಾಯಿಸಿ ಬಹಿರಂಗವಾಗಿ ಮಾತನಾಡಿದ್ದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾ.ರಾ.ನಂದೀಶ್ ಗುಂಪು ಮತ್ತು 10:45 ಗಂಟೆಗೆ ಸುರೇಶ್ ಕಡೆಯವರು ಸುಮಾರು ನೂರಾರು ಜನರು ಕಪ್ಪಡಿ ಕ್ಷೇತ್ರಕ್ಕೆ ಬರುವ ಹೆಬ್ಬಾಳಿನ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮಸ್ಥರು ತಡೆಗಟ್ಟಿದರು. ಹೂಟಗಳ್ಳಿ ಸುರೇಶ್ ಮತ್ತು ಕುಪ್ಪಳ್ಳಿ ಸೋಮಶೇಖರ್ ಅವರು ಬೇರೆ ರಸ್ತೆಯಲ್ಲಿ ಕಪ್ಪಡಿ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ವಾಪಸ್ಸು ಬರಬೇಕಾದರೆ ಅವನ ಕಾರನ್ನು ಅಡ್ಡಗಟ್ಟಲು ಹೆಬ್ಬಾಳು ಮುಖ್ಯದ್ವಾರದಲ್ಲಿ ಸಾ.ರಾ.ನಂದೀಶ್ ಬೆಂಬಲಿಗರು ಅಡ್ಡಗಟ್ಟಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ಕಾರನ್ನು ನಿಲ್ಲಿಸದೆ ಹೋಗುವಾಗ ಅವರ ಕಾರಿನ ಮೇಲೆ ಸಾ.ರಾ.ನಂದೀಶ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ. ಕುಪ್ಪಹಳ್ಳಿ ಸೋಮಶೇಖರ್ ರವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡು ತಳ್ಳಾಟ ,ನೂಕಾಟ ಮಾಡಿದರು. ನಂತರ ಮತ್ತೊಂದು ಕಾರನ್ನು ಅಡ್ಡಗಟ್ಟಿ ಕೀ ಕಿತ್ತುಕೊಂಡಿದ್ದರುಸ್ಥಳಕ್ಕೆ ಬಂದ ಪೊಲೀಸರು ಗುಂಪಿನಿಂದ ಕುಪ್ಪಹಳ್ಳಿ ಸೋಮಶೇಖರವರನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಕೆ.ಆರ್.ನಗರದ ಕಡೆ ಕಳುಹಿಸಿದರು.
ಇದಾದ ನಂತರ ಸಾ.ರಾ.ನಂದೀಶ್ ಹಾಗೂ ಅವರ ಬೆಂಬಲಿಗರು ಕಪ್ಪಡಿ ಕ್ಷೇತ್ರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಪ್ಪಡಿ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ, ಜಯ ಘೋಷಣೆಗಳನ್ನು ಕೂಗಿದರು. ಹಾಗೂ ಕುಪ್ಪಹಳ್ಳಿ ಸೋಮಶೇಖರ್ ಹಾಗೂ ಹೂಟಗಳ್ಳಿ ಸುರೇಶ್ ರವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸಾ.ರಾ.ನಂದೀಶ್ ಮಾತನಾಡಿ ನಾನು ಯಾವುದೇ ಬೆಟ್ಟಿಂಗ್ ನಲ್ಲಿ ಭಾಗಿಯಾಗಿಲ್ಲ. ಆದರೆ ಕುಪ್ಪಹಳ್ಳಿ ಸೋಮಶೇಖರ್, ಹೂಟಗಳ್ಳಿ ಸುರೇಶ್ ಹಾಗೂ ಇತರರು ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ.ಇದರಿಂದ ನನ್ನ ಮತ್ತು ನನ್ನ ಕುಟುಂಬದವರ ಮನಸ್ಸಿಗೆ ಸಾಕಷ್ಟು ಆಘಾತವಾಗಿ ಆರೋಗ್ಯ ಸಹ ಹಾಳಾಗಿದೆ. ನಮ್ಮ ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಿಸುವ ಪ್ರಯತ್ನವಿದು ಎಂದರು.
ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಬೆಟ್ಟಿಂಗ್ ಆಡುವುದಕ್ಕೆ ನನ್ನ ಸಹಮತ ಇಲ್ಲ ಮತ್ತು ಕಾನೂನಿನಲ್ಲಿ ಅವಕಾಶ ಇಲ್ಲ. ಕೆಲವರು ಮಾಧ್ಯಮಗಳಲ್ಲಿಯೇ ಬೆಟ್ಟಿಂಗ್ ಆಡಿದ್ದೇವೆ ಎಂದು ಹೇಳಿದರು ಸಹ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅವರನ್ನು ಬಂಧಿಸಿಲ್ಲ,ಇಷ್ಟೆಲ್ಲಕ್ಕೂ ಪೊಲೀಸರ ವೈಫಲ್ಯ ಕಾರಣ ಎಂದು ಕಿಡಿ ಕಾರಿದರು.
ನಮ್ಮ ಅಣ್ಣ ಮತ್ತು ನನ್ನ ರಾಜಕೀಯ ಯಶಸ್ಸನ್ನು ಸಹಿಸದೆ ನಮ್ಮ ವಿರೋಧಿಗಳು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಅಣ್ಣ ಸಾರಾ ಮಹೇಶ್ ಏನು ಹೇಳಿದ್ದಾರೊ, ಯಾವ ನಿರ್ದೇಶನ ಕೊಟ್ಟಿದ್ದಾರೋ ಅದೇ ರೀತಿ ನಡೆದುಕೊಂಡಿದ್ದೇನೆ. ನನ್ನ ತಾಲೂಕಿನ ಜನತೆಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಬದ್ಧತೆ. ಹೆಬ್ಬಾಳಿನ ಸ್ಥಳೀಯರು ಯಾವುದೇ ಕಾರಣಕ್ಕೂ ಆಣೆ ಪ್ರಮಾಣ ಬೇಡ ಎಂದು ಹೇಳಿದರು. ಸುರೇಶ ದೂರವಾಣಿ ಕರೆ ಮಾಡಿ ನನ್ನದು ತಪ್ಪಾಗಿದೆ ಎಂದು ಹೇಳಿದನು. ಅದನ್ನು ಮಾಧ್ಯಮದ ಮುಂದೆ ಹೇಳು ಎಂದು ಹೇಳಿದೆ. ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ ಎಂದರು.
ಕಪ್ಪಡಿಯಿಂದ ವಾಪಸ್ ಬರುವಾಗ ಪುನಃ ಹೆಬ್ಬಾಳು ಗ್ರಾಮದ ಮುಖ್ಯ ದ್ವಾರದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಾರಾ ಮಹೇಶ್ ಮತ್ತು ನಂದೀಶ್ ಪರವಾಗಿ ಘೋಷಣೆಗಳನ್ನು ಕೂಗಿದರು.
ಎರಡು ಕಡೆಯವರನ್ನು ಪ್ರತ್ಯೇಕವಾಗಿ ಗುದ್ದುಗೆ ದರ್ಶನಕ್ಕೆ ಪೊಲೀಸರು ಕಳುಹಿಸಿದರಲ್ಲದೇ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೋಲಿಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಸೂಕ್ತ ಬಂದೋ ಬಸ್ತ್ ಏರ್ಪಡಿಸಿದರು. ಎರಡು ಕಡೆಯವರು ಜೆಡಿಎಸ್ ಮುಖಂಡರುಗಳೆ ಆಗಿದ್ದು ಯಾವುದೇ ಆಣೆ ಪ್ರಮಾಣ ಮಾಡದೆ ಸ್ಥಳೀಯರ ವಿರೋಧದಿಂದ ಕೇವಲ ಪೂಜೆ ಸಲ್ಲಿಸುವ ಮೂಲಕ ತೆರಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಅಧ್ಯಕ್ಷ ಹಂಪಾಪುರ ಸುರೇಶ್, ಹೆಬ್ಬಾಳು ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಬಾಲು, ಮುಖಂಡರಾದ ಹೆಬ್ಬಾಳು ಸಂತೋಷ್, ಸುಜಯ್ ಗೌಡ, ಕಪ್ಪಡಿಹರೀಶ್, ಮಧು, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಅಯ್ಯರುದ್ರೇಶ್, ಅನೀಫ್ ಗೌಡ, ಶ್ರೀಧರ, ಮಹೇಶ್, ರಾಜೇಗೌಡ, ಕುಚೇಲ, ಮಹೇಶ್, ಮುಂಡೂರು ಶಿವು, ಸಾಲಿಗ್ರಾಮ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.