ಭದ್ರಾಮೇಲ್ದಂಡೆ ಯೋಜನೆಯಿಂದ 37 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆ ಘೋಷಿಸಿದ ಶಾಸಕ

Published : Jun 06, 2026, 07:34 AM IST
Holalkere

ಸಾರಾಂಶ

ಶಾಸಕ ಡಾ.ಎಂ.ಚಂದ್ರಪ್ಪ ಅವರು ಭದ್ರಾಮೇಲ್ದಂಡೆ ಯೋಜನೆಯಡಿ ಹೊಳಲ್ಕೆರೆ ತಾಲೂಕಿನ 37 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ದೊಗ್ಗನಾಳ್ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ತಾಲೂಕಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು.

ಚಿತ್ರದುರ್ಗ: ಭದ್ರಾಮೇಲ್ದಂಡೆ ಯೋಜನೆಯಿಂದ ನೀರು ತಂದು ತಾಲೂಕಿನಲ್ಲಿರುವ 37 ಕೆರೆಗಳನ್ನು ತುಂಬಿಸುವ ದೊಡ್ಡ ಯೋಜನೆ ಕೈಗೆತ್ತಿಕೊಂಡಿದ್ದೇನೆ. ಇದರಿಂದ ಎಲ್ಲಾ ಕೆರೆಗಳು ತುಂಬಿ ಸಮಗ್ರ ನೀರಾವರಿಯಾಗಲಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ದೊಗ್ಗನಾಳ್ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ದೊಗ್ಗನಾಳ್ ಗ್ರಾಮದಿಂದ ಆರ್.ನುಲೇನೂರುವರೆಗೂ ನೂತನ ಸಿಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಟ

ಹತ್ತಾರು ವರ್ಷಗಳ ಕಾಲ ಸಾಕಿ ಸಲಹಿದೆ ಅಡಿಕೆ ಮರ ಒಣಗಿದರೆ ರೈತರಿಗೆ ಎಷ್ಟು ನೋವಾಗುತ್ತದೆನ್ನುವುದನ್ನು ಅರ್ಥಮಾಡಿಕೊಂಡಿದ್ದೇನೆ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಕಾಲದಿಂದಲೂ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರೆಸಿ ಗುದ್ದಲಿ ಪೂಜೆ ಮಾಡಿಸಿದ್ದೆ. ಆಗ 5300 ಕೋಟಿ ರು. ಗಳನ್ನು ನೀರಾವರಿ ಯೋಜನೆಗೆ ಖರ್ಚು ಮಾಡಬೇಕಿತ್ತು. ಈಗ 23 ಸಾವಿರ ಕೋಟಿ ರು.ಗಳಷ್ಟಾಗಿದೆ. ವರ್ಷದಿಂದ ವರ್ಷಕ್ಕೆ ಯೋಜನೆಯ ವೆಚ್ಚ ಜಾಸ್ತಿಯಾಗುತ್ತಿದೆ ಎಂದು ಹೇಳಿದರು.

ಕೆರೆಗೆ ಕಾಂಕ್ರಿಟ್ ವಾಲ್ ಹಾಕಿಸಿ ಏರಿ ರಿಪೇರಿಗಾಗಿ 2 ಕೋಟಿ ರು.ಗಳನ್ನು ಮಂಜೂರು ಮಾಡಿದ್ದೇನೆ. ಮೊದಲು ಅಭಿವೃದ್ಧಿಪಡಿಸಿ ನಂತರ ನೀರು ತುಂಬಿಸಲಾಗುವುದು.

ವಾಣಿವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರು

ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಅದಕ್ಕಾಗಿ 367 ಕೋಟಿ ರು. ಖರ್ಚು ಮಾಡಲಾಗಿದೆ. ರೈತರ ತೋಟಗಳು ಒಣಗಬಾರದೆಂದು 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಬದ್ಧತೆ ಜವಾಬ್ದಾರಿಯಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಇರುವಾಗ ಹತ್ತಾರು ಜನಕ್ಕೆ ಒಳ್ಳೆಯದು ಮಾಡಬೇಕೆಂಬುದು ನನ್ನ ಆಸೆ ಎಂದರು.

ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ತಿಪ್ಪೇಸ್ವಾಮಿ, ಅಜ್ಜಯ್ಯ, ನುಲೇನೂರು ಶೇಖರ್, ಪ್ರವೀಣ್ ರಮೇಶ್, ರಾಜಶೇಖರ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ
ಹಲವು ವರ್ಷಗಳ ನಂತರ MPM ಬಡಾವಣೆಗೆ KSRTC ಬಸ್‌ ಭಾಗ್ಯ; ಮಾರ್ಗ, ವೇಳಾಪಟ್ಟಿ ಹೀಗಿದೆ