
ಉಡುಪಿ(ಜೂ.09): ಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಉಡುಪಿ ಜಿಲ್ಲೆಯಲ್ಲಿ ಚಚ್‌ರ್‍ಗಳು ಮತ್ತು ಮಸೀದಿಗಳು ಸಾರ್ವಜನಿಕರಿಗೆ ತೆರೆಯಲಿಲ್ಲ. ಕೊಲ್ಲೂರು ಮೂಕಾಂಬಿಕಾ ಸೇರಿದಂತೆ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರ ಭೇಟಿಗೆ ಅವಕಾಶ ನೀಡಿದ್ದವು. ಆದರೆ ಉಡುಪಿ ಕೃಷ್ಣಮಠ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿಲ್ಲ.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇನ್ನೂ ಕೆಲವು ದಿನ ಚಚ್‌ರ್ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ಆಯಾ ಧರ್ಮದ ಧಾರ್ಮಿಕ ಮುಖಂಡರು ತೀರ್ಮಾನಿಸಿದ್ದಾರೆ.
ಲಾಕ್‌ಡೌನ್ ನಂತರ ಧರ್ಮಸ್ಥಳದಲ್ಲಿ ಹೀಗಿತ್ತು ಮೊದಲ ದಿನ: ಅನ್ನದಾನ ಆರಂಭ
ಜೂನ್ 13ರ ನಂತರ ಧರ್ಮಗುರುಗಳ ಸಭೆ ಕರೆದು, ಚಚ್‌ರ್‍ಗಳನ್ನು ಯಾವಾಗ ತೆರೆಯಬಹುದು ಎಂಬ ಬಗ್ಗೆ ತೀರ್ಮಾನಿಸಲು ಧರ್ಮಪ್ರಾಂತ ನಿರ್ಧರಿಸಿದೆ. ಅದೇ ರೀತಿ ಮಸೀದಿಗಳನ್ನು ತೆರೆಯುವ ಬಗ್ಗೆ ಆಯಾ ಮಸೀದಿಗಳ ಆಡಳಿತ ಮಂಡಳಿಗೆ ಮುಸ್ಲಿಂ ಜಮಾತ್ ಅಧಿಕಾರ ನೀಡಿದೆ.
ದೇವಳಗಳಲ್ಲಿ ಭಕ್ತರು ವಿರಳ
ಆದರೆ ಕೊಲ್ಲೂರು ಮುಕಾಂಬಿಕಾ ದೇವಾಲಯ, ಆನೆಗುಡ್ಡೆ, ಕುಂಬಾಶಿ, ಅಂಬಲಪಾಡಿ, ಕಡಿಯಾಳಿ ಮೊದಲಾದ ದೇವಾಲಯಗಳು ಸೋಮವಾರ ಭಕ್ತರ ದರ್ಶನಕ್ಕೆ ಅವಕಾಶ ನೀಡಿದ್ದವು. ಆದರೆ ಮೊದಲ ದಿನ ಭಕ್ತರಿಂದ ಅಂತಹ ಉತ್ಸಾಹವೇನೂ ವ್ಯಕ್ತವಾಗಿಲ್ಲ. ದೇವಾಲಯಗಳಲ್ಲಿ ಊಟ, ಪ್ರಸಾದ, ಸೇವೆ ಇತ್ಯಾದಿಗಳಿಗೆ ಅವಕಾಶ ಇಲ್ಲದೆ ಇರುವುದರಿಂದ, ಬೆರಳೆಣಿಕೆಯ ಭಕ್ತರಷ್ಟೇ ದೇವರ ದರ್ಶನ ಮಾಡಿ ಹಿಂತಿರುಗಿದರು.
ಬಿಕೋ ಎನ್ನುತ್ತಿದ್ದ ಮಾಲ್
ಮಣಿಪಾಲದ ಕೆನರಾ ಮಾಲ್‌ನಲ್ಲಿರುವ ಬಟ್ಟೆಯಂಗಡಿ, ರೆಸ್ಟೊರೆಂಟ್‌ಗಳು ಸೋಮವಾರ ತೆರೆದಿದ್ದವು. ಆದರೆ ಗ್ರಾಹಕರಿಲ್ಲದೆ ಮಧ್ಯಾಹ್ನದ ನಂತರ ಮುಚ್ಚಿದವು. ಮಣಿಪಾಲದ ಎಲ್ಲ ವ್ಯವಹಾರ ಅಲ್ಲಿನ ವಿವಿಯ ವಿದ್ಯಾರ್ಥಿಗಳನ್ನು ಅವಲಂಬಿಸಿದೆ. ಆದರೆ ಲಾಕ್‌ಡೌನ್ ನಿಮಿತ್ತ ಮಣಿಪಾಲ ವಿ.ವಿ. ಬಂದ್ ಆಗಿದ್ದು, ವಿದ್ಯಾರ್ಥಿಗಳು ಊರಿಗೆ ಹೋಗಿದ್ದಾರೆ. ಆದ್ದರಿಂದ ಮಣಿಪಾಲದ ವ್ಯವಹಾರವೆಲ್ಲವೂ ಸ್ಥಗಿತಗೊಂಡಿದೆ.
ಮಲ್ಪೆಯಲ್ಲಿ ಪ್ರವಾಸಿಗರಿಲ್ಲ
ನಿಷೇಧ ತೆರವಾಗಿದ್ದರೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಲ್ಪೆ ಬೀಚ್‌ಗೆ ಸೋಮವಾರ ಜನರು ಭೇಟಿ ನೀಡಲಿಲ್ಲ. ಸಾಮಾನ್ಯ ದಿನಗಳಲ್ಲಿ ಬೀಚ್‌ಗೆ ಜನ ಸಾಗರವೇ ಹರಿದುಬರುತ್ತಿತ್ತು. ಮಳೆಗಾಲದಲ್ಲಿ ಮತ್ತೆ ನಾಲ್ಕು ತಿಂಗಳು ಮಲ್ಪೆ ಸಮುದ್ರ ತೀರಕ್ಕೆ ಮತ್ತು ಸಮೀಪದ ಸೇಂಟ್ ಮೆರಿಸ್ ದ್ವೀಪಕ್ಕೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗುತ್ತದೆ.