ಗೋವುಗಳಿಗೆ ಮೇವು ಒದಗಿಸುವುದು ನಿಜಕ್ಕೂ ಪುಣ್ಯದ ಕೆಲಸ. ಇದನ್ನು ನಮ್ಮ ಸ್ವಂತ ತಾಯಿಗೆ ಮಾಡಿದ ಸೇವೆ ಎಂದು ಭಾವಿಸಬೇಕು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಗೋವಿಗಾಗಿ ಮೇವು ಅಭಿಯಾನ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.09): ಗೋವಿಗೆ ಮೇವು ನೀಡುವುದು ಪವಿತ್ರ ಕೆಲಸ. ಸಾರ್ವಜನಿಕರೆಲ್ಲರೂ ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಬಾಪೂಜಿ ಆಯುರ್ವೇದಿಕ್ ಕಾಲೇಜು ಆವರಣದಲ್ಲಿ ಸೋಮವಾರ ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದು ಪರಿಷತ್, ಗೋ ಸಂರಕ್ಷಣಾ ವೇದಿಕೆ, ವಾಸವಿ ಪಬ್ಲಿಕ್ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋವಿಗಾಗಿ ಮೇವು ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡಾವಣೆಗಳಲ್ಲಿ ನಿವೇಶನಗಳು ಖಾಲಿ ಇದ್ದರೆ, ಅದರ ಮಾಲೀಕರ ಮನವೊಲಿಸಿ ಅಲ್ಲಿ ಮೇವನ್ನು ಬೆಳೆದು, ಬೆಳೆದ ಮೇವನ್ನು ಮೇವಿನ ಬ್ಯಾಂಕಿಗೆ ನೀಡುವ ಮೂಲಕ ಸೇವೆ ಸಲ್ಲಿಸಬಹುದಾಗಿದೆ. ಈ ರೀತಿ ಗೋವುಗಳಿಗೆ ಮೇವು ಒದಗಿಸುವುದು ನಿಜಕ್ಕೂ ಪುಣ್ಯದ ಕೆಲಸ. ಇದನ್ನು ನಮ್ಮ ಸ್ವಂತ ತಾಯಿಗೆ ಮಾಡಿದ ಸೇವೆ ಎಂದು ಭಾವಿಸಬೇಕು ಎಂದರು. ಗೋ ತಾಯಿಗೆ ಮೇವನ್ನು ಒದಗಿಸಿದರೆ ನಮ್ಮ ಕುಟುಂಬಕ್ಕೂ ಶ್ರೇಯಸ್ಸು ಲಭ್ಯವಾಗುತ್ತದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾರ್ವಜನಿಕರು ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗುರುವಾರದಿಂದ ಎಲ್ಲಾ ಆರೋಗ್ಯ ಸೇವೆ ಮೆಗ್ಗಾನ್ ಆಸ್ಪತ್ರೆಯಲ್ಲೆ ಲಭ್ಯ
ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್ ಮಾತನಾಡಿ, ಗೋವು ಮತ್ತು ಭೂಮಿಗೆ ಭಾರತದಲ್ಲಿ ಹಿಂದಿನ ಕಾಲದಿಂದಲೂ ಪೂಜ್ಯಸ್ಥಾನ ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವೆರಡೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯಬಾರದು ಎಂದರು. ಗೋವು ಮತ್ತು ಬ್ರಾಹ್ಮಣ ಶ್ರೇಷ್ಠ ಎಂದು ಶಾಸ್ತ್ರಗಳು ಹೇಳಿವೆ. ಇವೆರಡೂ ಕೂಡ ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕಾಗಿ ಅರ್ಪಿತವಾಗಿವೆ. ಗೋ ದಾನಕ್ಕೆ ನಮ್ಮ ದೇಶದಲ್ಲಿ ಅತ್ಯಂತ ಮಹತ್ವವಾದ ಸ್ಥಾನವಿದೆ. ಹಿಂದಿನ ಕಾಲದಲ್ಲಿ ಪೂರ್ವಿಕರು ಗೋಮಾಳಕ್ಕಾಗಿಯೇ ಜಮೀನುಗಳನ್ನು ದಾನ ಮಾಡುತ್ತಿದ್ದರು. ಭೂಮಿ ಮತ್ತು ಗೋವನ್ನು ಸಂರಕ್ಷಿಸಿದರೆ ದೇಶದ ವಿಕಾಸವಾಗುತ್ತದೆ ಎಂದು ಹೇಳಿದರು.
ವಾಸವಿ ಶಾಲೆಯ ಎಸ್. ಕೆ. ಶೇಷಾಚಲ ಮಾತನಾಡಿ, ಪ್ರತಿ ಮನೆಯಲ್ಲೂ ಒಂದು ಹೂವಿನ ಕುಂಡದಲ್ಲಾದರು ಮೇವನ್ನು ಬೆಳೆದರೆ ಒಂದು ಹಸುವಿಗೆ ಮೇವು ಒದಗಿಸಬಹುದು. ಮೇವನ್ನು ಪ್ರತಿಯೊಬ್ಬರೂ ಮನೆಯ ಟೆರೇಸ್ ಮೇಲೆ ಬೆಳೆದರೆ ಅದನ್ನು ಸಂಗ್ರಹಿಸಿ ಗೋವುಗಳಿಗೆ ಒದಗಿಸುವ ಯೋಜನೆ ಮಾಡಲಾಗಿದೆ. ಖಾಲಿ ಜಾಗಗಳಲ್ಲಿ ಮೇವು ಬೆಳೆಸಿದರೆ ಶಿವಮೊಗ್ಗದಲ್ಲಿ ಹಸಿರು ಕ್ರಾಂತಿಯಾಗುವುದರ ಜೊತೆಗೆ ಗೋವುಗಳಿಗೆ ಮೇವು ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಬಾಪೂಜಿ ಸಂಸ್ಥೆಯ ಎಂ.ಪಿ. ಆರಾಧ್ಯ, ವಿಶ್ವಹಿಂದು ಪರಿಷತ್‌ನ ರಮೇಶ್ ಬಾಬು, ನಮ್ಮ ಕನಸಿನ ಶಿವಮೊಗ್ಗದ ಮಥುರಾ ಎನ್. ಗೋಪಿನಾಥ್, ಬಿ.ಆರ್.ಮಧುಸೂದನ್, ಸುರೇಖಾ ಮುರಳೀಧರ್, ಅ.ನಾ.ವಿಜಯೇಂದ್ರ ರಾವ್ ಮೊದಲಾದವರಿದ್ದರು.