88 ವರ್ಷಗಳ ಬಳಿಕ ಪ್ರಥಮ ಬಾರಿಗೆ ಭರ್ತಿಯಾದ ಕೋಟೆನಾಡಿನ ಅಕ್ಷಯಪಾತ್ರೆ ವಾಣಿ ವಿಲಾಸ ಜಲಾಶಯ

By Gowthami KFirst Published Aug 12, 2022, 8:58 PM IST
Highlights

ಮೈ ತುಂಬಿ ತುಳುಕುತ್ತಿದೆ ಕೋಟೆನಾಡಿನ ಅಕ್ಷಯಪಾತ್ರೆ ವಾಣಿ ವಿಲಾಸ ಸಾಗರ ಜಲಾಶಯ. ಸುಮಾರು 88 ವರ್ಷಗಳ ಬಳಿಕ ಪ್ರಥಮ ಬಾರಿಗೆ ತುಂಬುತ್ತಿರುವ VVS ಡ್ಯಾಂ. 127 ಅಡಿ ನೀರಿರುವ VVS ಡ್ಯಾಂ ನೋಡಲು ಪ್ರವಾಸಿಗರ ದಂಡು.

ವರದಿ: ಕಿರಣ್ ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.12): ಅದೊಂದು ಬರಪೀಡಿತ ಪ್ರದೇಶ, ಅಲ್ಲಿ ಯಾವುದೇ ನದಿ ಮೂಲಗಳಿಲ್ಲ‌. ಹೀಗಾಗಿ ಬರದನಾಡಿನ ಜನರ ಬವಣೆ ನೀಗಿಸಲು ಮೈಸೂರಿನ ಕೃಷ್ಣ‌‌ ರಾಜ‌ ಒಡೆಯರು ಕಟ್ಟಿಸಿದ್ದ  ಡ್ಯಾಂ ಸತತ 88 ವರ್ಷಗಳ ಬಳಿಕ ಡ್ಯಾಂ ಭರ್ತಿಯಾಗಿದೆ. ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಶುರುವಾಗಿದೆ‌.  ಮಲೆನಾಡನ್ನೇ ನಾಚಿಸುವಂತೆ ಹಚ್ಚ ಹಸಿರನ್ನುಟ್ಟು ಕಂಗೊಳಿಸ್ತಿರೊ ಬೆಟ್ಟ ಗುಡ್ಡಗಳು. ಗಾಳಿಯೊಂದಿಗೆ ನರ್ತನವಾಡ್ತಾ  ಆರ್ಭಟಿಸುತ್ತಿರೊ ನೀರಿನ ಅಲೆಗಳು. ಈ ಆಕರ್ಷಕ‌ ದೃಶ್ಯಗಳನ್ನು ಕಣ್ತುಂಬಿಕೊಳ್ತಿರೋ ಪ್ರವಾಸಿಗರು. ಈ ಕ್ಷಣಗಳಿಗೆ ಸಾಕ್ಷಿಯಾಗಿದ್ದು,ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ. ಮಲೆನಾಡಿನಿಂದ ಹರಿಯುವ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಮೈಸೂರು ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿಯ ಸವಿನನಪಿಗಾಗಿ  ಈ ಅಣೆಕಟ್ಟನ್ನು ಕಟ್ಟಿಸಿದ್ರು. ಮುಂದೊಂದು ದಿನ ಈ ಅಣೆಕಟ್ಟು  ಬರದನಾಡು ಚಿತ್ರದುರ್ಗ‌ ಜಿಲ್ಲೆಯ  ಬವಣೆ ನೀಗಿಸಲಿದ್ದೂ, ಸುಮಾರು 25 ಸಾವಿರ ಹೆಕ್ಟೇರ್ ಜಮೀನಿಗೆ ನೀರೊದಗಿಸುವ ಮುಂದಾಲೋಚನೆಯಿಂದ ಈ ಅಣೆಕಟ್ಟನ್ನು ಮಹಾರಾಜರು ಕಟ್ಟಿಸಿದ್ರು. 

ಆದ್ರೆ ಅಣೆಕಟ್ಟು ಕಟ್ಟಿದಾಗಿನಿಂದ 1934ರಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿತ್ತು. ಆದ್ರೆ ಸತತ 88 ವರ್ಷಗಳ ಬಳಿಕ ಮತ್ತೆ 127 ಅಡಿಗಳಷ್ಟು ನೀರು ಭರ್ತಿಯಾಗಿದೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ನೀರು  ಜಲಾಶಯಕ್ಕೆ ಹರಿದು ಬಂದಿದ್ದು, ಕೋಡಿ ಬೀಳಲು ಕೇವಲ‌ ಮೂರು ಅಡಿ ಮಾತ್ರ‌ ಬಾಕಿ ಇದೆ. ಹೀಗಾಗಿ ಈ ಭಾಗದ ರೈತರ‌ ಮೊಗದಲ್ಲಿ ಮಂದಹಾಸ ಮೂಡಿದ್ದೂ, ಬಹುದಿನಗಳ ಕನಸು  ನನಸಾಗುವ ಐತಿಹಾಸಿಕ ಕ್ಷಣಕ್ಕಾಗಿ  ಜಾತಕ ಪಕ್ಷಿಗಳಂತೆ ಈ ಭಾಗದ ರೈತರು ಕಾದಿದ್ದಾರೆ.

 

ಜಿಟಿಜಿಟಿ ಮಳೆಗೆ ಬೆಳೆಗಳು ಹಾನಿ: ರೈತರಿಗೆ ಸಂಕಷ್ಟ

ಇನ್ನು ವಾಣಿವಿಲಾಸ ಸಾಗರಕ್ಕೆ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರ್ತಿದ್ದೂ, ಗಾಳಿಯೊಂದಿಗೆ‌ ಬೆರೆತ ನೀರಿನ ಅಲೆಗಳ ಅಬ್ಬರ ಜೋರಾಗಿದೆ. ಎತ್ತರಕ್ಕೆ ಹಾರಿ, ರಭಸವಾಗಿ ದುಮ್ಮಿಕ್ಕಿತ್ತಿರೋ ಅಲೆಗಳ ನೃತ್ಯ ಪ್ರವಾಸಿಗರನ್ನು   ಆಕರ್ಷಿಸುತ್ತಿದೆ. ಹೀಗಾಗಿ ಪ್ರತಿದಿನ ಈ ಸುಂದರ ದೃಶ್ಯಗಳನ್ನು ತಮ್ಮ ಕಣ್ಣು ಗಳಲ್ಲಿ ಸೆರೆ‌ ಹಿಡಿಯಲು ಜನ ಸಾಗರವೇ ಡ್ಯಾಂನತ್ತ ಹರಿದು ಬರ್ತಿದೆ. ಬರದನಾಡಲ್ಲಿ ಈ ಅದ್ಭುತ ರಸದೌತಣವನ್ನು ಸವಿಯುತ್ತಾ, ಕುಟುಂಬ ಹಾಗೂ ಸ್ನೇಹಿತರೊಂದಿಗೆ  ಪ್ರವಾಸಿಗರು ಫುಲ್‌ ಎಂಜಾಯ್ ಮಾಡ್ತಿದ್ದಾರೆ.

ಹಾಸನ: ರಸ್ತೆ ನಿರ್ಮಾಣಕ್ಕೆ ಹಾಕಿದ ಮಣ್ಣು ರೈತರ ಹೊಲಕ್ಕೆ: ನೂರಾರು ಎಕರೆ ಬೆಳೆ ನಾಶ

ಒಟ್ಟಾರೆ  ವಾಣಿ ವಿಲಾಸ ಸಾಗರ ಜಲಾಶಯ ಸತತ 88 ವರ್ಷಗಳ‌ ಬಳಿಕ‌ ಭರ್ತಿಯಾಗಿದೆ‌. ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಶುರುವಾಗಿದೆ. ಹೀಗಾಗಿ ಮೈಸೂರು ಒಡೆಯರ‌ ಶ್ರಮ‌ ಸಾರ್ಥಕ ಎನಿಸಿದ್ದೂ, ಕೋಟೆನಾಡಿನ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

click me!