ಚಿತ್ರದುರ್ಗ: ಕತ್ತಿಗೆ ಗ್ರ್ಯಾನೈಟ್ ಕಲ್ಲು ಬಿದ್ದು CUDA ಮಾಜಿ ಅಧ್ಯಕ್ಷರ ಪುತ್ರ ಸಾವು, ಕುಟುಂಬದಿಂದ ಮಗನ ಕಣ್ಣುದಾನ

Published : Jun 18, 2026, 07:16 PM IST
Chitradurga warehouse accident

ಸಾರಾಂಶ

ಚಿತ್ರದುರ್ಗದ ಮಾರ್ಬಲ್ಸ್ ಗೋದಾಮಿನಲ್ಲಿ ಗ್ರ್ಯಾನೈಟ್ ಬಿಲ್ಲೆ ಕುತ್ತಿಗೆ ಮೇಲೆ ಬಿದ್ದು ರಾಣಾ ಪ್ರತಾಪ್ ಸಿಂಹ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ಈ ದುಃಖದ ನಡುವೆಯೂ, ಮೃತನ ಕುಟುಂಬವು ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದ ಹೊರವಲಯದ ಹೊಳಲ್ಕೆರೆ ರಸ್ತೆಯಲ್ಲಿರುವ ಮಾರ್ಬಲ್ಸ್ ಗೋದಾಮಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಲಾರಿಯಿಂದ ಗ್ರ್ಯಾನೈಟ್‌ಗಳನ್ನು ಗೋದಾಮಿಗೆ ಶಿಫ್ಟ್ ಮಾಡುವ ವೇಳೆ ಭಾರಿ ಗಾತ್ರದ ಗ್ರ್ಯಾನೈಟ್ ಬಿಲ್ಲೆಯೊಂದು ಆಕಸ್ಮಿಕವಾಗಿ ಕುತ್ತಿಗೆಯ ಮೇಲೆ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅವರ ಪುತ್ರ ರಾಣಾ ಪ್ರತಾಪ್ ಸಿಂಹ (30) ಮೃತಪಟ್ಟ ದುರ್ದೈವಿ ಯುವಕ. ಈ ಹಠಾತ್ ದುರಂತವು ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರ ವಲಯದಲ್ಲಿ ಭಾರೀ ಆಘಾತ ಮೂಡಿಸಿದೆ.

ದುರಂತ ಸಂಭವಿಸಿದ್ದು ಹೇಗೆ?

ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ 'ದೇವಿ ಮಾರ್ಬಲ್ಸ್ ಮತ್ತು ಗ್ರ್ಯಾನೈಟ್ಸ್' ಗೋದಾಮಿನಲ್ಲಿ ಈ ದುರ್ಘಟನೆ ನಡೆದಿದೆ. ಗೋದಾಮಿಗೆ ಹೊಸದಾಗಿ ಬಂದಿದ್ದ ಗ್ರ್ಯಾನೈಟ್ ಲೋಡ್ ಅನ್ನು ಕಾರ್ಮಿಕರು ಅನ್ಲೋಡ್ ಮಾಡಿ ಒಳಗೆ ಜೋಡಿಸಿ ಇಡುತ್ತಿದ್ದರು. ಈ ವೇಳೆ ರಾಣಾ ಪ್ರತಾಪ್ ಸಿಂಹ ಅವರು ಗೋದಾಮಿನ ಒಳಗಿನ ಗೋಡೆಯೊಂದರ ಪಕ್ಕದಲ್ಲಿ ನಿಂತು ಗಮನಿಸುತ್ತಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್, ಗ್ರ್ಯಾನೈಟ್ ಬಿಲ್ಲೆಗಳನ್ನು ಸ್ಥಳಾಂತರಿಸುವಾಗ ನಿಯಂತ್ರಣ ತಪ್ಪಿ ಭಾರಿ ತೂಕದ ಗ್ರ್ಯಾನೈಟ್ ಕಲ್ಲು ನೇರವಾಗಿ ಗೋಡೆ ಬಳಿ ನಿಂತಿದ್ದ ಪ್ರತಾಪ್ ಅವರ ಕುತ್ತಿಗೆಯ ಭಾಗಕ್ಕೆ ಬಿದ್ದಿದೆ. ಕಲ್ಲಿನ ಭೀಕರ ಹೊಡೆತ ಹಾಗೂ ತೂಕಕ್ಕೆ ಕುತ್ತಿಗೆಯ ಭಾಗ ತೀವ್ರವಾಗಿ ಜಜ್ಜಲ್ಪಟ್ಟು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಆದರ್ಶ ಯುವಕನಾಗಿದ್ದ ಪ್ರತಾಪ್ ಅವರ ಹಠಾತ್ ಸಾವು ತಂದೆ ತಿಪ್ಪೇಸ್ವಾಮಿ ಹಾಗೂ ಇಡೀ ಕುಟುಂಬವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ಮಗನನ್ನು ಕಳೆದುಕೊಂಡು ಕಣ್ಣೀರುಡುತ್ತಿದ್ದ ಸಂದರ್ಭದಲ್ಲೂ ಕುಟುಂಬಸ್ಥರು ಅತ್ಯಂತ ಶ್ಲಾಘನೀಯ ಹಾಗೂ ಸಾರ್ಥಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ನಮ್ಮ ಮಗ ಇನ್ನಿಲ್ಲವಾದರೂ ಅವನ ಕಣ್ಣುಗಳು ಮತ್ತೊಬ್ಬರಿಗೆ ಬೆಳಕಾಗಲಿ ಎಂಬ ಉದಾತ್ತ ಚಿಂತನೆಯಿಂದ ಮೃತ ರಾಣಾ ಪ್ರತಾಪ್ ಸಿಂಹ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆ ಸಂಭವಿಸುತ್ತಿದ್ದಂತೆ ವಿಷಯ ತಿಳಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗೋದಾಮಿನಲ್ಲಿ ಸುರಕ್ಷತಾ ಕ್ರಮಗಳ ಲೋಪದೋಷಗಳಿದ್ದವೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಉದ್ಯೋಗ ಅವಕಾಶ, ಪರೀಕ್ಷೆಯಿಲ್ಲದೆ ನೇರ ಸಂದರ್ಶನ!
ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ 8000 ಕಿ.ಮೀ ದೂರ ಪ್ರಯಾಣಿಸಿ ಬೆಂಗಳೂರಿಗೆ ಬಂದ ವ್ಯಕ್ತಿ!