ಊರಿಗೆ ಶುದ್ಧ ನೀರು ಕೊಟ್ಟ ಕೆರೆಗೆ ಸಿಕ್ಕಿದ್ದು ತ್ಯಾಜ್ಯ! ತಿಪ್ಪೆಗುಂಡಿಯಾದ ಸಿರಿಗೆರೆ ಪುರಾತನ ಕೆರೆ!

Kannadaprabha News   | Kannada Prabha
Published : Jun 18, 2026, 01:17 PM IST
ancient lake in Sirigeri become polluted due to neglect ballari

ಸಾರಾಂಶ

ಕುರುಗೋಡು ತಾಲೂಕಿನ ಸಿರಿಗೇರಿ ಗ್ರಾಮದ ಪುರಾತನ ಕೆರೆಯು ತ್ಯಾಜ್ಯ ಮತ್ತು ಗಿಡಗಂಟಿಗಳಿಂದ ತುಂಬಿ, ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಈ ಹಿಂದೆ ಇಬ್ಬರು ಮಕ್ಕಳು ಮೃತಪಟ್ಟಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯಕ್ಕೆಗ್ರಾಮಸ್ಥರು ಕಿಡಿಕಾರಿದ್ದಾರೆ.

ಎನ್.ಪಂಪನಗೌಡ ಬಾದನಹಟ್ಟಿ

ಕುರುಗೋಡು: ತಾಲೂಕಿನ ಪುರಾತನ ಕಾಲದ ಐತಿಹಾಸಿಕ ಮಹತ್ವದ ಕೆರೆ ತಿಪ್ಪೇಗುಂಡಿಯಂತಾಗಿದೆ. ಸಮೀಪದ ಸಿರಿಗೇರಿ ಗ್ರಾಮ(sirigeri)ದ ಹೃದಯ ಭಾಗದಲ್ಲಿರುವ ಪುರಾತನ ಕಾಲದ ಕೆರೆ(Ancient Lake)ಯು ತ್ಯಾಜ್ಯ ಹಾಗೂ ಗಿಡ-ಗಂಟಿ ಬೆಳೆದು ಬಿಡಾಡಿ ದನ, ಹಂದಿ, ನಾಯಿಗಳ ಆಶ್ರಯ ತಾಣವಾಗಿದೆ.

ಗ್ರಾಮದ ನಿವಾಸಿಗಳು ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ದಾರಿಹೋಕರು, ಸುತ್ತಲಿನ ನಿವಾಸಿಗಳು, ಕೂಗಳತೆ ದೂರದ ಅಂಗನವಾಡಿ ಕೇಂದ್ರದ ಮಕ್ಕಳು ನಿತ್ಯ ದುರ್ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಸಾಲದಿದ್ದಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸರಿಸೃಪಗಳ ಉಪಟಳದಿಂದ ಶಾಲಾ-ಕಾಲೇಜಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿರುವ ಈ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಮಳೆ ನೀರು ಸಂಗ್ರಹವಾಗಿದ್ದ ಗುಂಡಿಯಲ್ಲಿ ಇಬ್ಬರು ಮಕ್ಕಳು ಬಿದ್ದು ಅಸುನೀಗಿದ ಅವಘಡವೂ ನಡೆದಿತ್ತು. ಗುಂಡಿ ಮುಚ್ಚುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪುರಾತನ ಕಾಲದ ಕೆರೆ ಅಭಿವೃದ್ಧಿ ಮಾಡುವುದು ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ವಕೀಲ ರಾಮ್‌ಬಾಬು.

ಕೆರೆಯಲ್ಲಿ ಕಸ-ಕಡ್ಡಿ, ತ್ಯಾಜ್ಯ ಎಸೆಯುವುದರಿಂದ ದುರ್ವಾಸನೆ ಬೀರುತ್ತಿದೆ. ಕೆರೆ ಸ್ವಚ್ಛಗೊಳಿಸಿ, ತಂತಿ ಕಂಬವನ್ನು ಅಳವಡಿಸಬೇಕು. ಶಾಸಕರು ಕೂಡಲೇ ಅನುದಾನ ಒದಗಿಸಿ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಸಿರಿಗೇರಿ ಗ್ರಾಪಂ ಮಾಜಿ ಸದಸ್ಯ ಗೋಡೆ ಚೆನ್ನಪ್ಪ.

PREV
Read more Articles on
click me!

Recommended Stories

ಮಂಡ್ಯ: ವೃದ್ಧೆಗೆ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗಲು ಯತ್ನ, ಗ್ರಾಮಸ್ಥರಿಗೆ ವಿಷಯ ತಿಳಿದು ಮುಂದಾಗಿದ್ದೇ ಬೇರೆ!
ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್: ಪ್ರಯಾಣಕ್ಕೆ ಲಕ್ಷುರಿ ಕೋಚ್‌ ರೆಡಿ, ಒಳಾಂಗಣ ವಿನ್ಯಾಸದ ವಿಡಿಯೋ ವೈರಲ್