ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಿತ್ರದುರ್ಗ ಜಿಲ್ಲಾಧಿಕಾರಿ ಕೆಂಡಾಮಂಡಲ

By Suvarna News  |  First Published Dec 6, 2022, 6:57 PM IST

ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‍ಗೆ ಆಕಸ್ಮಿಕ ಭೇಟಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಶೀಲನೆ ನಡೆಸಿ ಹಾಸ್ಟೆಲ್ ನಲ್ಲಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಂತೆ ಕೆಂಡಾಮಂಡಲವಾದರು.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಡಿ.6): ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‍ಗೆ ಆಕಸ್ಮಿಕ ಭೇಟಿ ನೀಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಶೀಲನೆ ನಡೆಸಿದರು. ಚಿತ್ರದುರ್ಗ ಜಿಲ್ಲೆ‌ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜೆ ಕೆರೆ ಬಳಿ ಇರುವ ಹಾಸ್ಟೆಲ್ ಗೆ ಭೇಟಿ ನೀಡಿದರು. ಹಾಸ್ಟೆಲ್ ನಲ್ಲಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಂತೆ ಕೆಂಡಾಮಂಡಲವಾದರು. ಹಾಸ್ಟೆಲ್‍ನಲ್ಲಿ ಯಾವುದೇ ರಿಜಿಸ್ಟರ್ ನಿರ್ವಹಣೆ ಮಾಡಿರುವುದು ಕಂಡು ಬಂದಿಲ್ಲ.  ಭೇಟಿ ಸಂದರ್ಭದಲ್ಲಿ ಹಾಸೆಲ್‍ನಲ್ಲಿ ವಾರ್ಡನ್ ಯಾರೂ ಇರಲಿಲ್ಲ.  ಸಂಬಂಧಪಟ್ಟ ಇನ್‍ಚಾರ್ಜ್ ವಾರ್ಡನ್ ಹಾಸ್ಟೆಲ್‍ನಲ್ಲಿ ಸಮರ್ಪಕವಾಗಿ ಯಾವುದೇ ದಾಖಲೆಗಳನ್ನು ನಿರ್ವಹಣೆ ಮಾಡದೇ ಇರುವುದು ಕಂಡು ಬಂದಿದೆ. ತಾಲ್ಲೂಕು ಬಿಸಿಎಂ ಹಾಗೂ ಜಿಲ್ಲಾ ಬಿಸಿಎಂ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಹಾಸ್ಟೆಲ್‍ಗಳ ನಿರ್ವಹಣೆ ಹಾಗೂ ದಾಖಲೆಗಳ ನಿರ್ವಹಣೆ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಹಾಸ್ಟೆಲ್‍ನಲ್ಲಿ ಸಮಸ್ಯೆ ಕಂಡು ಬಂದಿದೆ.  

Latest Videos

undefined

ಹಾಸ್ಟೆಲ್‍ನಲ್ಲಿ ನಿಗದಿತ ಮೆನು ಪ್ರಕಾರ ಮಕ್ಕಳಿಗೆ ಊಟೋಪಹಾರ ನೀಡದೇ ಇರುವ ಬಗ್ಗೆ ಗಮನಿಸಲಾಗಿದ್ದು, ಹಾಸ್ಟೆಲ್‍ಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಮೆನು ಪ್ರಕಾರ ಮಕ್ಕಳಿಗೆ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸಬೇಕು.  ಸರ್ಕಾರ ಇದಕ್ಕಾಗಿ ಅಗತ್ಯವಿರುವ ಹಣ ಖರ್ಚು ಮಾಡುತ್ತದೆ.  ಆದರೆ ಪೂರೈಕೆಯ ಹೊಣೆ ಹೊತ್ತಿರುವ ಏಜೆನ್ಸಿಯವರು ಬಿ.ಜಿ. ಕೆರೆ ಹಾಸ್ಟಲ್‍ಗೆ ಆಹಾರ ಸಾಮಗ್ರಿ ಪೂರೈಕೆ ಮಾಡಿಲ್ಲ.  ನಿಯಮಾನುಸಾರ ಏಜೆನ್ಸಿಯವರು ಒಂದು ತಿಂಗಳಿಗೆ ಅಗತ್ಯವಿರುವಷ್ಟು ಆಹಾರ ಸಾಮಗ್ರಿಗಳನ್ನು ಮುಂಗಡವಾಗಿಯೇ ಪೂರೈಕೆ ಮಾಡಬೇಕು.  

ಏಜೆನ್ಸಿಯವರು ಮಾಡುವ ಸರಬರಾಜಿನ ಬಗ್ಗೆ ಹಾಸ್ಟೆಲ್ ನಿರ್ವಹಣೆ ಮಾಡುವ ವಾರ್ಡನ್‍ಗಳು, ಅಧಿಕಾರಿಗಳು ನಿಗಾ ವಹಿಸಬೇಕು.  ಒಂದು ವೇಳೆ ಏಜೆನ್ಸಿಯವರು ಕಾಲಕಾಲಕ್ಕೆ ಸಮರ್ಪಕವಾಗಿ ಆಹಾರಧಾನ್ಯ ಸರಬರಾಜು ಮಾಡುತ್ತಿಲ್ಲ ಅಂದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಸರಿಪಡಿಸಲು ಮುಂದಾಗಬೇಕು, ಇಲ್ಲದಿದ್ದಲ್ಲಿ ಅಂತಹಾ ಏಜೆನ್ಸಿಯನ್ನು ಬದಲಾಯಿಸಲು ಕ್ರಮ ಜರುಗಿಸಬೇಕು.  ಜಿಲ್ಲೆಯಲ್ಲಿ ಇದುವರೆಗೂ ಅಂತಹ ಯಾವುದೇ ದೂರು ಬಂದಿಲ್ಲ.  ಹಾಸ್ಟೆಲ್ ವಾರ್ಡನ್, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲುಸ್ತುವಾರಿ ಕೈಗೊಳ್ಳುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ವಿವರಣೆ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.

2ನೇ ಬಾರಿ ಪೀಜಿಗೆ ಸೇರುವ ಎಸ್ಸಿ- ಎಸ್ಟಿ ವಿದ್ಯಾರ್ಥಿಗೆ ಹಾಸ್ಟೆಲ್‌ ಇಲ್ಲ..!

ಬರುವ ದಿನಗಳಲ್ಲಿ ಯಾವುದೇ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ಮಾರ್ಗದಲ್ಲಿನ ಹಾಸ್ಟೆಲ್‍ಗಳಿಗೆ ಆಕಸ್ಮಿಕ ಭೇಟಿ ನೀಡಲಾಗುವುದು.  ಒಂದು ವೇಳೆ ಹಾಸ್ಟೆಲ್ ಗಳಲ್ಲಿ ಸ್ಟಾಕ್ ರಿಜಿಸ್ಟರ್ ನಿರ್ವಹಣೆ ಮಾಡದಿರುವುದು, ನಿಗದಿತ ಮೆನು ಪ್ರಕಾರ ಮಕ್ಕಳಿಗೆ ಆಹಾರ ಮತ್ತು ಸಾಮಗ್ರಿ ವಿತರಣೆ ಮಾಡದೇ ಇರುವುದು ಸೇರಿದಂತೆ ಇತರೆ ಸೌಲಭ್ಯಗಳ ಕೊರತೆ ಉಂಟಾಗಿರುವುದು ಕಂಡುಬಂದಲ್ಲಿ, ಅಂತಹ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಓಬಿಸಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಪ್ರೇಮದ ಪಾಠ: ಕೋಟಾ ಶ್ರೀನಿವಾಸ ಪೂಜಾರಿ

ಬಳಿಕ, ಇಲ್ಲಿನ 10 ನೇ ತರಗತಿ ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಈಗಾಗಲೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಕ್ಕಳು  ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕು. ವ್ಯಾಸಂಗದಲ್ಲಿ ಏಕಾಗ್ರತೆ ಕಾಪಾಡಿಕೊಂಡು, ಉತ್ತಮವಾಗಿ ಪರೀಕ್ಷೆ ಬರೆದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

click me!