ಚಿಂಚೋಳಿ ವಿಧಾನಸಭೆ ಉಪಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸಂಸದೇ ಹೊಸ ಗೆಟಪ್ ನಲ್ಲಿ ಮಿಂಚಿನ ಪ್ರಚಾರ ಮಾಡಿ ಎಲ್ಲರ ಗಮನಸೆಳೆದಿದ್ದಾರೆ
ಕಲಬುರಗಿ, [ಮೇ.12]: ಚಿಂಚೋಳಿ ವಿಧಾನಸಭಾ ಉಪಚುನಾವಣಾ ಅಖಾಡ ರಂಗೇರಿದೆ. ಇಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಚಾರಕ್ಕೆ ಆಗಮಿಸಿದ್ದರು, ಈ ವೇಳೆ ಲಂಬಾಣಿ ವೇಷ ಭೂಷಣ ತೊಟ್ಟು ಚಿಂಚೋಳಿ ಕ್ಷೇತ್ರದ ಚಿಂದಾನೂರು ತಾಂಡಾದಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಲಂಬಾಣಿ ಗೀತೆಗೆ ಲಂಬಾಣಿ ಮಹಿಳೆಯರ ಜತೆ ಸಖತ್ ಸ್ಟೆಪ್ಸ್ ಹಾಕಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಪರ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ಗೆ 40 ಸೀಟು ಬಂದ್ರೆ ದೆಹಲಿಯ ವಿಜಯಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ತಾನಾ? ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
40 ವರ್ಷ ರಾಜಕೀಯದಲ್ಲಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಯಿಂದ ಇಂದು ತುಂಬಾ ನೋವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹತಾಶೆಯಿಂದ ಈ ಹೇಳಿಕೆಯನ್ನು ಕೊಟ್ಟಿದ್ದಾರೆ.
ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೂರಕ್ಕೆ ನೂರು ಸೋಲುತ್ತಾರೆ ಎನ್ನುವುದು ಅವರ ಮಾತಿನಿಂದ ಗೊತ್ತಾಗುತ್ತೆ. ಸೋಲಿನ ಭೀತಿ ಅವರಿಗೆ ಕಾಡುತ್ತಿದೆ, ಹೀಗಾಗಿ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ತಕ್ಷಣವೇ ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.