Uttara Kannada: ಮಕ್ಕಳ ಭವಿಷ್ಯ ನುಂಗುತ್ತಿದೆ ಕಲ್ಲಿನ ಕ್ವಾರಿ: ಕುಸಿದು ಬೀಳುವ ಭೀತಿಯಲ್ಲಿ ಶಿರಸಿಯ ಶಾಲೆ!

By Govindaraj SFirst Published Jun 28, 2023, 9:23 PM IST
Highlights

ವಿದ್ಯಾ ದೇಗುಲವಾಗಿರುವ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾರ್ಜನೆ ಪಡೆಯುತ್ತಾರೆ. ಆದರೆ, ಶಿರಸಿಯ ಶಾಲೆಯೊಂದು ಕಲ್ಲು ಕ್ವಾರಿಯವರ ಕಾಟದಿಂದ‌ ಭವಿಷ್ಯ ಕಳೆದುಕೊಳ್ಳುತ್ತಿದ್ದು, ಕುಸಿದು ಬೀಳುವ ಭೀತಿಯನ್ನು ಎದುರಿಸುತ್ತಿದೆ.‌ ಅಲ್ಲದೇ, ಶಾಲಾ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಶಿರಸಿ (ಜೂ.28): ವಿದ್ಯಾ ದೇಗುಲವಾಗಿರುವ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾರ್ಜನೆ ಪಡೆಯುತ್ತಾರೆ. ಆದರೆ, ಶಿರಸಿಯ ಶಾಲೆಯೊಂದು ಕಲ್ಲು ಕ್ವಾರಿಯವರ ಕಾಟದಿಂದ‌ ಭವಿಷ್ಯ ಕಳೆದುಕೊಳ್ಳುತ್ತಿದ್ದು, ಕುಸಿದು ಬೀಳುವ ಭೀತಿಯನ್ನು ಎದುರಿಸುತ್ತಿದೆ.‌ ಅಲ್ಲದೇ, ಶಾಲಾ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ತಿಳಿದಿದ್ರೂ ಸುಮ್ಮನಿರುವುದು ನೋಡಿದ್ರೆ ಹಫ್ತಕ್ಕಾಗಿ ಅವರು ಕೂಡಾ ಕಣ್ಣುಮುಚ್ಚಿದ್ದಾರೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಹೌದು! ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದ ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆಯುತ್ತಿರುವ ಕಲ್ಲಿನ ಕ್ವಾರಿ ಇಲ್ಲಿನ ಶಾಲೆ ಹಾಗೂ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. 

Latest Videos

ಗುಡ್ನಾಪುರದಲ್ಲಿ ಶಾಲೆಯಿರುವ ಜಾಗ ರುದ್ರ ಗೌಡ ಎಂಬವರದ್ದಾಗಿದ್ದು, ಶಿರಸಿಯ ಮಾಬ್ಲೇಶ್ವರ ತಾರೀಮನೆ ಅವರು ಈ ಜಾಗವನ್ನು ಖರೀದಿಸಿ 2004ರಲ್ಲಿ 2 ಗುಂಟೆ ಜಾಗವನ್ನು ಶಾಲೆಗೆ ನೀಡಿದ ದಾನಪತ್ರವಿದೆ. ತಾರೀಮನೆ ಕುಟುಂಬದ ಹೆಚ್ಚಿನ ಸದಸ್ಯರು ಮೃತಪಟ್ಟಿದ್ದು, ಅವರ ಸೊಸೆ ಮಾತ್ರ ಬದುಕುಳಿದಿದ್ದಾರೆ. ಇದು ಕಾಡು ಪ್ರದೇಶವಾಗಿದ್ದು, ಹಳ್ಳಿಯ ಮಕ್ಕಳು ದೂರದ‌ ಶಾಲೆಗೆ ತೆರಳಲು ಸಾಧ್ಯವಾಗದ್ದರಿಂದ ಹಲವು ವರ್ಷಗಳಿಂದ ಇಲ್ಲಿಯೇ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ, ಚಂದ್ರಪ್ಪ ಚನ್ನಯ್ಯ ಎಂಬವರು ತಾವು ಈ ಜಾಗ ಖರೀದಿ ಮಾಡಿರುವುದಾಗಿ ಹೇಳುತ್ತಿದ್ದು, ಶಾಲೆಯ ಕೂಗಳತೆ ದೂರದಲ್ಲಿ ಕಳೆದೊಂದು ವರ್ಷದಿಂದ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. 

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್‌.ನರೇಂದ್ರ

ಮೊದಲು ಈ ಗಣಿಗಾರಿಕೆ ದೂರದಲ್ಲಿ ನಡೆಯುತ್ತಿತ್ತಾದ್ರೂ, ಈಗೀಗ ಶಾಲೆಯ ಕಂಪೌಂಡ್ ಬಳಿಯೇ ಬಂದು ನಿಂತಿದೆ. ಭಾರೀ ಮಳೆಗೆ ಶಾಲೆಯ ಕಂಪೌಂಡ್ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಒಂದೆರಡು ವರ್ಷದಲ್ಲಿ ಶಾಲೆಯೇ ಕುಸಿದು ಬೀಳಬಹುದಾದ ಸಾಧ್ಯತೆ ಕೂಡಾ ಹೆಚ್ಚಾಗಿದೆ. ಕಲ್ಲಿನ ಕೋರೆಯಿಂದ ಬರುವಂತಹ ಧೂಳು, ಕರ್ಣ ಕಠೋರ‌ ಶಬ್ದದಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ‌ ಬೀರುತ್ತಿದ್ದು, ವಿದ್ಯಾರ್ಜನೆ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅಂದಹಾಗೆ, ಆರು ತಿಂಗಳ ಹಿಂದೆ ಶಿರಸಿ ತಹಶೀಲ್ದಾರರಿಗೆ ಮನವಿ ನೀಡಲಾಗಿದ್ದು, ಅಧಿಕಾರಿಗಳು ಎರಡು ತಿಂಗಳ ಕಾಲ ಕ್ವಾರಿ ಸ್ಥಗಿತಗೊಳಿಸಿದ್ದರು. ಹಫ್ತಕ್ಕಾಗಿ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ರಾಜಕೀಯ ಪ್ರಭಾವದಿಂದಲೋ ಗಣಿಗಾರಿಕೆ ಮತ್ತೆ ಭರ್ಜರಿಯಾಗಿ ಮುಂದುವರಿದಿದೆ. 

ಗಣಿಗಾರಿಕೆ ನಡೆಸುವವರು ಈ ಹಿಂದೆ ಸಂಜೆ ವೇಳೆ ನಡೆಸುತ್ತೇವೆ ಎಂದು ಹೇಳಿದ್ರೂ, ಇಡೀ ದಿನ ಶಾಲಾ ಅವಧಿಯಲ್ಲೇ ಜೆಸಿಬಿ ಮೂಲಕ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದಾಗುವ ಅತೀವ ಶಬ್ದಮಾಲಿನ್ಯ ಕಿರಿಕಿರಿ ಉಂಟು ಮಾಡುತ್ತಿದ್ದು, ಮಕ್ಕಳು ತೀವ್ರ ತಲೆನೋವು ಅನುಭವಿಸುತ್ತಿದ್ದಾರೆ. ಅಲ್ಲದೇ, ವಿಪರೀತ ಧೂಳಿನಿಂದ ಮಕ್ಕಳಲ್ಲಿ ಅಲರ್ಜಿ, ಒಣಕೆಮ್ಮಿನಂತಹ ರೋಗಲಕ್ಷಣಗಳೂ ಕಾಣಿಸಿಕೊಳ್ಳುತ್ತಿದೆ. ಶಾಲಾ ಸ್ವಚ್ಛತೆಗೆ ತೊಡಕು, ಭೂ ಕುಸಿತ, ಶಬ್ದಮಾಲಿನ್ಯ, ಮಕ್ಕಳಲ್ಲಿ ಅನಾರೋಗ್ಯ, ಅಸುರಕ್ಷಿತ ಕಟ್ಟಡ ಈ ಸಮಸ್ಯೆಗಳನ್ನು ಕಳೆದ ಹಲವು ವರ್ಷಗಳಿಂದ ಶಾಲೆ ಎದುರಿಸುತ್ತಿದೆ.‌

Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

ಈ ಹಿಂದೆ ಶಾಸಕ ಶಿವರಾಮ ಹೆಬ್ಬಾರ್ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಶಾಸಕರ ಆಪ್ತ ಸಹಾಯಕರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗೆ ಕೂಡಾ ಮನವಿ ಸಲ್ಲಿಸಲಾಗಿದೆ. ಕಾನೂನು ಪ್ರಕಾರ ಜಾಗ ಚಂದ್ರಪ್ಪ ಅವರದ್ದಾಗಿದ್ದರೆ ಸರ್ಕಾರ ಶಾಲೆಗೆ ಬೇರೆ ಜಾಗ ನೀಡಲಿ, ಇಲ್ಲದಿದ್ದರೆ ಕ್ವಾರಿ ಸ್ಥಗಿತಗೊಳಿಸಿ ಶಾಲೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ವಿನಂತಿಕೊಂಡಿದ್ದಾರೆ. ಒಟ್ಟಿನಲ್ಲಿ ಕಲ್ಲಿನ ಕ್ವಾರಿಯ ಕಾಟದಿಂದ ಗುಡ್ನಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಇಲ್ಲಿನ ವಿದ್ಯಾರ್ಥಿಗಳು ಭವಿಷ್ಯ ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಕಲ್ಲಿನ ಕ್ವಾರಿಯನ್ನು ನಿಲ್ಲಿಸಿ ಶಾಲೆ ಹಾಗೂ ಮಕ್ಕಳ ಭವಿಷ್ಯ ಉಳಿಸಬೇಕಿದೆ.

click me!