ಕೊರೋನಾ ಮಹಾಮಾರಿ ಪ್ರಭಾವ ಮಕ್ಕಳ ಮೇಲೂ ಪ್ರಭಾವ ಬೀರಿದೆ. ಸಾವಿರಾರು ಮಕ್ಕಳು ಕೆಲಸಕ್ಕೆ ದೂಡಲ್ಪಟ್ಟದ್ದಾರೆ. ಶಾಲೆಗೆಳು ಇಲ್ಲದಿರುವುದು ಇದಕ್ಕೊಂದು ಕಾರಣವಾಗಿದೆ.
ವಿಶೇಷ ವರದಿ:ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಸೆ.23): ಮಹಾಮಾರಿ ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಇನ್ನು ಆರಂಭಗೊಳ್ಳದೇ ಶಾಲಾ, ಕಾಲೇಜುಗಳು ಬಾಗಿಲು ಮುಚ್ಚಿರುವ ಪರಿಣಾಮ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಆಚರಣೆ ಜೀವಂತವಾಗಿದೆ.
ಕೊರೊನಾ ಸಂಕಷ್ಟ ಹಲವು ವಲಯಗಳಿಗೆ ತೀವ್ರ ಹೊಡೆತ ಬಿದ್ದು ಮಾನವನಿಗೆ ಸಾಕಷ್ಟು ಪಾಠ ಕಲಿಸಿದರೂ ಜಿಲ್ಲೆಯಲ್ಲಿ ಕೊರೊನಾ ಬಾಲ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚುವಂತೆ ಮಾಡಿದೆ. ಶಾಲೆಯಂಗಳಲ್ಲಿ ಇರಬೇಕಾದ ಮಕ್ಕಳು ಈಗ ದಿನಸಿ ಅಂಗಡಿ, ಟೀ, ವರ್ಕ್ ಶಾಫ್, ಪಂಕ್ಚರ್ ಅಂಗಡಿಗಳಲ್ಲಿ ದಿನಗೂಲಿಗೆ ಶ್ರಮಿಸುತ್ತಿರುವುದು ಎದ್ದು ಕಾಣುತ್ತಿದೆ.
ಹೇಳಿ ಕೇಳಿ ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಯಾವುದೇ ಕೈಗಾರಿಕೆಗಳು ಇಲ್ಲ. ಸಣ್ಣ, ಅತಿ ಸಣ್ಣ ರೈತರು ಹೆಚ್ಚಿನ ಪ್ರಮಾಣದಲ್ಲಿರುವ ಜಿಲ್ಲೆಯಲ್ಲಿ ಕೊರೊನಾ ಹಲವು ಸಂಕಷ್ಟಗಳನ್ನು ತಂದೊಡ್ಡಿದ್ದು ಇದರ ಪರಿಣಾಮ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ದೂಡುತ್ತಿರುವುದು ಜಿಲ್ಲೆಯಲ್ಲಿ ನಡೆಯುತ್ತಿದ್ದು ಕೊರೊನಾ ಭಯಕ್ಕೆ ಕಾರ್ಮಿಕ ಇಲಾಖೆ ಕೂಡ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕಾರ್ಯಾಚರಣೆ ಮಾಡಲು ಹಿಂದೆ ಮುಂದೆ ನೀಡುವಂತಾಗಿದೆ.
ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ!
ಜಿಲ್ಲೆಯಲ್ಲಿ ಹಾದಿ ಬೀದಿಗೊಂದು ಟೀ, ವರ್ಕ್‌ಶಾಪ್, ದಿನಸಿ ಅಂಗಡಿಗಳು ಇದ್ದು ವಿವಿಧ ವಸ್ತುಗಳ ಪಾರ್ಸೆಲ್‌ಗಾಗಿ ಹಾಗೂ ದಿನಸಿ ಪದಾರ್ಥಗಳನ್ನು ಪೊಟ್ಟಣ ಕಟ್ಟಲು, ವಾಹನಗಳಿಗೆ ಪಂಕ್ಚರ್ ಹಾಕಲು 18 ವರ್ಷದೊಳಗಿನ ಮಕ್ಕಳನ್ನು ಕಾನೂನೂ ಬಾಹಿರವಾಗಿ ಬಳಕೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿದೆ.
ತಿಂಗಳಲ್ಲಿ 8 ಪ್ರಕರಣ ದಾಖಲು:
ಕೊರೊನಾ ಸಂಕಷ್ಟ ಆರಂಭಗೊಂಡ ಪರಿಣಾಮ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ ನಡೆಸದ ಕಾರ್ಮಿಕ ಇಲಾಖೆ ಇದೀಗ ಕೇಂದ್ರ ಸರ್ಕಾರ ಅನ್‌ಲಾಕ್ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲೇ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಸುಮಾರು 8 ಕಡೆ ಒಂದೇ ತಿಂಗಳಲ್ಲಿ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಆ ಪೈಕಿ ಜಿಲ್ಲೆಯ ಚಿಂತಾಮಣಿ 3, ಬಾಗೇಪಲ್ಲಿ 2, ಗೌರಿಬಿದನೂರು 1, ಚಿಕ್ಕಬಳ್ಳಾಪುರದಲ್ಲಿ 2 ಬಾಲ ಕಾರ್ಮಿಕ ಪ್ರಕರಣಗಳ ದಾಖಲಾಗಿವೆ.
ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಕೆಲ ಪೋಷಕರು ಬಡತನದ ಹಿನ್ನಲೆಯಲ್ಲಿ ಕುಟುಂಬ ನಿರ್ವಹಣೆಗೆ ಯಾವುದೇ ನೆರವು ಸಿಗದೇ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಲವಂತದಿಂದ ಬಾಲ ಕಾರ್ಮಿಕ ಸೇವೆಗೆ ದೂಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಲ್ಪಸಂಖ್ಯಾತರ ಮಕ್ಕಳು ಹೆಚ್ಚು:
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಮಕ್ಕಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳೇ ಹೆಚ್ಚಿರುವುದು ಕಂಡು ಬಂದಿದೆ. ಈ ತಿಂಗಳಲ್ಲಿ ಪತ್ತೆಯಾಗಿರುವ 8 ಪ್ರಕರಣಗಳಲ್ಲಿ ಬಹುತೇಕ ಮಕ್ಕಳು ಅಲ್ಪಸಂಖ್ಯಾತರಾಗಿದ್ದು ಕೆಲ ಮಕ್ಕಳು ಶಾಲೆಯ ಮುಖವೇ ನೋಡದೇ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಕಾರ್ಮಿಕ ಇಲಾಖೆ ನಡೆಸಿದ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ?
ಕೊರೊನಾ ಇದ್ದ ಕಾರಣ ಕಳೆದ ಆರು ತಿಂಗಳಿಂದ ಬಾಲ ಕಾರ್ಮಿಕರ ಪತ್ತೆ ಕಾರ್ಯ ಕೈಗೊಂಡಿರಲಿಲ್ಲ. ಆದರೆ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 8 ಬಾಲ ಕಾರ್ಮಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು 8 ಮಕ್ಕಳನ್ನು ಮಾಲೀಕರಿಂದ ಬಿಡಿಸಿ ರಕ್ಷಣೆ ಮಾಡಲಾಗಿದೆ. ಕಾನೂನು ಬಾಹಿರವಾಗಿ ಬಾಲಕರನ್ನು ದುಡಿಸಿಕೊಳ್ಳುತ್ತಿದ್ದ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬಾಲಕ ಪದ್ಧತಿ ನಿರ್ಮೂಲನೆಗೆ ಇಲಾಖೆ ಶ್ರಮಿಸುತ್ತಿದ್ದೆ. ನಾಗರಿಕರು ಕೂಡ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
ವರಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ.
ಶಿಡ್ಲಘಟ್ಟ, ಬಾಗೇಪಲ್ಲಿಗೆ ಕಾರ್ಮಿಕ ನಿರೀಕ್ಷರೇ ಇಲ್ಲ!
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು ಬಾಲ ಕಾರ್ಮಿಕರ ಪತ್ತೆ ಕಾರ್ಯಕ್ಕೆ ಕಾರ್ಯನಿರ್ವಹಿಸಬೇಕಾದ ಕಾರ್ಮಿಕ ನಿರೀಕ್ಷಕರ ಹುದ್ದೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಖಾಲಿ ಇದೆ.
ವಿಶೇಷವಾಗಿ ಬಾಲ ಕಾರ್ಮಿಕ ಪದ್ಧತಿ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುವ ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಕಾರ್ಮಿಕ ಇಲಾಖೆಯಲ್ಲಿ ನಿರೀಕ್ಷಕರೇ ಇಲ್ಲವಾಗಿದ್ದು ಬಾಲ ಕಾರ್ಮಿಕ ಪದ್ಧತಿ ಅಸ್ತಿತ್ವದಲ್ಲಿದ್ದರೂ ಹೇಳೋರು ಕೇಳೋರು ಇಲ್ಲವಾಗಿದೆ. ಯಾರಾದರೂ ಪ್ರಜ್ಞಾವಂತ ನಾಗರಿಕರು ಜಿಲ್ಲಾ ಕಾರ್ಮಿಕ ಇಲಾಖೆಗೆ ದೂರು ನೀಡಿದರೆ ಅಧಿಕಾರಿಗಳು ಬರುವಷ್ಟರಲ್ಲಿ ಮಾಲೀಕರು ಬಾಲ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸಿ ಬಿಡುತ್ತಾರೆ.