
ಬೆಳಗಾವಿ (ಜ.02): ಹೊಸ ವರ್ಷದ ದಿನ ವಿಡಿಯೋ ಕಾಲ್ ಮಾಡಿ ಮನೆಗೆ ಬರುವಂತೆ ಹೇಳಿದ್ದ ಆಂಟಿಯ ಕರೆಗೆ ಓಗೊಟ್ಟು ಮಧ್ಯರಾತ್ರಿ ಆಕೆಯನ್ನು ಭೇಟಿಯಾಗಲು ಹೊರಟಿದ್ದ ಯುವಕನೊಬ್ಬ ಆಕೆಯ ಪತಿ ಮತ್ತು ಸಹೋದರರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ, ಪ್ರೇಮಿಯನ್ನು ಮರಕ್ಕೆ ಕಟ್ಟಿ ಮನಸೋ ಇಚ್ಛೆ ಗಂಭೀರವಾಗಿ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ನಿವಾಸಿ ಅಕ್ಷಯ ಕಲ್ಲಟಗಿ ಎಂದು ಗುರುತಿಸಲಾಗಿದೆ. ಈತ ಕಳೆದ 4 ವರ್ಷಗಳಿಂದ ಕರೋಶಿ ಗ್ರಾಮದ ಮೂರು ಮಕ್ಕಳ ತಾಯಿಯೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಆಕೆ ಅಕ್ಷಯನಿಗೆ ಫೋನ್ ಮಾಡಿ ಹೊಸ ವರ್ಷದ ಹಿನ್ನೆಲೆಯಲ್ಲಿ ನಾನು ಇವತ್ತು ನಿನ್ನನ್ನು 'ಮೀಟ್ ಮಾಡಬೇಕು ಬಾ' ಎಂದು ಕರೆದಿದ್ದಾಳೆ. ಪ್ರಿಯತಮೆಯ ಕರೆಯಿಂದ ಸಂಭ್ರಮಿಸಿದ ಅಕ್ಷಯ, ಕತ್ತಲಲ್ಲಿ ಆಕೆಯನ್ನು ನೋಡಲು ಕರೋಶಿ ಗ್ರಾಮದ ಕಡೆಗೆ ಧಾವಿಸಿದ್ದಾನೆ.
ಆದರೆ, ಅಕ್ಷಯನ ಬರುವಿಕೆಯ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮಹಿಳೆಯ ಪತಿ ಮತ್ತು ಆಕೆಯ ಸಹೋದರರು ದಾರಿ ಮಧ್ಯೆಯೇ ಹೊಂಚು ಹಾಕಿ ಕುಳಿತಿದ್ದರು. ಕರೋಶಿ ಗ್ರಾಮದ ಹೊರವಲಯಕ್ಕೆ ಅಕ್ಷಯ ತಲುಪುತ್ತಿದ್ದಂತೆ ಆತನನ್ನು ತಡೆದ ತಂಡ, ತಕ್ಷಣವೇ ಆತನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾರೆ. ನಾಲ್ಕು ವರ್ಷಗಳ ಕಾಲ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಎಂಬ ಕೋಪದಲ್ಲಿ ಅಕ್ಷಯನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ತಡರಾತ್ರಿ ವೇಳೆ ಮೂರ್ನಾಲ್ಕು ಜನರು ಸೇರಿ ನಡೆಸಿದ ಹಲ್ಲೆಯಿಂದ ಅಕ್ಷಯ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಅಂಟಿ' ಸಹವಾಸ ಮಾಡಲು ಹೋಗಿ ಈಗ ಆಸ್ಪತ್ರೆ ಪಾಲಾಗಿರುವ ಅಕ್ಷಯನ ಸ್ಥಿತಿ ಬಗ್ಗೆ ಸ್ಥಳೀಯವಾಗಿ ಭಾರಿ ಚರ್ಚೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿದ ತಂಡದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಕ್ರಮ ಸಂಬಂಧಗಳು ಹೇಗೆ ದ್ವೇಷ ಮತ್ತು ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಈ ಘಟನೆ ಒಂದು ಕನ್ನಡಿಯಾಗಿದೆ.