
ಬೆಂಗಳೂರು: ಕೆಪಿಟಿಸಿಎಲ್ (KPTCL) ಹಾಗೂ ಬೆಸ್ಕಾಂ ನಿರ್ಲಕ್ಷ್ಯದಿಂದ ನಗರದಲ್ಲಿ ಮತ್ತೊಂದು ಅಪಘಾತ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಶೇಷಾದ್ರಿಪುರಂ ಲಿಂಕ್ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಕಾಮಗಾರಿಗಾಗಿ ತೆಗೆದಿದ್ದ ಬೃಹತ್ ಗುಂಡಿಗೆ ಕಾರೊಂದು ಬಿದ್ದ ಪರಿಣಾಮ ನಿವೃತ್ತ ಜಿಎಸ್‌ಟಿ ಅಧಿಕಾರಿಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಬೆಳಗ್ಗೆ ಸುಮಾರು 5.30 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸವೇಶ್ವರ ನಗರದಿಂದ ಗಾಲ್ಫ್ ಮೈದಾನ ಕಡೆಗೆ ತೆರಳುತ್ತಿದ್ದ ವೇಳೆ, ಶೇಷಾದ್ರಿಪುರಂ ಲಿಂಕ್ ರಸ್ತೆಯ ಟರ್ನಿಂಗ್ ಬಳಿ ನಡೆಯುತ್ತಿದ್ದ ಕೆಪಿಟಿಸಿಎಲ್ ಕಾಮಗಾರಿಯ ಗುಂಡಿಗೆ ಕಾರು ಏಕಾಏಕಿ ಬಿದ್ದಿದೆ. ಅಪಘಾತದ ವೇಳೆ ಕಾರನ್ನು ನಿವೃತ್ತ ಜಿಎಸ್‌ಟಿ ಅಧಿಕಾರಿ ರವೀಂದ್ರನಾಥ್ ಅವರೇ ಚಾಲನೆ ಮಾಡುತ್ತಿದ್ದರು.
ವಿದ್ಯುತ್ ಸಂಪರ್ಕಕ್ಕಾಗಿ ಡಕ್ಟ್ ನಿರ್ಮಾಣ ಮಾಡುವ ಸಲುವಾಗಿ ಕೆಪಿಟಿಸಿಎಲ್ ಕಳೆದ ಆರು ತಿಂಗಳಿನಿಂದ ಈ ಪ್ರದೇಶದಲ್ಲಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಪೂರ್ಣಗೊಳಿಸಿಲ್ಲ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಲಿಂಕ್ ರಸ್ತೆಯಲ್ಲೇ ಕಾಮಗಾರಿ ನಡೆಯುತ್ತಿದ್ದರೂ, ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ. ಕಾಮಗಾರಿಯಿಂದ ತೆಗೆದಿದ್ದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಬಿಟ್ಟಿರುವುದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆಯಲ್ಪಟ್ಟ ಕಾರಣ ಚಾಲಕ ರವೀಂದ್ರನಾಥ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಎದೆಗೆ ಪೆಟ್ಟು ಬಿದ್ದು ಗಾಯಗೊಂಡಿರುವ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಈ ರಸ್ತೆಯಲ್ಲಿ ಕಳೆದ ಆರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿರುವುದರಿಂದ ಬಿಎಂಟಿಸಿ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ನಿರಂತರ ಅಡಚಣೆ ಉಂಟಾಗುತ್ತಿದೆ. ಕಾಮಗಾರಿ ಗುಂಡಿಯನ್ನು ಇನ್ನೂ ತೆರವುಗೊಳಿಸದ ಹಿನ್ನೆಲೆ ಲಿಂಕ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯೂ ಉಂಟಾಗಿದೆ. ಪ್ರತಿದಿನವೂ ವಾಹನಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸ್ಥಳಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯರು ಆಗಮಿಸಿ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಭದ್ರತೆ ದೃಷ್ಟಿಯಿಂದ ಸೂಕ್ತವಾದ ಎಚ್ಚರಿಕೆ ಫಲಕಗಳು, ಬ್ಯಾರಿಕೇಡ್‌ಗಳು ಹಾಗೂ ಬೆಳಕು ವ್ಯವಸ್ಥೆ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಬೇಗ ತಲುಪಬೇಕೆಂಬ ಕಾರಣಕ್ಕೆ ವಾಹನ ಚಾಲನೆ ಮಾಡಿದಾಗ ಈ ರೀತಿಯ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸದ್ಯ ಅಪಘಾತಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಹೆಚ್ಚುತ್ತಿದೆ.