ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಡ್ಗಿಚ್ಚು, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಭಸ್ಮ!

By Suvarna News  |  First Published Mar 7, 2023, 8:30 PM IST

ಗಾಳಿಯ ರಭಸಕ್ಕೆ ಹಾರಿದ ಕಿಡಿ, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಸುಟ್ಟು ಕರಕಲು ಆಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನೂರಾರು ಎಕರೆ ಕಾಡು, ಅರಣ್ಯಕ್ಕೆ ಬೆಂಕಿ ಹಾಕಿದ್ದ ಓರ್ವನ ಬಂಧನವಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.7): ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ  ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚು ನಿಂದ ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಸಟ್ಟು ಭಸ್ಮವಾಗುತ್ತಿದೆ. ಬೆಂಕಿ‌ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ಹರಸಾಹಸವನ್ನೇ ಮಾಡುತ್ತಿದ್ದಾರೆ. ಇನ್ನು ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಂದಿಗೆರೆ ಗ್ರಾಮದಲ್ಲಿ ರಸ್ತೆ ಬದಿ ಬೈಕ್ ನಿಲ್ಲಿಸಿ ಬೆಂಕಿ ನಂದಿಸಲು ಹೋಗಿದ್ದ ಸಿಬ್ಬಂದಿಗಳು ಹಿಂದಿರುಗಿ ಬರುವಷ್ಟರಲ್ಲಿ ಮೂರು ಬೈಕ್‍ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸಿಂದಿಗೆರೆ ಬಯಲುಸೀಮೆ ಭಾಗ. ಇಲ್ಲಿ ಬಿಸಿಲಿನ ತಾಪವೂ ಹೆಚ್ಚು. ಗಾಳಿಯ ವೇಗವೂ ಹೆಚ್ಚು. ಹೊತ್ತಿ ಉರಿಯುತ್ತಿದ್ದ ಕಾಡ್ಗಿಚ್ಚಿನಲ್ಲಿ ಬೆಂಕಿಯ ಕಿಡಿ ಗಾಳಿಯಲ್ಲಿ ಹಾರಿ ಬಂದು ಬೈಕ್‍ಗಳು ಸುಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಬಿದ್ದ ಜಾಗದ ತುಸು ದೂರದಲ್ಲಿ ಬೈಕ್‍ಗಳು ಇದ್ದ ಪರಿಣಾಮ ಬಿಸಲಿನ ತಾಪ, ಬೆಂಕಿಯ ಶಾಖಕ್ಕೂ ಬೈಕ್ ಸುಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಅಧಿಕಾರಿಗಳು ಅರಣ್ಯಕ್ಕೆ ಹೊತ್ತಿದ್ದ ಬೆಂಕಿಯನ್ನ ನಂದಿಸಿ ಬರುವಷ್ಟರಲ್ಲಿ ಅಧಿಕಾರಿಗಳ ಮೂರು ಬೈಕ್‍ಗಳು ಸಂಪೂರ್ಣ ಸುಟ್ಟು ಹೋಗಿವೆ.

Latest Videos

undefined

ನೂರಾರು ಎಕರೆ ಕಾಡು, ಅರಣ್ಯಕ್ಕೆ ಬೆಂಕಿ ಹಾಕಿದ್ದ ಓರ್ವನ ಬಂಧನ ಮತ್ತಿಬ್ಬರು ಪರಾರಿ:
ಅರಣ್ಯಕ್ಕೆ ಬಿದ್ದ ಬೆಂಕಿಯನ್ನ ನಂದಿಸುವಾಗ ಕಾಡಿಗೆ ಬೆಂಕಿ ಹಚ್ಚಿದ ಓರ್ವನನ್ನ ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಗಾಳಿಯ ವೇಗಕ್ಕೆ ಅರಣ್ಯ ಪ್ರದೇಶದ ಅಕ್ಕಪಕ್ಕವಿದ್ದ ಕಾಫಿ ತೋಟ ಕೂಡ ಸುಟ್ಟುಹೋಗಿತ್ತು. ಖಾಂಡ್ಯದ ಬಸವನಕೋಟೆ ಸಮೀಪದ ಕಸ್ಕೆಮನೆ ಸಮೀಪವಿರುವ ಮೀಸಲು ಅರಣ್ಯ ನೂರಾರು ಎಕರೆಯ ದಟ್ಟಕಾನನ. ಇಲ್ಲಿಗೆ ಬೆಂಕಿ ಬಿದ್ದ ಪರಿಣಾಮ ಅಧಿಕಾರಿಗಳು ಇಡೀ ರಾತ್ರಿ ಬೆಂಕಿ ನಂದಿಸಿದ್ದರು.

ಚಾಮುಂಡಿಬೆಟ್ಟ ಸೇರಿ 4 ಕಡೆ ಕಾಳ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

ಗಾಳಿ ವೇಗ ಹೆಚ್ಚಾದಂತೆಲ್ಲಾ ಕಾಡ್ಗಿಚ್ಚು ಹೆಚ್ಚುತ್ತಲೇ ಇತ್ತು. ಆದರೂ ಹತ್ತಾರು ಅಧಿಕಾರಿಗಳು ಸ್ಥಳಿಯರ ಜೊತೆ ಇಡೀ ರಾತ್ರಿ ಬೆಂಕಿ ನಂದಿಸಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುವಾಗ ಅರಣ್ಯಕ್ಕೆ ಬೆಂಕಿ ಕೊಟ್ಟ ಓರ್ವನನ್ನ ಬಂಧಿಸಿದ್ದಾರೆ. ಸಾರಗೋಡು ಗ್ರಾಮದ ರಘು ಬಂಧಿತ ಆರೋಪಿ. ಆತನ ಜೊತೆಯಲ್ಲಿದ್ದ ಕುಮಾರ್ ಹಾಗೂ ವೆಂಕಟೇಶ್ ಎಂಬ ಮತ್ತಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನ ಹಿಡಿಯಲೂ ತಂಡ ರಚಿಸಿ ಹುಡುಕಾಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ತನಿಖೆಯಲ್ಲಿ ರಘು ಕಾಡಿಗೆ ಬೆಂಕಿ ಕೊಟ್ಟಿದ್ದನ್ನ ಒಪ್ಪಿಕೊಂಡಿದ್ದಾನೆ.

ಆಕಸ್ಮಿಕ ಬೆಂಕಿ ಅವಘಡ: ಪೊಲೀಸರು ಜಪ್ತಿ ಮಾಡಿದ್ದ 58 ಬೈಕ್‌ ಸುಟ್ಟು ಭಸ್ಮ

ಅರಣ್ಯದ ಗ್ರೌಂಡ್‍ನಲ್ಲಿ ಆಗಿಂದಾಗ್ಗೆ ಬೆಂಕಿ ಬೀಳುತ್ತಿತ್ತು. ಇದರಿಂದ ಅಧಿಕಾರಿಗಳು ಅಲರ್ಟ್ ಆಗಿದ್ದು ಓರ್ವನನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರೋ ಇಬ್ಬರಿಗಾಗಿ ಶೋಧ ಮುಂದುವರೆಸಿದ್ದಾರೆ. ಬಂಧಿತನ್ನ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕಾಡನ್ನ ರಕ್ಷಿಸುವುದು ಕೇವಲ ಅಧಿಕಾರಿಗಳ ಕೆಲಸವಷ್ಟೆ ಅಲ್ಲ. ಜನಸಾಮಾನ್ಯರದ್ದು ಕೂಡ. ಇಲಾಖೆ ಜೊತೆ ಸಹಕರಿಸಿ ಕಾಡನ್ನ ಉಳಿಸಿ-ಬೆಳೆಸೋಣ ಎಂದು ಅಧಿಕಾರಿಗಳು ಕೂಡ ಮನವಿ ಮಾಡಿದ್ದಾರೆ. ಕಾಡಿಗೆ ಬೆಂಕಿ ಹಚ್ಚುವವರ ಬಗ್ಗೆ ಮಾಹಿತಿ ನೀಡಿ ನಿಮಗೆ ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ.

click me!