ಚಿಕ್ಕಮಗಳೂರಿನಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗುತ್ತಾ ಎಂಬ ಅನುಮಾನ ಎದ್ದಿದೆ. ಆಜಾನ್ ಕೂಗಲು ಅನುಮತಿ ನೀಡುವಂತೆ ಮುಸ್ಲಿಂ ಮುಖಂಡರಿಂದ ಡಿಸಿಗೆ ಮನವಿ ಮಾಡಲಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.7): ಚುನಾವಣೆಯ ಹೊತ್ತಿನಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗುತ್ತಾ ಎನ್ನುವ ಪ್ರಶ್ನೆ ಉದ್ಬವವಾಗಿದೆ. ಇನ್ನು ಕೆಲ ದಿನಗಳಲ್ಲೇ ಮುಸ್ಲಿಂ ಧರ್ಮದ ಹಬ್ಬವಾದ ರಂಜಾನ್ ಉಪವಾಸ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ರಂಜಾನ್ ಮಾಸದಲ್ಲಿ ಮುಸ್ಲಿಮರಿಗೆ ಮಸೀದಿಯಲ್ಲಿ ಆಜಾನ್ ಕೂಗಲು ಅನುಮತಿ ನೀಡಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್‍ಗೆ ಮನವಿ ಸಲ್ಲಿಸಿದ್ದಾರೆ. ಮುಸ್ಲಿಮರಿಗೆ ರಂಜಾನ್ ತಿಂಗಳು ತುಂಬಾ ಪವಿತ್ರವಾದ ತಿಂಗಳು. ರಂಜಾನ್ ಮಾಸದಲ್ಲಿ ಶಾಂತಿ-ಸಹಬಾಳ್ವೆಗಾಗಿ ದಾನ-ಧರ್ಮದ ಮೂಲಕ ಮಸೀದಿಯಲ್ಲಿ ಕಟ್ಟುನಿಟ್ಟಾಗಿ ಪ್ರಾರ್ಥನೆಗಳು ನಡೆಯುತ್ತವೆ. ಇದರ ಜೊತೆ ಮುಸ್ಲಿಮರಿಗೆ ಆಜಾನ್ ಕೂಡ ಪವಿತ್ರ ರಂಜಾನ್ ಹಬ್ಬದ ಒಂದು ಭಾಗವೇ ಆಗಿದೆ. ಆದ್ದರಿಂದ ರಂಜಾನ್ ನಡೆಯುವ ಒಂದು ತಿಂಗಳ ಕಾಲ ಮಸೀದಿಯಲ್ಲಿ ಆಜಾನ್ ಕೂಗಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ರಂಜಾನ್ ಉಪವಾಸ ಮಾಡಲ್ಲ ಎಂದ ನಟಿ ಗೌಹರ್ ಖಾನ್; ಕಾರಣವೇನು?
ವಿಶೇಷ ಸಂದರ್ಭದಲ್ಲಿ ಅನುಮತಿ ಹಿನ್ನೆಲೆ ಮನವಿ :
ಈಗಾಗಲೇ ವಿಶೇಷ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ, ಕ್ರೀಡಾಕೂಟಗಳಲ್ಲಿ ರಾತ್ರಿ ಹಾಗೂ ಮುಂಜಾನೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದ್ದೀರಾ. ಅದೇ ರೀತಿ ಪವಿತ್ರ ರಂಜಾನ್ ವೇಳೆಯಲ್ಲಿ ಜಾವ 5 ರಿಂದ 5.30ರ ಒಳಗೆ ಗರಿಷ್ಠ ಐದು ನಿಮಿಷಗಳ ಕಾಲ ಧ್ವನಿವರ್ಧಕದ ಮೂಲಕ ಆಜಾನ್ ಕೂಗಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ವೇಳೆ ಕಾಂಗ್ರೆಸ್ ಮುಖಂಡ ಅಕ್ಮಲ್, ಕಿಸಾನ್ ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಉಪಸ್ಥಿತರಿದ್ದರು.