ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.14): ಸೋಲಾರ್ ಪ್ಲಾಂಟ್ ಯೋಜನೆ ಗ್ರಾಮದಲ್ಲಿ ಎರಡು ಗುಂಪುಗಳಾಗಿ ಪರಿವರ್ತನೆಗೆ ಕಾರಣವಾಗಿದೆ. ನಿರಂತರ ವಿದ್ಯುತ್ ನೀಡುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಿಮ್ಮಲಾಪುರದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣವಾಗುತ್ತಿದೆ. ಇದೇ ವಿಚಾರದಲ್ಲಿ ಗ್ರಾಮಸ್ಥರಲ್ಲಿ ಎರಡು ಗುಂಪಾಗಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ದಾರಿಯಾಗಿದೆ.
ಸಾಮರಸ್ಯದಿಂದ ಇದ್ದ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿಂದ ನೆಮ್ಮದಿ ಹಾಳು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಿಮ್ಮಲಾಪುರ ಗ್ರಾಮದ ಜಮೀನುಗಳು ಕಡೂರು ಹಾಗೂ ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಎರಡಕ್ಕೂ ಹರಿದಂಚಿವೆ. ಈ ಜಮೀನುಗಳಲ್ಲಿ ಬೆಂಗಳೂರು ಮೂಲದ ಖಾಸಗಿ (ಓಆರ್ಬಿ ಎನರ್ಜಿ ಪ್ರೇವೇಟ್ ಲಿಮಿಟೆಡ್ )ಕಂಪನಿಯು ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ ಸೋಲಾರ್ ಪ್ಲಾಂಟ್ ನಿಮಾಣ ಕೆಲಸ ಬಹುತೇಕ ಮುಗಿದಿದ್ದು ಲೈನ್ ಎಳೆಯಲು ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜೂನ್ 18ಕ್ಕೆ ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ JP NADDA ಆಗಮನ
ಓಆರ್ಬಿ ಕಂಪನಿ ನಿರ್ಮಾಣ ಮಾಡಲು ಮುಂದಾಗಿರುವ ಸೋಲಾರ್ ವಿದ್ಯುತ್ ಘಟಕವು ಒಟ್ಟು 25 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದ್ದು ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ನ್ನು ಪಂಚನಹಳ್ಳಿಯ ಬಳಿಯಿರುವ ಎಂವಿಎಸ್ಎಸ್ಗೆ ಸಂಪರ್ಕ ಕಲ್ಪಿಸಿ ಹಳ್ಳಿಗಳಿಗೆ ವಿದ್ಯತ್ ಪೂರೈಕೆ ಮಾಡುವ ಯೋಜನೆಯಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಊರಿನ ಪಕ್ಕದಲ್ಲೇ ಶಾಲಾ ಆವರಣಕ್ಕೂ ಹೊಂದಿಕೊಂಡಂತೆ ಹೈಟೆನ್ಷೆನ್ ಲೈನ್ ಎಳೆಯಲು ಮುಂದಾಗಿರುವುದೂ ಅಲ್ಲದೆ ತಮ್ಮ ಅನುಕೂಲಕ್ಕಾಗಿ ಇಡೀ ತಿಮ್ಮಲಾಪುರ ಗ್ರಾಮವನ್ನೇ ಒಡೆದು ಆಳಲು ಮುಂದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಯೋಜನೆಗಾಗಿ ಕಂಪನಿಯವರು ಭೂಮಿ ಖರೀದಿ ವೇಳೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ.
ಅಷ್ಟೇ ಅಲ್ಲದೆ ಕೇವಲ 10-20 ಸಾವಿರ ರೂ. ಗಳಿಗೆ ಜಮೀನು ಬಿಟ್ಟುಕೊಡುವಂತೆ ಬೆದರಿಕೆಯನ್ನೂ ಕೂಡಾ ಹಾಕಿಸುತ್ತಿದ್ದಾರೆ ಎಂದು ದೂರಿದ್ದಾರೆ. ಸೋಲಾರ್ ಕಂಪನಿಯವರು ಜಮೀನು ಖರೀದಿ ಮಾಡಿರುವ ಕುರಿತು ಯಾರೂ ಕೂಡಾ ವಿರೊಧಿಸುತ್ತಿಲ್ಲ ಆದರೆ ತಿಮ್ಮಾಲಾಪುರ ಶಾಲೆಗೆ ಸಂಬಂಧಿಸಿದ ಜಾಗಕ್ಕೆ ಹೊಂದಿಕೊಂಡು, ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ನಿವೇಶನ ರಹಿತರಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಸೋಲಾರ್ ಕಂಪನಿಯವರು ಲೈನ್ ಎಳೆಯಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿರುವ ಗ್ರಾಮಸ್ಥರು ಈಗಿರುವ ಜಾಗದಿಂದ 300 ಮೀ. ದೂರದಲ್ಲಿ ಹೈಟೆನ್ಷನ್ ಲೈನ್ ಎಳೆಯುವಂತೆ ಒತ್ತಾಯಿಸಿದ್ದಾರೆ.
ಪೊಲೀಸ್ ಠಾಣೆ-ಕೋರ್ಟ್ ಮೆಟ್ಟಿಲೇರಿದ ಸೋಲಾರ್ ವಿವಾದ: ಊರಿನ ಶಾಲೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿರುವಜಾಗವನ್ನು ಹೊರತುಪಡಿಸಿ ಸ್ವಲ್ಪ ದೂರದಲ್ಲಿ ಲೈನ್ ಎಳೆಯುವಂತೆ ಪಟ್ಟು ಹಿಡಿದಿರುವ ರೈತರು ಕೆಲ ದಿನಗಳ ಹಿಂದೆ ಜಮೀನು ಸರ್ವೆ ಮಾಡಲು ಬಂದ ಅಧಿಕಾರಿಗಳು ಯಾರಿಗೂ ಕೂಡಾ ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಿ, ಯಾರ ಅನುಮತಿಯೂ ಇಲ್ಲದೆ ಜಾಗ ಸರ್ವೆ ಮಾಡಲು ಮುಂದಾದಾಗ ವಿರೋಧಿಸಿ ತಡೆದ ರೈತರಿಬ್ಬರ ಮೇಲೆ ಕಂಪನಿಯ ಸಿಬ್ಬಂಧಿಗಳು ಹಲ್ಲೆ ನಡೆಸಿದ್ದಾರೆ. ಈ ಕುರಿತು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೋಲಾರ್ ಲೈನ್ ಎಳೆಯುವ ಕುರಿತು ಗ್ರಾಮಸ್ಥರು ಮತ್ತು ಕಂಪನಿಯ ನಡುವಿನ ಹೋರಾಟ ನ್ಯಾಯಾಲಯದಲ್ಲಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಪ್ರಕರಣ ವಿಚಾರಣೆಯ ಹಂತದಲ್ಲಿದೆ.
Udupi: ಕೊಡೆ ಸೇವೆಗೆ ಮೆಚ್ಚಿದಳಾ ಮಹಿಷಮರ್ದಿನಿ? ನಡೆದದ್ದು ಪವಾಡವೆಂದ ಭಕ್ತರು!
ಸೋಲಾರ್ ಕಂಪನಿ ಮತ್ತು ಪರವಾಗಿರುವವರ ವಾದ: 25 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿನ 25ರಿಂದ 30 ಹಳ್ಳಿಗಳಿಗೆ ವಿದ್ಯತ್ ಪೂರೈಕೆ ಮಾಡಲಾಗುತ್ತೆ. ಗ್ರಾಮದ ಸಂಪೂರ್ಣ ಅಭಿವೃದ್ಧಿ ಮತ್ತು ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳುತ್ತಿದ್ದಾರೆ.ಯಾವುದೇ ಯೋಜನೆ ಆರಂಭವಾಗಬೇಕಾದರೆ ಲಾಭ-ನಷ್ಟ, ಪರ-ವಿರೋಧಗಳಿದ್ದೇ ಇರುತ್ತವೆ ಹಾಗಂತ ವಿರೋಧ ಮಾಡಿದ್ದರೆ ನಮಗೆ ಜೋಗದಿಂದ ವಿದ್ಯತ್ ತರಲು, ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಚಿತ್ರದುರ್ಗದವರೆಗೆ ನೀರು ತರಲು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುವುದು ಗ್ರಾಮಸ್ಥರಾದ ಪ್ರಸನ್ನರವರವಾದ.
ಒಟ್ಟಾರೆ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಬೇಕು ಎನ್ನುವರ ಜೊತೆಗೆ ಬೇಡ ಎನ್ನುವರ ಗುಂಪು ಕೂಡ ಇದೆ. ಸೋಲಾರ್ ಪ್ಲಾಂಟ್ ನಿಂದ ಗ್ರಾಮದಲ್ಲಿ ಎರಡು ಗುಂಪುಗಳಾಗಿ ಪರಿವರ್ತನೆಯಾಗಿದ್ದು ತಿಮ್ಮಲಾಪುರ ಗ್ರಾಮಸ್ಥರು ಮೊದಲಿನಂತೆಯೇ ನೆಮ್ಮದಿಯ ನಿಟ್ಟುಸಿರು ಬಿಡಲು ಜಿಲ್ಲಾಡಳಿತ , ಜನಪ್ರತಿನಿಧಿಗಳು ಇದರ ಸಾಧಕ ಬಾದಕಗಳ ಬಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇದೆ.