ಮಳೆಯಿಂದ ಮಲೆನಾಡು ಬಾಗದಲ್ಲಿ ಮನೆ ಕುಸಿತವಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಮಲೆನಾಡಿನ ನೂರಾರು ಕುಟುಂಬಗಳು ಆತಂಕದಲ್ಲಿವೆ. ಈಗಾಗಲೇ ಕಣ್ಣೆದುರೇ ಮನೆ ಕಳೆದಕೊಂಡ ಸಂತ್ರಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜುಲೈ16): ಮಲೆನಾಡಿನಲ್ಲಿ ಮಳೆ ಜನರನ್ನು ಹೈರಾಣು ಮಾಡುತ್ತಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜನರ ಬದುಕು ಮೂರಾಬಟ್ಟೆಯಾಗಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲಾದ್ಯಂತ ಸಾಕಷ್ಟು ಅನಾಹುತಗಳು ಸಂಭವಿಸಿವೆ.ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಮನೆಗಳ ಕುಸಿತ ಹೆಚ್ಚಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿವೆ.
ಕಣ್ಣೆದುರೇ ಮನೆ ಕಳೆದಕೊಂಡ ಸಂತ್ರಸ್ಥರ ಕಣ್ಣಿರು
ನಿರಂತರ ಮಳೆಯಿಂದಾಗಿ ಮನೆಗಳು ಕುಸಿತಕ್ಕೊಳಗಾಗುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಲೆನಾಡಿನ ನೂರಾರು ಕುಟುಂಬಗಳು ಆತಂಕದಲ್ಲಿವೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೆಬ್ಬರಿಗೆ ಗ್ರಾಮದಲ್ಲಿ ವನಜಾಕ್ಷಿ ಎಂಬುವವರ ಮನೆ ಸಂಪೂರ್ಣ ಕುಸಿದುಬಿದ್ದಿದ್ದು, ನಿವಾಸಿಗಳು ಬೀದಿಗೆ ಬಂದಿದ್ದಾರೆ.ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಹಾರಿಹೋಗಿ, ಗೋಡೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಜೀವಾಪಾಯದಿಂದ ಪಾರಾಗಿದ್ದಾರೆ. ವರುಣ ಸೃಷ್ಟಿಸಿದ ಅವಾಂತರದಿಂದ ಮನೆಯಲ್ಲಿದ್ದ ವಸ್ತುಗಳು ಸರ್ವನಾಶವಾಗಿದೆ. ಕಣ್ಣೆದುರೇ ಮನೆ ಕುಸಿದು ಬಿದ್ದಿದ್ದನ್ನು ನೆನೆದು ಮನೆಯವರು ಕಣ್ಣೀರು ಹಾಕುತ್ತಿದ್ದಾರೆ.
ಕೊನೆಗೂ ಚಿಕ್ಕಮಗಳೂರಿಗೆ ಉಸ್ತುವಾರಿ ನೇಮಿಸಿದ ಸರ್ಕಾರ, ಆದೇಶ ಆಗುತ್ತಿದ್ದಂತೆಯೇ ಜಿಲ್ಲೆಗೆ ದೌಡು
ಮನೆ ಒಳಗೆ ಇದ್ದ ವಸ್ತು, ಪಠ್ಯಪುಸ್ತಕಗಳೆಲ್ಲವೂ ನೀರು ಪಾಲು
ಮಳೆಯಿಂದ ಮನೆ ಕುಸಿತದ ಜೊತೆಗೆ ಮನೆಯಲ್ಲಿದ್ದ ವಸ್ತುಗಳು ಕೂಡ ಹಾನಿಯಾಗಿತ್ತಿದ್ದು ವನಜಾಕ್ಷಿ ರವರ ಮನೆಯಲ್ಲಿದ್ದ ವಸ್ತುಗಳು ಸೇರಿದಂತೆ ಮಕ್ಕಳ ಪಠ್ಯಪುಸ್ತಕಗಳೆಲ್ಲವೂ ಮಳೆ ನೀರಿನಲ್ಲಿ ನೆನೆದು ಹಾಳಾಗಿವೆ. ದಿನಬಳಕೆ ವಸ್ತುಗಳು ಹಾನಿಗೀಡಾಗಿವೆ. ದಿಕ್ಕು ತೋಚದಂತಾಗಿರುವ ಕುಟುಂಬ ನೆರವಿನ ನಿರೀಕ್ಷೆಯಲ್ಲಿದ್ದು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕುಟುಂಬದವರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ರಣ ಮಳೆ ನಡುವೆ ಟಾರ್ಪಲ್ನಡಿ ಬದುಕು
ಮಳೆಯಿಂದ ಮನೆಕಳೆದುಕೊಂಡಿರುವ ಬಡ ಕುಟುಂಬವೊಂದು ಪ್ಲಾಸ್ಟಿಕ್ ಟಾರ್ಪಲ್ ಕಟ್ಟಿಕೊಂಡು ಮಳೆ ನೀರು ಸೋರುವ ಸೂರಿನಡಿ ದಿನ ದೂಡುತ್ತಿರುವ ಕರುಣಾ ಜನಕ ಪ್ರಕರಣ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಪಟ್ಟಣದ ಆಜಾದ್ ನಗರ ಬಡಾವನೆಯಲ್ಲಿ ಕಂಡುಬಂದಿದೆ.ಲೀಲಾ ಎಂಬ ಮಹಿಳೆ ನಾಲ್ಕು ಮಕ್ಕಳೊಂದಿಗೆ ಇಲ್ಲಿ ನೆಲೆಸಿದ್ದಾರೆ. ಮನೆಯೊಳಗೆ ನೀರಿನ ಸೆಲೆ ಜಿನುಗುತ್ತಿದೆ. ನೆಲದಲ್ಲಿ ಶೀತ ಹೆಚ್ಚಾಗಿದೆ ಅದರಲ್ಲೇ ಬದುಕು ಸಾಗಿಸಬೇಕಿದ್ದು, ಮಕ್ಕಳ ವಿದ್ಯಾಬ್ಯಾಸಕ್ಕೂ ತೀವ್ರ ಆಡಚಣೆ ಆಗುತ್ತಿದೆ. ಮೊದಲೇ ಬಡತನದಿಂದ ಓದುವಾಗಲೇ ಶಾಲೆ ಬಿಟ್ಟು ಓರ್ವ ಮಗಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದು, ನಮಗೆ ನೆರವಿನ ಅಗತ್ಯವಿದೆ ಎಂದು ಮಕ್ಕಳು ಕಣ್ಣೀರಿಟ್ಟಿದ್ದಾರೆ. ಕೂಡಲೇ ಅವರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕಿದೆ.
ನದಿಗಳಲ್ಲಿ ತೇಲಿ ಬರುತ್ತಿವೆ ಮೃತ ದೇಹಗಳು
ಮಳೆಯಿಂದ ತುಂಬಿ ಹರಿಯುತ್ತಿರುವ ಭದ್ರಾನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿದೆ. ಇಂದು ಬೆಳಿಗ್ಗೆ ಹಸುವೊಂದು ಬಿದ್ದು ಪ್ರಾಣಬಿಟ್ಟು ನೀರಿನಲ್ಲಿ ಕೊಚ್ಚಿಕೊಂಡುಬಂದು ಕಳಸಾದ ಹೆಬ್ಬಾಳೆ ಸೇತುವೆಮೇಲೆ ಬಿದ್ದಿರುವುದು ಕಂಡುಬಂದಿದೆ.ಹಲವು ದಿನಗಳಲ್ಲಿ ಭದ್ರಾನದಿಯಲ್ಲಿ ಮುಳುಗಡೆಯಾಗಿರುವ ಹೆಬ್ಬಾಳೆ ಸೇತುವೆ ಮೇಲೆ ಹರಿದು ಬಂದ ನೀರಿಲ್ಲಿ ಈ ಹುಸುವಿನ ಕಳೇಬರವೂ ಕೊಚ್ಚಿಕೊಂಡು ಬಂದಿದೆ. ಅಲ್ಲದೆ ಬಿಕ್ಕರಣೆ ಗ್ರಾಮದ ಬಳಿ ಮಹಿಳೆಯ ಮೃತ ದೇಹವೊಂದು ತೇಲಿ ಬಂದಿದೆ. ಭದ್ರಾ ನದಿಯ ಸೇರಿಕೊಳ್ಳುವ ಹಳ್ಳದಲ್ಲಿ ಮಹಿಳೆಯ ಮೃಹ ದೇಹ ತೇಲಿ ಬಂದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಾಹನ ಸಂಚಾರ ನಿಷೇಧ
ನಿರಂತರ ಮಳೆಯಿಂದ ಶುಕ್ರವಾರ ಶೃಂಗೇರಿ ತಾಲ್ಲೂಕಿನ ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ನೇರಳೆಕೂಡಿಗೆ ಬಳಿ ರಸ್ತೆ ಸಂಪೂರ್ಣ ಕುಸಿದಿರುವ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.ಮುಂಬವರುವ ಆಗಸ್ಟ್ 10 ರ ವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ಅಲ್ಲಿಯ ವರೆಗೆ ವಾಹನಗಳು ಬದಲಿ ಮಾರ್ಗವಾದ ಶೃಂಗೇರಿಯಿಂದ ಕಿಗ್ಗಾ ಮೂಲಕ ಬೇಗಾರು ಮಾರ್ಗದಲ್ಲಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.