ಕಲಬುರಗಿ ಡಿಸಿ ನಡೆ ಹಳ್ಳಿ ಕಡೆ: 396 ಅಹವಾಲು ಅರ್ಜಿ ಪೈಕಿ ಸ್ಥಳದಲ್ಲಿಯೇ 244 ವಿಲೇವಾರಿ

By Suvarna NewsFirst Published Jul 16, 2022, 7:37 PM IST
Highlights

ಜಿಲ್ಲಾಧಿಕಾರಿಗಳ‌ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಂಗವಾಗಿ ಗ್ರಾಮಸ್ಥರ ಅಹವಾಲು ಆಲಿಸಲು ಶನಿವಾರ ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ‌ ವಿ. ಗುರುಕರ್ ಅವರಿಗೆ   ಗ್ರಾಮದ‌ ಮಹಿಳೆಯರು ಕುಂಭ ಕಳಸದೊಂದಿಗೆ ಡಿ.ಸಿ. ಅವರಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.   ಈ ವೇಳೆ ಅವರು ಬಂದ 396 ಅಹವಾಲು ಅರ್ಜಿ ಪೈಕಿ ಸ್ಥಳದಲ್ಲಿಯೇ  244 ವಿಲೇವಾರಿ ಮಾಡಿದ್ದಾರೆ.

ವರದಿ: ಶರಣಯ್ಯ ಹಿರೇಮಠ, ಕಲಬುರಗಿ

ಕಲಬುರಗಿ,(ಜು.16):
ಜಿಲ್ಲಾಧಿಕಾರಿಗಳ‌ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಂಗವಾಗಿ ಗ್ರಾಮಸ್ಥರ ಅಹವಾಲು ಆಲಿಸಲು ಶನಿವಾರ ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ‌ ವಿ. ಗುರುಕರ್ ಅವರಿಗೆ ಗ್ರಾಮಸ್ಥರು ಮತ್ತು‌ ನೂರಾರು ಸಂಖ್ಯೆಯಲ್ಲಿ ಶಾಲಾ‌ ಮಕ್ಕಳು ಸಂಭ್ರಮದ ಸ್ವಾಗತ ಕೋರಿದರು

ಗ್ರಾಮದ‌ ಮಹಿಳೆಯರು ಕುಂಭ ಕಳಸದೊಂದಿಗೆ ಡಿ.ಸಿ. ಅವರಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಡಿ.ಸಿ. ಯಶವಂತ ವಿ. ಗುರುಕರ್ ಮತ್ತು ತಹಶೀಲ್ದಾರು ಸುರೇಶ ಶರ್ಮಾ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಈ ವೇಳೆ ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ನೃತ್ಯ, ಶಾಲಾ ಮಕ್ಕಳ ಲೇಜಿಮ್ ನೃತ್ಯ ಮೆರವಣಿಗೆಗೆ ಕಳೆ ತಂದಿತು. 

ಅಹವಾಲಿನಲ್ಲಿ 396 ಅರ್ಜಿ ಸಲ್ಲಿಕೆಯಾಗಿದ್ದು, ಸ್ಥಳದಲ್ಲಿಯೇ  244 ವಿಲೇವಾರಿ ಮಾಡಲಾಗಿದೆ. ಉಳಿದ 152 ಅರ್ಜಿಗಳ ವಿಲೇವಾರಿಗೆ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಕಲಬುರಗಿಯಲ್ಲಿ ಭಾರೀ ಮಳೆ: ಸೂತಕದ ಮನೆಗೆ ಹೋಗೋರಿಲ್ಲ, ಸಮಸ್ಯೆ ಕೇಳೋರಿಲ್ಲ..!

ಸರ್ಕಾರಿ ಸೌಲಭ್ಯ ಪಡೆಯಲು ಕಲಬುರಗಿ ಡಿಸಿ ಕರೆ 

ಸರ್ಕಾರಿ ಯೋಜನೆಗಳು ನಮಗೆ ತಲುಪಲ್ಲ. ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ ಎಂಬಿತ್ಯಾದಿ ಆಲಸ್ಯತನ ಬಿಟ್ಟು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಬೇಕು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಕರೆ ನೀಡಿದರು.

ಶನಿವಾರ ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮದ ಹೈನುಗಾರಿಕೆ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತಾರು ಜನಪರ ಯೋಜನೆಗಳು ಜಾರಿಗೆ ತಂದಿದೆ. ಇದರ ಲಾಭ ಪಡೆಯಬೇಕು. ಇಂದಿಲ್ಲಿ ಸ್ವೀಕರಿಸಿದ ಅರ್ಜಿಗಳನ್ನು 15 ದಿನದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.

ಬಿ.ಪಿ.ಎಲ್  ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಒದಗಿಸುವ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಶೇ.22ರಷ್ಟು ಜನ ಆರೋಗ್ಯ ಕಾರ್ಡ್ ಪಡೆದರೆ, ಕಮಲಾಪೂರ ತಾಲೂಕಿನಲ್ಲಿ ಕೇವಲ 23 ಸಾವಿರ ಜನ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳೀಯ ಗ್ರಾಮ ಒನ್ ಕೇಂದ್ರ, ಗ್ರಾ.ಪಂ.ಯಲ್ಲಿ 10 ರೂ. ಪಾವತಿಸಿ ಆರೋಗ್ಯ ಕಾರ್ಡ್ ಪಡೆದರೆ ಕಷ್ಟದ ಕಾಲದಲ್ಲಿ ಅದು ನೆರವಿಗೆ ಬರುತ್ತದೆ. ಗ್ರಾಮ ಒನ್ ಸೆಂಟರ್‍ನಲ್ಲಿ 700ಕ್ಕೂ ಹೆಚ್ಚು ಸೇವೆ ನೀಡುತ್ತಿದ್ದು, ಇನ್ಮುಂದೆ ತಾಲೂಕು, ಜಿಲ್ಲಾ ಸ್ಥಾನಕ್ಕೆ ಅರ್ಜಿ ಹಾಕಲು ಅಲಿಯಬೇಕಿಲ್ಲ. ಬಡವರು ಇಂತಹ ಯೋಜನೆಗಳ ಸೌಲಭ್ಯ ಪಡೆಯಬೇಕು. ತಾವು ಹಿಂದೆ ಏಳೆಂಟು ವರ್ಷ ಕುವೈತ್ ನಲ್ಲಿದಾಗ ಇದೇ ರೀತಿಯ ಅಲ್ಲಿ ಆರೋಗ್ಯ ಕಾರ್ಡ್ ಪಡೆದಿದ್ದೆ ಎಂದರು.

ಜಿಲ್ಲೆಯಲ್ಲಿ ಪಹಣಿ ತಿದ್ದುಪಡಿ, 11ಇ ನಕಾಶೆ ವಿತರಣೆ ಕೆಲಸಕ್ಕೆ ವೇಗ ನೀಡಿದೆ.  ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹಲವಾರು ಸವಲತ್ತು ನೀಡುತ್ತಿದ್ದು, ಕಾರ್ಮಿಕ ವರ್ಗ ಇದನ್ನು ಪಡೆಯಬೇಕು. ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ ಯೋಜನೆಯಡಿ 18 ರಿಂದ 40 ವಯಸ್ಸಿನ ಇ.ಎಸ್.ಐ, ಪಿ.ಎಫ್ ಸೌಲಭ್ಯ ಇಲ್ಲದ ಅಸಂಘಟಿತ ಕಾರ್ಮಿಕರು ಮಾಸಿಕ 56 ರೂ. ರಿಂದ 200 ರೂ. ವರೆಗೆ ಪ್ರೀಮಿಯಂ ಮೊತ್ತ ಪಾವತಿಸಿದಲ್ಲಿ 60 ವರ್ಷ ನಂತರ 3000 ರೂ. ಪಿಂಚಣಿ ದೊರೆಯಲಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಸಿರಾಜ್ ಡಿ. ಅವಂಟಿ, ಡಿ.ಡಿ.ಎಲ್.ಆರ್. ಶಂಕರ, ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಬೆಣ್ಣೂರಕರ್, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ಅವರು ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಗಂಡ ತೀರಿಕೊಂಡು 3 ವರ್ಷವಾಯಿತು, ಪರಿಹಾರ ಸಿಕ್ಕಿಲ್ಲ: 
ಅಹವಾಲು ಸ್ವೀಕಾರ ಸಂದರ್ಭದಲ್ಲಿ ಮಹಾಗಾಂವ ಕ್ರಾಸ್ ನಿವಾಸಿಯಾಗಿರುವ ವಿಧವೆ  ಶಾಂತಾಬಾಯಿ ದಿ. ನಾಗಪ್ಪ ನೀರ್ ಅವರು ಮನೆಯ ಮೇಲಿನ ವಿದ್ಯುತ್ ತಗುಲಿ ಗಂಡ ತೀರಿ ಮೂರು ವರ್ಷಗಳಾಗಿವೆ. ಶಾಸಕರಿಗೂ ಹಲವಾರು ಬಾರಿ ಮನವಿ ಮಾಡಿದ್ದೇನೆ, ಆದರೆ ನನಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನೀವಾದರೂ ನನಗೆ ಪರಿಹಾರ ಕೊಡಿಸಿ ಎಂದು ಡಿ.ಸಿ ಬಳಿ ತನ್ನ‌ ಅಳಲು ತೋಡಿಕೊಂಡಳು. ಇದಕ್ಕೆ ಸ್ಪಂದಿಸಿದ ಡಿ.ಸಿ. ಅವರು ಕೂಡಲೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ಸೂಚಿಸಿದರು. ತ್ರಿಚಕ್ರ ವಾಹನ ಒದಗಿಸುವಂತೆ ಬಬಲಾದ ಗ್ರಾಮದ ವಿಕಲಚೇತನ ಯುವತಿ ಪವಿತ್ರಾ ಅವರು ಡಿ.ಸಿ.ಗೆ ಮನವಿ ನೀಡಿದರು.

18 ಲಕ್ಷ ರೂ. ಸಹಾಯಧನ ವಿತರಣೆ:
ಡಿ.ಸಿ.ಸಿ ಬ್ಯಾಂಕಿನಿಂದ ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ 2 ಲಕ್ಷ ರೂ. ಗಳಂತೆ ಶ್ರೀ ಮಲ್ಲಿಕಾರ್ಜುನ ಮಹಿಳಾ ಸ್ವ-ಸಹಾಯ ಗುಂಪು, ಭಾಗ್ಯವಂತಿ ಮಹಿಳಾ ಸ್ವ-ಸಹಾಯ ಗುಂಪು, ಮಾತೋಶ್ರೀ ಕಲ್ಯಾಣಮ್ಮ ಸ್ವ-ಸಹಾಯ ಗುಂಪು ಸೇರಿದಂತೆ ಒಟ್ಟು 9 ಸಂಘಗಳಿಗೆ 18 ಲಕ್ಷ ರೂ. ಸಹಾಯಧನದ ಚೆಕ್‍ಗಳನ್ನು ಡಿ.ಸಿ. ಯಶವಂತ ವಿ. ಗುರುಕರ್ ಅವರು ವಿತರಿಸಿದರು. ಇದಲ್ಲದೆ ಕೃಷಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮಹಾಗಾಂವ ಗ್ರಾಮದ ಸುಭದ್ರಬಾಯಿ ಗಂಡ ಸುಭಾಶ್ಚಂದ್ರ ಮತ್ತು ಮಲ್ಲಮ್ಮ ಗಂಡ ಪ್ರಭುದೇವ, ಬೆಳಕೋಟಾ ಗ್ರಾಮದ ಶಿವಲಿಂಗ ಶ್ರೀಮಂತ, ಯಂಕಂಚಿ ಗ್ರಾಮದ ಹಸೀನಾಬಿ, ನಾವದಗಿ(ಬಿ) ಗ್ರಾಮದ ಕರಣ ತಂ. ಅಮೃತ ಅವರಿಗೆ 22,000 ರೂ. ಮೊತ್ತದ ಸ್ಪ್ರಿಂಕ್ಲರ್ ಸೆಟ್‍ಗೆ 19,930 ರೂ. ಸರ್ಕಾರದ ಸಬ್ಸಿಡಿ ಮಂಜೂರಾತಿಯ ಕಾರ್ಯಾದೇಶ ನೀಡಲಾಯಿತು. 

ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳು ಮದುವೆ ಮಾಡಿಕೊಂಡಿದ್ದರಿಂದ ಚಂದ್ರನಗರ ಗ್ರಾಮದ ಲಕ್ಷ್ಮೀಬಾಯಿ ಮತ್ತು ಮಹಾಗಾಂವ ಗ್ರಾಮದ ಜಗದೇವಿ ಅವರಿಗೆ ತಲಾ 50 ಸಾವಿರ ರೂ. ಸಹಾಯಧನ ಮಂಜೂರಾತಿ ಪತ್ರ ಮತ್ತು 40 ಜನರಿಗೆ ಇ-ಶ್ರಮ್ ಕಾರ್ಡ್ ನೀಡಲಾಯಿತು. ಪಶು ಸಂಗೋಪನೆ ಇಲಾಖೆಯಿಂದ ಕುರಿ-ಮೇಕೆಗೆ ವಿಮೆ ಮಾಡಿಸಿದವರಿಗೆ ವಿಮೆ ಪತ್ರ ನೀಡಲಾಯಿತು. ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಆರೋಗ್ಯ ಶಿಬಿರದಲ್ಲಿ ವೈದ್ಯ ಡಾ.ಶಿವರಾಜ ನೇತೃತ್ವದ ತಂಡ ಸುಮಾರು 60 ಜನರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿತು.

ಡಿ.ಸಿ.ಯಿಂದ ರೊಟ್ಟಿ ಖರೀದಿ;
ಮೆರವಣಿಗೆ ಆರಂಭಕ್ಕು ಮುನ್ನ ಮಹಾಗಾಂವ ಕ್ರಾಸ್‌ನಲ್ಲಿ ಅಕ್ಕಮಹಾದೇವಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಮಿತಿಯ ಮಹಿಳೆಯರು ಮನೆಯಲ್ಲಿ ತಯ್ಯಾರಿಸಿದ ಕರಕುಶಲ, ದಿನಸಿಗಳ ಮಾರಾಟಕ್ಕೆ ಇಟ್ಟಿರುವ ಸಂತೆ ಮೇಳಕ್ಕೆ ಭೇಟಿ ನೀಡಿ 50 ರೂ. ನೀಡಿ ಖಡಕ್ ಜೋಳದ ರೊಟ್ಟಿ, ಚುರುಮುರಿ ಖರೀದಿಸಿದರು.

ಇದೇ ಸಂದರ್ಭದಲ್ಲಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಇನ್ಸ್ಪೈರ್ ಅವಾರ್ಡ್ ಪಡೆದ ತಾಲೂಕಿನ ಭೂಸಣಗಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ತನುಜಾ, ಪೂಜಾ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಕೇಂದ್ರ, ಪಡಿತರ ಚೀಟಿ ವಿತರಣಾ ಕೇಂದ್ರ, ಪಹಣಿ ತಿದ್ದುಪಡಿ ಕೇಂದ್ರ, ಕಾರ್ಮಿಕ ಕಾರ್ಡ್ ನೋಂದಣಿ ಕೇಂದ್ರ ತೆಗೆಯಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಮಹಾಗಾಂವ ಗ್ರಾಮ ಪಂಚಾಯತಿ ಅಧ್ಯಕ್ಷೆ ಮನಿಷಾ ನಂದಕುಮಾರ ಹರಸೂರ, ಸಹಾಯಕ ಅಯುಕ್ತೆ ಮೋನಾ ರೋಟ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಾಂತಗೌಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಅಲ್ಲಾಭಕಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ವಿ.ಶಿವಪ್ರಕಾಶ, ಮಹಾಗಾಂವ ಹೈನುಗಾರಿಕೆ ಮಹಾವಿದ್ಯಾಲಯದ ಮಂಜುನಾಥ, ರಾಮಪ್ಪ ಹೆಚ್.ಕೆ, ಗ್ರೇಡ್ -2 ತಹಶೀಲ್ದಾರ ಗಂಗಾಧರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ತಹಶೀಲ್ದಾರ ಸುರೇಶ ವರ್ಮಾ ಸ್ವಾಗತಿಸಿದರು.

ಇದಕ್ಕೂ ಮುನ್ನ ಗ್ರಾಮಸ್ಥರ ಅಹವಾಲು ಆಲಿಸಲು ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ ವಿ. ಗುರುಕರ್ ಅವರಿಗೆ ಗ್ರಾಮಸ್ಥರು ಮತ್ತು ನೂರಾರು ಸಂಖ್ಯೆಯಲ್ಲಿದ್ದ ಶಾಲಾ ಮಕ್ಕಳು ಸಂಭ್ರಮದ ಸ್ವಾಗತ ಕೋರಿದರು. ಮಹಿಳೆಯರು ಕುಂಭ ಕಳಸದೊಂದಿಗೆ ಡಿ.ಸಿ. ಅವರಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.  ತದನಂತರ ಡಿ.ಸಿ. ಯಶವಂತ ವಿ. ಗುರುಕರ್ ಮತ್ತು ತಹಶೀಲ್ದಾರ ಸುರೇಶ ವರ್ಮಾ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಮಹಾಗಾಂವ ಕ್ರಾಸ್ ನಿಂದ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು. ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ನೃತ್ಯ, ಶಾಲಾ ಮಕ್ಕಳ ಲೇಜಿಮ್ ನೃತ್ಯ ಮೆರವಣಿಗೆಗೆ ಕಳೆ ತಂದಿತು.

click me!