ಒಮ್ಮೆ ಹೂಡಿಕೆ, 30 ವರ್ಷ ನಿರಂತರ ಆದಾಯ! ಅಡಕೆ ಸಾಲಿನಲ್ಲಿ ಮಿಂಚಿದ ಡ್ರಾಗನ್ ಫ್ರೂಟ್

Published : Oct 31, 2026, 11:22 AM IST
Dragon Fruit

ಸಾರಾಂಶ

ಮಲೆನಾಡಿನಲ್ಲಿ ಅಡಕೆ ರೋಗದಿಂದ ಕಂಗೆಟ್ಟ ರೈತರಿಗೆ ಡ್ರಾಗನ್ ಫ್ರೂಟ್ ಕೃಷಿ ಹೊಸ ಭರವಸೆ ಮೂಡಿಸಿದೆ. ನರಸಿಂಹರಾಜಪುರದ ಯಡಗೆರೆ ರೈತ ಶ್ರೀನಿವಾಸ್ ಒಣ ಭೂಮಿಯಲ್ಲಿ ಈ ಬೆಳೆ ಬೆಳೆದು ಎಕರೆಗೆ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ.

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ: ಮಲೆನಾಡು ಭಾಗದಲ್ಲಿ ಅಡಕೆಯನ್ನೇ ನಂಬಿದ್ದ ರೈತರಿಗೆ ಇತ್ತೀಚಿನ ವರ್ಷಗಳಲ್ಲಿ ಅಡಕೆಗೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗದಿಂದ ಸಂಪೂರ್ಣವಾಗಿ ನೆಲ ಕಚ್ಚುತ್ತಿರುವ ಈ ಸಂದರ್ಭದಲ್ಲಿ ಸಣ್ಣ ರೈತರನ್ನು ಈ ಡ್ರಾಗನ್ ಫ್ರೂಟ್ ಎಂಬ ವಾಣಿಜ್ಯ ಬೆಳೆ ಬೆಳೆದು ಲಕ್ಷಾಂತರ ಆದಾಯಗಳಿಸುವ ಮಾರ್ಗ ಕೈಹಿಡಿದಿದೆ.

ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ಯಡಗೆರೆಯ ಕಬ್ಬಿನತೋಟ ಶ್ರೀನಿವಾಸ್ ತಮ್ಮ ಅರ್ಧ ಎಕರೆಯಲ್ಲಿ ಡ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡವರು.

ಪಾಪಸ್ ಕಳ್ಳಿ ಜಾತಿಗೆ ಸೇರಿದ ಡ್ರಾಗನ್ ಫ್ರೂಟ್ ಬಳ್ಳಿಯಲ್ಲಿ ಬರುವ ಹಣ್ಣು. ಕಾಳು ಮೆಣಸು,ವೆನಿಲ್ಲಾ ಬೆಳೆ ರೀತಿಯಲ್ಲೇ ಬಳ್ಳಿ ಯನ್ನು ಹಬ್ಬಿಸಬೇಕಾಗಿದೆ. ಕೇವಲ ಅಡಕೆಯನ್ನೇ ನಂಬಿಕೊಂಡು ಕೂರುವ ಬದಲು ರೈತರು ಹೊಸ ಬೆಳೆ ಡ್ರಾಗನ್ ಫ್ರೂಟ್ ಬೆಳೆಯುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

ಡ್ರಾಗನ್ ಫ್ರೂಟ್‌ ಬೆಳೆಯುವ ವಿಧಾನ

ಒಂದು ಎಕರೆಯಲ್ಲಿ ಡ್ರಾಗನ್ ಫ್ರೂಟ್‌ ನ 1680 ಗಿಡ ನೆಡಬಹುದು. 10 ಅಡಿ ದೂರದಂತೆ ನೆಲ ಮಟ್ಟದಿಂದ 4 ಅಡಿ ಎತ್ತರದ 420 ಸಿಮೆಂಟು ಕಂಬ ನೆಟ್ಟು ಕಂಬದ ಮೇಲೆ ಸಿಮೆಂಟಿನ ವೃತ್ತಾಕಾರದ ರಿಂಗ್ ಹಾಕಿ ಪ್ರತಿ ಸಿಮೆಂಟ್ ಕಂಬದ ಮೇಲೆ 4 ಗಿಡಗಳನ್ನು ನೆಡಬೇಕು. ಈ ಗಿಡಗಳು ಮೇಲೆ ಬಂದು ರಿಂಗ್ ಮೇಲೆ ಹಬ್ಬುತ್ತದೆ. ಗಿಡಗಳನ್ನು ಚೆನ್ನಾಗಿ ಆರೈಕೆ ಮಾಡಿದರೆ 18 ತಿಂಗಳಲ್ಲೇ ಹಣ್ಣು ಕೊಯ್ಲಿಗೆ ಬರುತ್ತದೆ. 30 ವರ್ಷಗಳ ಕಾಲ ನಿರಂತರವಾಗಿ ಗಿಡಗಳಿಂದ ಉತ್ತಮ ಹಣ್ಣು ನಿರೀಕ್ಷೆ ಮಾಡಬಹುದು. ನಂತರ ಹಣ್ಣು ಕಡಿಮೆಯಾಗುವುದರಿಂದ ಆ ಗಿಡಗಳನ್ನು ತೆಗೆದು ಅದೇ ಕಂಬಗಳಿಗೆ ಮತ್ತೆ ಹೊಸ ಪ್ಲಾಂಟ್ ಮಾಡಬೇಕಾಗಿದೆ.

ಎಕರೆಗೆ ₹8 ರಿಂದ 10 ಲಕ್ಷ ಆದಾಯ

ಒಂದು ಎಕರೆಗೆ ಅತಿ ಕಡಿಮೆ ಎಂದರೂ 10 ಟನ್ ಹಣ್ಣು ಬರಲಿದೆ. ಮೇ ನಿಂದ ಪ್ರಾರಂಭವಾದರೆ ಡಿಸೆಂಬರ್ ವರೆಗೆ 4 ಹಂತದಲ್ಲಿ ಹಣ್ಣು ಬರಲಿದೆ. ಈಗಿನ ಧಾರಣೆ 1 ಟನ್ ಡ್ರಾಗನ್ ಫ್ರೂಟ್‌ ಗೆ ₹80 ಸಾವಿರ ವಿದೆ. ಅಂದರೆ 1 ಎಕರೆಗೆ ₹8 ರಿಂದ 10 ಲಕ್ಷ ಆದಾಯ ನಿರೀಕ್ಷೆ ಮಾಡಬಹುದು. ಡ್ರಾಗನ್ ಫ್ರೂಟ್‌ ನಲ್ಲೂ ಧಾರಣೆ ಏರಿಳಿತ ಆಗಿದೆ. 6 ವರ್ಷದ ಹಿಂದೆ 1 ಟನ್ ಡ್ರಾಗನ್ ಫ್ರೂಟ್‌ ಗೆ ₹3 ಲಕ್ಷ ಇತ್ತು. ಧಾರಣೆ ಇಳಿದು ಕಳೆದ 3 ವರ್ಷದ ಹಿಂದೆ 1 ಟನ್ ಡ್ರಾಗನ್ ಫ್ರೂಟ್‌ ಗೆ 1.50 ಲಕ್ಷ ಇತ್ತು. ಈ ವರ್ಷ 1 ಟನ್ ಗೆ ₹80 ಸಾವಿರದಿಂದ ₹2 ಲಕ್ಷ ದವರೆಗೂ ಧಾರಣೆ ಇದೆ.

ಎಪಿಎಂಸಿಗಳಿಗೆ ರವಾನೆ

ಡ್ರಾಗನ್ ಪ್ರೂಟ್ ಗೆ ಹಣ್ಣಿನ ಅಂಗಡಿಗಳೇ ಮಾರುಕಟ್ಟೆ. ಸಣ್ಣ ಊರುಗಳ ಹಣ್ಣಿನ ಅಂಗಡಿಗಳು ಸಹ ಡ್ರಾಗನ್ ಫ್ರೂಟ್ ಖರೀದಿ ಮಾಡುತ್ತಾರೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತರೀಕೆರೆ ಮುಂತಾದ ಎಪಿಎಂಸಿಗಳಿಗೆ ಡ್ರಾಗನ್ ಫ್ರೂಟ್ ಕಳಿಸಬಹುದಾಗಿದೆ. ಇದನ್ನು ಬೆಳೆದ ರೈತರು ಮಾರುಕಟ್ಟೆಯ ಕಡೆಗೂ ಗಮನ ನೀಡಬೇಕು.

ರೈತನ ಮಾತು

ನಾನು ಅರ್ಧ ಎಕರೆ ಒಣ ಭೂಮಿಯಲ್ಲಿ ಡ್ರಿಪ್ ಇರಿಗೇಶನ್ ಮಾಡಿ ಡ್ರಾಗನ್ ಫ್ರೂಟ್ ಬೆಳೆದಿದ್ದೇನೆ. ನೀರು ಬಸಿದು ಹೋಗುವ ಜಾಗ ಡ್ರಾಗನ್ ಫ್ರೂಟ್ ಬೆಳೆಯಲು ಸೂಕ್ತ. ಗಿಡ ನೆಟ್ಟು 18 ತಿಂಗಳಿಗೆ ಫಸಲು ಬಂದಿದೆ. ಪ್ರಾರಂಭದಲ್ಲಿ ಲಕ್ಷಾಂತರ ರು. ಖರ್ಚು ಮಾಡಿದ್ದೇನೆ. ಈಗ ಆದಾಯ ಪ್ರಾರಂಭವಾಗಿದೆ. ಮುಂದೆ 30 ವರ್ಷದವರೆಗೆ ಆದಾಯ ನಿರೀಕ್ಷೆ ಮಾಡಬಹುದು. ವರ್ಷದಲ್ಲಿ 6 ತಿಂಗಳು 4 ಹಂತದಲ್ಲಿ ಹಣ್ಣು ಬರಲಿದೆ. ಉತ್ತಮ ಸಾವಯವ ಗೊಬ್ಬರ ಹಾಕಿ ಕೃಷಿ ಮಾಡಿ ದರೆ 1 ಹಣ್ಣು ಅರ್ಧ ಕೆ.ಜಿ.ಯಿಂದ 1 ಕೆ.ಜಿ.ವರೆಗೂ ತೂಕ ಬರಲಿದೆ.

ಕಬ್ಬಿನತೋಟ ಶ್ರೀನಿವಾಸ್, ಡ್ರಾಗನ್ ಪ್ರೂಟ್ ಬೆಳೆಗಾರ, ಯಡಗೆರೆ, ನರಸಿಂಹರಾಜಪುರ

PREV
Read more Articles on
click me!

Recommended Stories

ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ: ಯುವ ಪೀಳಿಗೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೀಡಿದ ಕಿವಿ ಮಾತು ಏನು?
Online ಪೇಮೆಂಟ್ ರಿಜೆಕ್ಟ್, 1 AMಗೆ ಚಿಲ್ಲರೆಗಾಗಿ ರೈಡರ್ ಕಣ್ಣೀರು; ಮುಂದೆ ಕಂಡಿದ್ದು ನರಕ!