
ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ 'ಕಾನ್ರಾಡ್' ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ಭಾರಿ ದುರಂತ ಸಂಭವಿಸಿದೆ, ಈಜುಕೊಳದಲ್ಲಿ ಈಜುತ್ತಾ ಎಂಜಾಯ್ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಇಬ್ಬರು ವಿದೇಶಿ ಪ್ರವಾಸಿಗರು ದಾರುಣವಾಗಿ ಮೃತಪಟ್ಟಿದ್ದಾರೆ. ಹೋಟೆಲ್ ಆಡಳಿತ ಮಂಡಳಿಯ ತೀವ್ರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ನಗರದ ಕಾನ್ರಾಡ್ ಹೋಟೆಲ್‌ನಲ್ಲಿ ತಂಗಿದ್ದ ವಿದೇಶಿ ಪ್ರವಾಸಿಗರು, ಹೋಟೆಲ್‌ನ 3ನೇ ಮಹಡಿಯಲ್ಲಿರುವ ಈಜುಕೊಳಕ್ಕೆ ಇಳಿದಿದ್ದರು. ನಿನ್ನೆ ಸಂಜೆಯ ವೇಳೆಗೆ ಈಜುಕೊಳದಲ್ಲಿದ್ದ ನೀರಿಗೆ ಸಡನ್ ಆಗಿ ವಿದ್ಯುತ್ ಹರಿದ ಪರಿಣಾಮ, ಕೊಳದಲ್ಲಿದ್ದ ಪ್ರವಾಸಿಗರಿಗೆ ತೀವ್ರ ಸ್ವರೂಪದ ಎಲೆಕ್ಟ್ರಿಕ್ ಶಾಕ್ ಹೊಡೆದಿದೆ.
ದುರಂತದಲ್ಲಿ ಸ್ಲೊವಾಕಿಯಾ ಮೂಲದ ಹೊರಿಯಾಟ್ (45) ಹಾಗೂ ಜರ್ಮನ್/ಡಚ್ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲನ್ (59) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನೀರಿಗೆ ವಿದ್ಯುತ್ ಪ್ರವಹಿಸಿದ ತಕ್ಷಣ ಇವರ ರಕ್ಷಣೆಗೆ ಅಮೆರಿಕ ಮೂಲದ ಮತ್ತೊಬ್ಬ ಪ್ರವಾಸಿಗ ಹಾಗೂ ಹೋಟೆಲ್‌ನ ಲೈಫ್‌ಗಾರ್ಡ್ (ಫೂಲ್ ಅಟೆಂಡರ್) ಧಾವಿಸಿದ್ದಾರೆ. ರಕ್ಷಣಾ ಯತ್ನದಲ್ಲಿದ್ದ ಅವರಿಬ್ಬರಿಗೂ ಕೂಡ ವಿದ್ಯುತ್ ಸ್ಪರ್ಶಿಸಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಹಲಸೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಜುಕೊಳದ ಸುತ್ತಮುತ್ತಲಿನ ವಿದ್ಯುತ್ ಸಂಪರ್ಕ ಹಾಗೂ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಮಣಿಪಾಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಘಟನೆಗೆ ಹೋಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸರಿಯಾದ ನಿರ್ವಹಣೆ ಇಲ್ಲದಿರುವುದೇ ನೇರ ಕಾರಣವೆಂದು ಮೃತ ಅಲೆಕ್ಸಾಂಡರ್ ಅವರ ಪತ್ನಿ ಹಲಸೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹೋಟೆಲ್ ಮಾಲೀಕರು ಹಾಗೂ ನಿರ್ವಹಣಾ ಸಿಬ್ಬಂದಿ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.