
ರಾಮನಗರ : ಬಿಡದಿ ಟೌನ್‌ಶಿಪ್ Bidadi Township land acquisition (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆಗೆ ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಉಳಿದೆರಡು ಕಂದಾಯ ಗ್ರಾಮಗಳ ಭೂ ಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ಯೋಜನಾ ವ್ಯಾಪ್ತಿಗೆ ಒಳಪಡುವ ಕಂಚುಗಾರನಹಳ್ಳಿ ಹಾಗೂ ಬೈರಮಂಗಲ ಗ್ರಾಮಗಳ ಭೂಸ್ವಾಧೀನಕ್ಕೆ ಫೈನಲ್ ನೋಟಿಫಿಕೇಷನ್ ಪ್ರಕಟಿಸಿದೆ. ಬೈರಮಂಗಲ ಗ್ರಾಮದ 1,866 ರೈತರಿಗೆ ಸೇರಿದ ಒಟ್ಟು 1,130 ಎಕರೆ ಭೂಮಿ ಹಾಗೂ ಕಂಚುಗಾರನಹಳ್ಳಿ ಗ್ರಾಮದ 1,405 ರೈತರಿಗೆ ಸೇರಿದ ಒಟ್ಟು 753 ಎಕರೆ ಭೂಮಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 7 ಗ್ರಾಮಗಳ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಮೊದಲಿಗೆ ಜೂನ್ 10ರಂದು ವಡೇರಹಳ್ಳಿ, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ ಹಾಗೂ ಜುಲೈ 15ರಂದು ಅರಳಾಳುಸಂದ್ರ, ಬನ್ನಿಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆಯಾಗಿತ್ತು.
ಆನಂತರ ರೈತರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ಕಾರಣ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ. ಇದೀಗ ಬಾಕಿ ಉಳಿದಿದ್ದ ಆ ಎರಡು ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದೆ.
ರಾಜ್ಯ ಸರ್ಕಾರದ ನಡೆ ವಿರುದ್ಧ ರೈತರ ಆಕ್ರೋಶ ಹೆಚ್ಚಾಗಿದ್ದು, ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ನೈಸ್ ರಸ್ತೆಗೆ ಪರ್ಯಾಯವಾಗಿ ಬಿಡಿಎಯಿಂದ 'PRR-2' ಯೋಜನೆಗೆ ಮರುಜೀವ: 1,126 ಭೂಮಾಲೀಕರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ!
ಇದನ್ನೂ ಓದಿ: ಬೆಂಗಳೂರಿನ ಭವಿಷ್ಯ ಬದಲಿಸಲು 13,500 ಎಕರೆಗಳ ಮೆಗಾ ಪ್ಲಾನ್! 9 ಕೈಗಾರಿಕಾ ಟೌನ್‌ಶಿಪ್, 1 ಟ್ರಿಲಿಯನ್ ಆರ್ಥಿಕತೆಯ ಗುರಿ
| ಗ್ರಾಮ ಪ್ರದೇಶ | ಪ್ರದೇಶ (ಎಕರೆ) | ಖಾತೆದಾರರು |
| ಕೆಂಪಯ್ಯನಪಾಳ್ಯ | 384 | 406 |
| ಮಂಡಲಹಳ್ಳಿ | 71 | 52 |
| ವಡೇರಹಳ್ಳಿ | 63 | 76 |
| ಅರಳಾಳುಸಂದ್ರ | 1460 | 1250 |
| ಹೊಸರು | 2390 | 1796 |
| ಕೆ.ಜಿ.ಗೊಲ್ಲರಪಾಳ್ಯ | 315 | 243 |
| ಬನ್ನಿಗಿರಿ | 775 | 641 |
| ಕಂಚುಗಾರನಹಳ್ಳಿ | 753 | 1405 |
| ಬೈರಮಂಗಲ | 1130 | 1866 |