
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.21): ಮಕ್ಕಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಮಕ್ಕಳನ್ನ ಅಂಡರ್ ಗ್ರೌಂಡ್ ರೂಮಿನಲ್ಲಿ ಉಪವಾಸವಿಟ್ಟು ಮನಸ್ಸು ಇಚ್ಛೆ ಹಲ್ಲೇ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ಸತೀಶ್ ಹಾಗೂ ವಾರ್ಡನ್ ಅಭಯ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.
ಅಂಡರ್‌ಗ್ರೌಂಡ್ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ: ಮಕ್ಕಳ ಆಟವಾಡುತ್ತಿದ್ದರು ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳನ್ನ ಶಾಲೆಯ ಅಂಡರ್‌ಗ್ರೌಂಡ್ ಕೊಠಡಿಯಲ್ಲಿ ಕೂಡಿ ಹಾಕಿ, ಉಪವಾಸದಲ್ಲಿಟ್ಟು ಪ್ರಾಚಾರ್ಯರು ಹಾಗೂ ಸಿಬ್ಬಂದಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಅಂಡರ್‌ಗ್ರೌಂಡ್ ರೂಮಿನಲ್ಲಿ ಬಂಧಿತ ಮಕ್ಕಳು ಕೂಗಾಡುತ್ತಿದ್ದುದನ್ನು ಕೇಳಿ ಸೌದೆ ಒಡೆಯುತ್ತಿದ್ದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಒಳಗೆ ವಿದ್ಯಾರ್ಥಿಗಳು ಸಿಲುಕಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ಮಕ್ಕಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದಾಗ, ಅಂಡರ್‌ಗ್ರೌಂಡ್ ರೂಮಿನಲ್ಲಿ ವಿದ್ಯಾರ್ಥಿಗಳು ಇದ್ದುದು ದೃಢಪಟ್ಟಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಶಾಲೆಯ ಪ್ರಾಚಾರ್ಯ ಸತೀಶ್ ಹಾಗೂ ಸಿಬ್ಬಂದಿಗಳಾದ ಶುಭಮ್ ಮತ್ತು ಅಭಯ್ ವಿರುದ್ಧ ಸ್ಥಳೀಯರು ಕೂಡಿಹಾಕಿ ಹಲ್ಲೆ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಚಾರ್ಯರು ಉತ್ತರ ಭಾರತ ಮೂಲದವರಾಗಿದ್ದು ಮಕ್ಕಳು ಸ್ಥಳಿಯರು ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಶಾಲೆಯ ಪ್ರಾಚಾರ್ಯರಾದ ಸತೀಶ್ ನಾವು ಹಲ್ಲೆ ಮಾಡಿಲ್ಲ, ಸಿಲಿಂಡರ್ ತರಲು ಹೋದಾಗ ಮಕ್ಕಳೇ ಜಗಳವಾಡಿಕೊಂಡು ಹೊಡೆದಾಡಿದ್ದಾರೆ ಎಂದು ಸಮಾಜಾಯಿಷಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.