ಚಿಕ್ಕಮಗಳೂರು ಜಿಲ್ಲಾದ್ಯಂತ ಮುಂದುವರೆದ ಮುಂಗಾರು ಮಳೆಯ ಆರ್ಭಟ . 2019ರ ಮಹಾಮಳೆಗೆ ನಲುಗಿದ ಸಂತ್ರಸ್ಥರಿಗೆ ಸರ್ಕಾರದ ನಡೆಯಿಂದ ಬೇಸರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ಥರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.7): 2019ರ ಮಹಾಮಳೆಗೆ ಕಾಫಿನಾಡಲ್ಲಿ ಆಗಿರೋ ಅನಾಹುತ ಅಂತಿಂಥದಲ್ಲ. ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಊರಿಗೆ ಊರೇ ಸಂಪೂರ್ಣ ಕೊಚ್ಚಿಕೊಂಡು ಹೋಯ್ತು,ಜನರ ಜೀವವೊಂದು ಉಳೀತು ಬಿಟ್ರೆ ಮನೆಗಳು ಎಲ್ಲಿದ್ದು ಅನ್ನೋ ಗುರುತು ಸಿಗಲಿಲ್ಲ. ಹೀಗೆ ಎದ್ನೋ ಬಿದ್ನೋ ಅಂತಾ ಓಡಿಬಂದು ಜೀವ ಉಳಿಸಿಕೊಂಡಿದ್ದ ಜನರಿಗೆ ನಿಮ್ಮ ಭವಿಷ್ಯ ಕಟ್ಟುವ ಹೊಣೆ ನಮ್ಮದು ಅಂತಾ ಹೇಳಿದ ಸರ್ಕಾರ 4ನೇ ಮಳೆಗಾಲ ಬಂದ್ರೂ ಅದೇ ರಾಗ ಅದೇ ಹಾಡು. 2019ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಅತೀವೃಷ್ಟಿಯಿಂದಾಗಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಗ್ರಾಮದಲ್ಲಿದ್ದ 5 ಕುಟುಂಬಗಳಿಗೆ ಸೇರಿದ್ದ ಮನೆ, ಜಮೀನು ಸಂಪೂರ್ಣವಾಗಿ ಮಣ್ಣುಪಾಲಾಗಿದ್ದವು. ಸಂಕಷ್ಟಕ್ಕೀಡಾಗಿದ್ದ 5 ಕುಟುಂಬಗಳ ಜನರು ಪಾವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿ ಮನೆ, ಜಮೀನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದವು. ಸಂತ್ರಸ್ಥರಾದ 5 ಕುಟುಂಬಗಳ ಸದಸ್ಯರು ಆರಂಭದಲ್ಲಿ ತಾತ್ಕಲಿಕ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ನಂತರ ಸರಕಾರದ ಭರವಸೆ ಮೇರೆಗೆ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು. ಅತೀವೃಷ್ಟಿ ಸಂದರ್ಭ ಅಂದಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದರು.
ಖದ್ದು ಸಿಎಂ , ಸಚಿವರು ಪರಿಶೀಲನೆ ನಡೆಸಿ ಭರವಸೆ: ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಮಲೆಗ್ರಾಮಕ್ಕೆ ಭೇಟಿ ನೀಡಿ ಅತೀವೃಷ್ಟಿಯ ಭೀಕರ ದೃಶ್ಯಗಳನ್ನು ಕಣ್ಣಾರೆ ಕಂಡು ಸೂಕ್ತ ಪರಿಹಾರದ ಭರವಸೆ, ಪರ್ಯಾಯ ಜಮೀನಿನ ಭರವಸೆಯನ್ನೂ ನೀಡಿದ್ದರು. ಆದರೆ ಅತೀವೃಷ್ಟಿ ಸಂಭವಿಸಿ ಮೂರು ವರ್ಷ ಕಳೆದ ಆಗಸ್ಟ್ ತಿಂಗಳಿಗೆ ನಾಲ್ಕು ವರ್ಷಗಳು ಪೂರ್ಣಗೊಳ್ಳುತ್ತಿದ್ದರೂ ಸಂತ್ರಸ್ಥ ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರ, ಮನೆ ಸೇರಿದಂತೆ ಪರ್ಯಾಯ ಜಮೀನು ಮರಿಚೀಕೆಯಾಗಿದ್ದು, ಮನೆ ನಿರ್ಮಾಣಕ್ಕೆ 1 ಲಕ್ಷ ರೂ. ನೀಡಿರುವುದೇ ಸರ್ಕಾರದ ಸಾಧನೆಯಾಗಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
4 ವರ್ಷ ಕಳೆದರೂ ಪರಿಹಾರ ಮರಿಚೀಕೆ: ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇತ್ತೀಚೆಗೆ ಸಂತ್ರಸ್ಥರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಧಯಾಮರಣಕ್ಕೆ ಅವಕಶ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರು ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿದ್ದರಿಂದ ಸಂತ್ರಸ್ಥರು ಹೋರಾಟವನ್ನು ಕೈಬಿಟ್ಟಿದ್ದರು. ಆದರೆ ಸರ್ಕಾರ ನೀಡಿದ್ದ ಭರವಸೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಸಂತ್ರಸ್ಥರು ಆಕ್ರೋಶಗೊಂಡಿದ್ದು, ಆಗಸ್ಟ್ ತಿಂಗಳಿಗೆ ಅತೀವೃಷ್ಟಿಗೆ ಮನೆ, ಜಮೀನು ಕಳೆದುಕೊಂಡು 4 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ಥರು, ತಾಲೂಕು ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸಂತ್ರಸ್ಥರ ಬದುಕುನ್ನು ಕಟ್ಟಿಕೊಟ್ಟಿದೇವೆ ಎಂದು ಬೆನ್ನುತಟ್ಟಿಕೊಳ್ಳುವ ಮೊದಲು ಸರ್ಕಾರ ತಾನು ಕೊಟ್ಟ ಮಾತನ್ನ ಈಡೇರಿಸಿದ್ಯಾ ಅನ್ನೋದನ್ನ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಮನೆ, ಜಮೀನು ಕಳೆದುಕೊಂಡು ಒಂದೊಂದು ರೂಪಾಯಿ ಹಣಕ್ಕೂ ಪರದಾಟ ನಡೆಸುತ್ತಿರೋ ಸಂತ್ರಸ್ಥರನ್ನ ಕಡೆಗಣಿಸದೇ ಕೂಡಲೇ ಅವರ ನೆರವಿಗೆ ಬರೋ ಕೆಲಸವನ್ನ ಸರ್ಕಾರ ಮಾಡಲಿ ಅನ್ನೋದೇ ನಮ್ಮ ಆಶಯ
ಮುಂದುವರೆದ ಮಳೆ: ಚಿಕ್ಕಮಗಳೂರು ಜಿಲ್ಲಾದ್ಯಂತ ಮುಂಗಾರು ಮಳೆಯ ಆರ್ಭಟ ಇಂದು ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರವೂ ಧಾರಾಕಾರ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಹರಿಯುವ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿರುವ ಕವನಹಳ್ಳ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಯಶೋಧ ಎಂಬವರ ಮನೆಯ ಹಿಂಬದಿಯಲ್ಲಿ ಭೂ ಕುಸಿತ ಸಂಭವಿಸಿದೆ.
ನಿರಂತರ ಮಳೆಗೆ ಮತ್ತೆ ಗುಂಡಿ ಬಿದ್ದ ರಸ್ತೆಗಳು
ಭೂ ಕುಸಿತದಿಂದಾಗಿ ಧರೆಯ ಮಣ್ಣು ಯಶೋಧ ಅವರ ಮನೆಯ ಹಿಂಬದಿಯ ಗೋಡೆ ಮೇಲೆ ಉರುಳಿದ ಪರಿಣಾಮ ಗೋಡೆ ಕುಸಿದು ಮನೆ ಜಖಂಗೊಂಡಿದೆ. ಮೆನಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಟುಂಬದ ಸದಸ್ಯರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ-ಹೊರನಾಡುಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಸೇತುವೆ ಮುಳುಗಡೆಗೆ ಅರ್ಧ ಅಡಿ ನೀರು ಬಾಕಿ ಇದ್ದು, ಇಂದು ರಾತ್ರಿ ಮಳೆ ಹೆಚ್ಚಾದಲ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ.
ರಾಮನಗರ ಧಾರಾಕಾರ ಮಳೆ; ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳು ಸಾವು
ಮಳೆಗೆ ಕಳಪೆ ಕಾಮಗಾರಿಯ ಕರ್ಮಕಾಂಡ ಅನಾವರಣ: ತಿಂಗಳ ಹಿಂದಷ್ಟೇ ಪೂರ್ಣಗೊಂಡ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದ ಕೌನಲ ಗ್ರಾಮದಲ್ಲಿ ನಡೆದಿದೆ.ಮಳೆಯಿಂದ ಏಳು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿರುವ ಪರಿಣಾಮ ಗ್ರಾಮಸ್ಥರು ಸಂಚಾರಿಸಿಲು ತೊಂದರೆ ಉಂಟಾಗಿದೆ. ಒಂದು ತಿಂಗಳ ಹಿಂದೆ ಪೂರ್ಣಗೊಂಡ ಸಿಮೆಂಟ್ ರಸ್ತೆಯಲ್ಲಿ ಬಿರುಕು ಬಿಟ್ಟಿರುವ ಜೊತೆಗೆ ರಸ್ತೆಯ ಬದಿಯಲ್ಲಿ ನಿರ್ಮಿಸಿದ್ದ ವಾಲ್ ಕುಸಿತವಾಗಿದೆ. ರಸ್ತೆ ಮಧ್ಯೆ ಭಾಗದಲ್ಲಿ ಬಿರುಕು ಬಿಟ್ಟಿರುವ ಕಾರಣ ಕಳಸ ಪಟ್ಟಣಕ್ಕೆ ತೆರಳಲು ಗ್ರಾಮಸ್ಥರು ಕಾಲ್ನಡಿಯಲ್ಲಿ ತೆರಳುತ್ತಿದ್ದಾರೆ. ಕಳಪೆ ಕಾಮಗಾರಿಯಿಂದಲೇ ಭಾರಿ ಮಳೆಗೆ ಬಿರುಕು ಬಿಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಚಿಕ್ಕಮಗಳೂರು ತಾಲೂಕಿನಾದ್ಯಂತ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಸಾಧಾರಣ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆ ಹಾಗೂ ಹೊಸಕೋಟೆ, ಮಾರನಹಳ್ಳಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ.