ಪೊದೆಯೊಳಗೆ ಅಡಗಿಕುಳಿತು ಸಿಬ್ಬಂದಿ ಜೊತೆ ಕಣ್ಣಾಮುಚ್ಚಾಲೆ ಆಟ, ಒಂಟಿ ಸಲಗದ ಖತರ್ನಾಕ್ ಬುದ್ಧಿಗೆ ಅರಣ್ಯ ಸಿಬ್ಬಂದಿ ಸುಸ್ತು!

Kannadaprabha News   | Kannada Prabha
Published : Nov 28, 2026, 07:58 AM ISTUpdated : Nov 28, 2026, 08:02 AM IST
Chikkamagaluru rogue elephant capture

ಸಾರಾಂಶ

ಚಿಕ್ಕಮಗಳೂರಿನಲ್ಲಿ ತಪ್ಪಿಸಿಕೊಂಡ ಒಂಟಿ ಸಲಗವನ್ನು ಹಿಡಿಯಲು ಅರಣ್ಯ ಇಲಾಖೆ 6 ಕುಮ್ಕಿ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಸಲಗವು ಕುಮ್ಕಿ ಆನೆಯನ್ನು ಹಿಮ್ಮೆಟ್ಟಿಸಿ ಮಾವುತನಿಗೆ ಗಾಯಗೊಳಿಸಿದ್ದರಿಂದ ಹಾಗೂ ಪೊದೆಯಲ್ಲಿ ಅವಿತಿದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಚಿಕ್ಕಮಗಳೂರು (ನ.28): ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಓಡಿಸಿದ್ದ ಆನೆಗಳ ಪೈಕಿ ಒಂಟಿ ಸಲಗವೊಂದು ಗುಂಪಿನಿಂದ ತಪ್ಪಿಸಿಕೊಂಡಿದ್ದು, ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ. ಒಂಟಿ ಸಲಗವನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯು 6 ಕುಮ್ಕಿ ಆನೆಗಳ ಬೆವರಿಸಿಳಿಸಿದೆ.

ಒಂಟಿ ಸಲಗದ ಚಾಣಾಕ್ಷ ಚಲನವಲನ ಸೆರೆ

ಸುಮಾರು 20 ವರ್ಷದ ಗಂಡಾನೆ ಸೆರೆಗೆ ತೆರಳಿದ್ದ 6 ಕುಮ್ಕಿ ಆನೆಗಳ ಪೈಕಿ ಅಯ್ಯಪ್ಪ ಎಂಬ ಆನೆಯನ್ನು ಒಂಟಿ ಸಲಗ ಹಿಮ್ಮೆಟಿಸಿ ಅಡವಿಗಟ್ಟಿತು. ಪರಿಣಾಮ ಅದರ ಮೇಲೆ ಕುಳಿತಿದ್ದ ಮಾವುತ ನೆಲಕ್ಕೆ ಬಿದ್ದು ಗಾಯಗೊಂಡರು. ಬಳಿಕ ಜ್ಯೂನಿಯರ್‌ ಅರ್ಜುನ ಆನೆಯ ಸಹಾಯದಿಂದ ಅಯ್ಯಪ್ಪನನ್ನು ಮರಳಿ ಕರೆತರಲಾಯಿತು. ಸಲಗದ ಚಾಣಾಕ್ಷ ಚಲನವಲನ ಹಾಗೂ ಆಕ್ರಮಣಕಾರಿ ವರ್ತನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹರಸಾಹಸ ಪಡುವಂತಾಗಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ಮುತ್ತಾವರ ಕ್ಯಾಂಪ್‌ನಿಂದ ಕರೆತಂದಿದ್ದ ಸುಗ್ರೀವ, ಅಯ್ಯಪ್ಪ, ಮಾಣಿಕ್ಯ, ಸಾಗರ್‌, ಭೀಷ್ಮ ಹಾಗೂ ಜ್ಯೂನಿಯರ್‌ ಅರ್ಜುನ ಸೇರಿದಂತೆ 6 ಕುಮ್ಕಿ ಆನೆಗಳ ನೆರವಿನಿಂದ ಮುತ್ತಾವರ ಸಮೀಪದ ನಲ್ಲೂರು ಗುಡ್ಡದಲ್ಲಿ ಕಾರ್ಯಾಚರಣೆ ನಡೆಯಿತು.

ಎಪಿಸಿಸಿಎಫ್ ಮನೋಜ್ ರಾಜನ್ ಮಾರ್ಗದರ್ಶನದಲ್ಲಿ ಐವರು ನುರಿತ ಪಶು ವೈದ್ಯರು ಹಾಗೂ ಅರವಳಿಕೆ ತಜ್ಞರಾದ ರಮೇಶ್, ವಾಸೀಮ್, ಆದರ್ಶ್ ಮತ್ತು ವಿನಾಯಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊದೆಯೊಳಗೆ ಅಡಗಿಕುಳಿತು ಸಿಬ್ಬಂದಿ ಜೊತೆ ಕಣ್ಣಾಮುಚ್ಚಾಲೆ ಆಟ

ಕಾರ್ಯಾಚರಣೆ ವೇಳೆ ಕಾಡಾನೆ ಪೊದೆಗಳೊಳಗೆ ಸೇರಿಕೊಂಡು ಸಿಬ್ಬಂದಿಗೆ ಕಾಣಿಸಿಕೊಳ್ಳದೆ ಕಣಾಮುಚ್ಚಾಲೆ ಆಡಿದೆ. ಡ್ರೋನ್ ಕ್ಯಾಮೆರಾ ಮೂಲಕ ಅದರ ಚಲನವಲನ ಗಮನಿಸಿದರೂ ಪೊದೆಗಳಿಂದ ಹೊರಬರದ ಕಾರಣ ಅರವಳಿಕೆ ಮದ್ದು ನೀಡಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಕಾಡಾನೆ ಮತ್ತಯು ಕುಮ್ಕಿ ಆನೆಗಳ ಮುಖಾಮುಖಿ ವೇಳೆ ರೆಂಬೆಯೊಂದು ಅರವಳಿಕೆ ತಜ್ಞರ ಭುಜಕ್ಕೆ ಬಡಿಯಿತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಬಳಿಕ ಡಾಗ್ ಸ್ಕ್ವಾಡ್ ನೆರವಿನಿಂದ ಸಲಗ ಇರುವ ಸ್ಥಳ ಪತ್ತೆ ಕಾರ್ಯ ಆರಂಭಿಸಲಾಯಿತು. ಆನೆಗಳು ನಿರಂತರವಾಗಿ ಸ್ಥಳ ಬದಲಿಸುತ್ತಿದ್ದರಿಂದ ಇದೂ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತು.

PREV
Read more Articles on
click me!

Recommended Stories

ಸಿಎಂ ಮನೆಗೆ ಆಟೋ ಬುಕ್‌ ಮಾಡಿ ಚಾಲಕನ ಮೂಲಕ ಬಾ*ಬ್‌ ಬೆದರಿಕೆ! ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಅರೆಸ್ಟ್
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಡೆ ರೀತಿ ಅವರ ಜೊತೆ ನಿಂತಿದ್ದ ಆ ದಿನಗಳನ್ನು ನೆನೆದ ಡಿಕೆ ಶಿವಕುಮಾರ, ಹೇಳಿದ್ದೇನು?