Chikkamagaluru: ದತ್ತಜಯಂತಿ ಅಂಗವಾಗಿ ಕೇಸರಿಮಯವಾದ ಚಿಕ್ಕಮಗಳೂರು ನಗರ

By Gowthami K  |  First Published Dec 5, 2022, 7:54 PM IST

ಹಿಂದೂ ಅರ್ಚಕರ ನೇಮಕದ ಹಿನ್ನೆಲೆಯಲ್ಲಿ ಪ್ರತಿ ಬಾರಿ ದತ್ತ ಜಯಂತಿಗಿಂತಲೂ ಈ ಬಾರಿ ಹುಮ್ಮಸ್ಸಿನಲ್ಲಿರುವ ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಬಂಟಿಂಗ್ಗಳು ಬ್ಯಾನರ್ಗಳಿಂದ ಚಿಕ್ಕಮಗಳೂರು ನಗರವನ್ನು ಕೇಸರಿಮಯಗೊಳಿಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.5): ಹಿಂದೂ ಅರ್ಚಕರ ನೇಮಕದ ಹಿನ್ನೆಲೆಯಲ್ಲಿ ಪ್ರತಿ ಬಾರಿ ದತ್ತ ಜಯಂತಿಗಿಂತಲೂ ಈ ಬಾರಿ ಹುಮ್ಮಸ್ಸಿನಲ್ಲಿರುವ ವಿಶ್ವಹಿಂದೂ ಪರಿಷತ್- ಬಜರಂಗದಳದ ಕಾರ್ಯಕರ್ತರು ಬಂಟಿಂಗ್ಗಳು ಬ್ಯಾನರ್ಗಳಿಂದ ಚಿಕ್ಕಮಗಳೂರು ನಗರವನ್ನು ಕೇಸರಿಮಯಗೊಳಿಸಿದ್ದಾರೆ. ಪ್ರಮುಖವಾಗಿ ನಗರದ ಎಂಜಿ ರಸ್ತೆ, ಐಜಿ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ಸರ್ಕಲ್ ಸೇರಿದಂತೆ ವಿವಿಧೆಡೆಗಳಲ್ಲಿ ದತ್ತ ಜಯಂತಿಗೆ ಸ್ವಾಗತ ಕೋರುವ ಬೃಹತ್ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಕೇಸರಿ ಬಂಟಿಂಗ್ನಿಂದ ಸಿಂಗರಿಸಲಾಗಿದೆ. ಕೆಲವೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದತ್ತಾತ್ರೇಯರು, ಶ್ರೀರಾಮ ಹಾಗೂ ಹನುಮಂತನ ಬ್ಯಾನರ್ಗಳು ಹಲವೆಡೆ ರಾರಾಜಿಸುತ್ತಿವೆ. ಇದಲ್ಲದೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲೂ ದತ್ತ ಜಯಂತಿಗೆ ಸ್ವಾಗತಕೋರಿ ಬ್ಯಾನರ್ಗಳನ್ನು ಹಾಕಿರುವುದಲ್ಲದೆ, ಕೇಸರಿ ಬಂಟಿಂಗ್ಗಳಿಂದ ಸಿಂಗರಿಸಲಾಗಿದೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಸ್ಥಳೀಯವಾಗಿ ಶೋಭಾಯಾತ್ರೆ ನಡೆಸಲು ಸಿದ್ಧತೆಗಳನ್ನು ನಡೆಸಿದ್ದಾರೆ.

Latest Videos

undefined

ನಾಳೆ ಬೆಳಗ್ಗೆ ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ: ಡಿಸೆಂಬರ್ 6 ರ ಬೆಳಗ್ಗೆ ದತ್ತಮಾಲಾಧಾರಿಗಳು ಭಿಕ್ಷಾಟನೆ ನಡೆಸಿ ಪಡಿ ಸಂಗ್ರಹಿಸುವ ಮೂಲಕ ಈ ಬಾರಿಯ ದತ್ತಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಅದೇ ದಿನ ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ, ಡಿಸೆಂಬರ್ 7 ರಂದು ನಗರದಲ್ಲಿ ಮಾಲಾಧಾರಿಗಳಿಂದ ಬೃಹತ್ ಶೋಭಾ ಯಾತ್ರೆ ಹಾಗು ಡಿಸೆಂಬರ್ 8 ರಂದು ದತ್ತಪೀಠದಲ್ಲಿ ಪಾದುಕೆಗಳ ದರ್ಶನದೊಂದಿಗೆ ದತ್ತ ಜಯಂತಿ ಸಂಪನ್ನಗೊಳ್ಳಲಿದೆ.

Chikkamagaluru: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ

ಪೊಲೀಸ್ ಪಥ ಸಂಚಲನ: ಮೂರು ದಿನಗಳ ಕಾಲ ದತ್ತಜಯಂತಿ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ನೂರಾರು ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ, ಮಹಿಳಾ ತುಕಡಿ, ಡಿಎಆರ್ ತುಕಡಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಥ ಸಂಚಲನ ಸಾರ್ವಜನಿಕರಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆಸುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಲ್ಲದೆ, ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಿದರು. 

Chikkamagaluru: ದತ್ತಜಯಂತಿ ವೇಳೆ ಶಾಂತಿಸುವ್ಯವಸ್ಥೆಗಾಗಿ ಜಿಲ್ಲಾದ್ಯಂತ ಬಂದೋಬಸ್ತ್‌

ಮೊದಲ ಬಾರಿ ದತ್ತಜಯಂತಿ ವೇಳೆ ಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ ಇನ್ನಿತರೆ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಮತ್ತು ರಾಜ್ಯಾದ್ಯಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು, ಭಕ್ತರು ಆಗಮಿಸುವ ಸಾಧ್ಯತೆ ಇರುವ ಕಾರಣ ಪೊಲೀಸರು ಮುಂಜಾಗ್ರತೆಯಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸುಮಾರು 3500 ಪೊಲೀಸ್ ಸಿಬ್ಬಂದಿಗಳನ್ನು ಬಂದೋ ಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಈಗಾಗಲೇ ಹೊರ ಜಿಲ್ಲೆಗಳಿಂದ ಸಿಬ್ಬಂದಿಗಳು ನಗರಕ್ಕೆ ಬಂದಿಳಿಯುತ್ತಿದ್ದಾರೆ.ಮಹಿಳಾ ಸಂಕೀರ್ತನಾ ಯಾತ್ರೆಯೊಂದಿಗೆ ದತ್ತ ಜಯಂತಿ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಈ ಬಾರಿ ಸುಮಾರು 10 ರಿಂದ 12 ಸಾವಿರ ಮಹಿಳೆಯರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಕಾರ್ಯಕ್ರಮದ ಸಂಘಟಕರು ನಿರೀಕ್ಷಿಸಿದ್ದಾರೆ. ಇದಲ್ಲದೆ ಬುಧವಾರ ನಡೆಯುವ ಶೋಭಾಯಾತ್ರೆ ಮತ್ತು ಗುರುವಾರ ಪೀಠದಲ್ಲಿ ನಡೆಯುವ ದತ್ತಜಯಂತಿ ಕಾರ್ಯಕ್ರಮಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಗಳಿವೆ.

click me!