ಅಕ್ರಮ ಮರಳು ದಂಧೆ ನಿಯಂತ್ರಿಸದೇ ನಿರ್ಲಕ್ಷ್ಯ ಮಾಡಿದ ಪೊಲೀಸರಿಗೆ ಜಿಲ್ಲಾ ಎಸ್‌ಪಿ ಕೊಟ್ಟ ಶಿಕ್ಷೆ ಏನು ಗೊತ್ತಾ..? ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಾಗ ಜಿಲ್ಲಾ ಎಸ್‌ಪಿ ಖಡಕ್ ನಿರ್ಧಾರ ತೆಗೆದುಕೊಂಡು ಇತತರರಿಗೆ ಮಾದರಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಒಂದೇ ಠಾಣೆಯ 14 ಪೇದೆಗಳನ್ನು ವರ್ಗ ಮಾಡಲಾಗಿದೆ.
ಚಿಕ್ಕಮಗಳೂರು(ಜು.20): ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಅದನ್ನು ನಿಯಂತ್ರಣ ಮಾಡುವಲ್ಲಿ ಆಸಕ್ತಿ ತೋರದ ಒಂದೇ ಪೊಲೀಸ್ ಠಾಣೆಯ 14 ಮಂದಿ ಪೇದೆ ಹಾಗೂ ಮುಖ್ಯಪೇದೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಇದೇ ಮೊದಲಬಾರಿಗೆ ಜಿಲ್ಲಾ ಪೊಲೀಸ್ ಇಲಾಖೆ, ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಠಾಣೆಯಲ್ಲಿ ಇಷ್ಟುಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಹಲವು ಅಕ್ರಮ ದಂಧೆಗಳು ನಡೆಯುತ್ತಿವೆ. ಇದಕ್ಕೆ ಕೆಲವು ಪೊಲೀಸರ ಕುಮ್ಮಕ್ಕು ಇದೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಕ್ರಮ ಮರಳು ದಂಧೆಯೊಂದಿಗೆ ಪೊಲೀಸರು ಶಾಮೀಲಾಗಿದ್ದರಿಂದ ಈ ಅಕ್ರಮ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಮಾತಿದೆ.
ತುಂಗಾ, ಭದ್ರಾ, ಹೇಮಾವತಿ ನದಿಗಳ ಪಾತ್ರಗಳಲ್ಲಿ ಮಾತ್ರವಲ್ಲ, ಹಳ್ಳ, ಕೆರೆಗಳ ಬಳಿ ಮರಳು ತೆಗೆದು ಬೇರೆ ಜಿಲ್ಲೆಗಳಿಗೆ ರಾತ್ರೋರಾತ್ರಿ ಸಾಗಾಣಿಕೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತ ಬರುತ್ತಿದೆ. ಇದರಲ್ಲಿ ರಾಜಕೀಯ ಪಕ್ಷಗಳ ಪ್ರಮುಖರು ಕೈ ಜೋಡಿಸಿದ್ದರೆಂಬ ಸತ್ಯ ಹಿಂದೊಮ್ಮೆ ಬಹಿರಂಗವಾಗಿತ್ತು.
ಠಾಣೆಗಳ ಮೇಲೆ ನಿಗಾ ಇಟ್ಟಿರುವ ಜಿಲ್ಲಾ ರಕ್ಷಣಾಧಿಕಾರಿ:
undefined
ಅಕ್ರಮ ಮರಳು ದಂಧೆ ಎಲ್ಲೆಲ್ಲಿ ನಡೆಯುತ್ತಿದೆ. ಅದರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆ ಯಾವುದು, ಈ ವಿಷಯವನ್ನು ಸಾರ್ವಜನಿಕರು ಗಮನಕ್ಕೆ ತಂದರೂ ಪೊಲೀಸರು ಸ್ಪಂದಿಸದೇ ಇರುವ ಬಗ್ಗೆ ಮಾಹಿತಿ ಬಂದರೆ ಅಂತಹ ಪೊಲೀಸ್ ಠಾಣೆಗಳ ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಕಣ್ಣಿಟ್ಟಿದ್ದಾರೆ.
ಕ್ರಮ ಕೈಗೊಳ್ಳದ ಪೊಲೀಸರ ವರ್ಗ:
ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕರೂ ಪೊಲೀಸರು ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ಇಲಾಖೆ ಬಗ್ಗೆ ಸಾರ್ವಜನಿಕರು ಸಂಶಯ ಪಡುವಂತಾಗಿತ್ತು. ಇದನ್ನು ಗಮನಿಸಿದ ಎಸ್ಪಿ ಹರೀಶ್ ಪಾಂಡೆ ಅವರು, ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಇಲ್ಲಿನ ಮೂರು ಮಂದಿಯನ್ನು ಹೊರತುಪಡಿಸಿ, ಇನ್ನುಳಿದ ಪೊಲೀಸರನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿದ್ದಾರೆ.
ಅಕ್ರಮ ಮರಳು ದಂಧೆ:
ಜಿಲ್ಲೆಯ ಹರಿಹರಪುರ, ಕೊಪ್ಪ, ಉದುಸೆ, ಗೋಣಿಬೀಡು, ಬಾಳೂರು, ಬಣಕಲ್, ಅಜ್ಜಂಪುರ, ಕರಕುಚ್ಚಿ, ಶೃಂಗೇರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿನ ಕೆಲವು ಪ್ರದೇಶಗಳಿಂದ ರಾತ್ರಿ ವೇಳೆಯಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದೆ. ಮೂಡಿಗೆರೆ ತಾಲೂಕಿನ ಉದುಸೆ ಹಾಗೂ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಬಳಿ ಮೂರು ಬಾರಿ ಪೊಲೀಸರ ಕಾರ್ಯಾಚರಣೆ ವೇಳೆಯಲ್ಲಿ ಅಕ್ರಮ ದಂಧೆಕೋರರು ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸ್ಥಳೀಯ ಜನರೇ ಕಡಿವಾಣ ಹಾಕಿದರೆ ಭವಿಷ್ಯದಲ್ಲಿ ನದಿ ಪಾತ್ರಗಳು ಉಳಿಯಲು ಸಾಧ್ಯ.
ಸದ್ಯ ಮಳೆಗಾಲ ಇದ್ದರಿಂದ ಯಾವುದೇ ಬ್ಲಾಕ್‌ಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿಲ್ಲ. ಆದರೂ ಅಕ್ರಮವಾಗಿ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಮಲೆನಾಡಿನ ಹಲವೆಡೆ ರಸ್ತೆಗಳು ಹಾಳಾಗುತ್ತಿವೆ.
ವಿಶ್ವಾಸಮತ ಮುನ್ನಾ ದಿನ ಭರ್ಜರಿ ಪೊಲೀಸ್ ವರ್ಗ
ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದಲ್ಲಿ ಈವರೆಗೆ ಸುಮಾರು 70 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಕೊಪ್ಪದಲ್ಲಿ ಸುಮಾರು 490 ಟನ್ ಮರಳು ವಶಪಡಿಸಿಕೊಳ್ಳಲಾಗಿದೆ. 15 ದಿನಗಳ ಹಿಂದೆ ಶೃಂಗೇರಿಯಲ್ಲಿ 54 ಟನ್ ಮರಳು ವಶಕ್ಕೆ ಪಡೆಯ ಲಾಗಿದೆ. ತರೀಕೆರೆ ತಾಲೂಕಿನ ಕರಕುಚ್ಚಿಯಲ್ಲಿ ಕಳೆದ 3 ತಿಂಗಳ ಹಿಂದೆ ಅಕ್ರಮ ಮರಳು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹರಿಹರಪುರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದ್ದರಿಂದ 14 ಮಂದಿ ಪೊಲೀಸರು ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಎಸ್‌ಪಿ ಹರೀಶ್ ಪಾಂಡೆ ಹೇಳಿದ್ದಾರೆ.