ಬಸ್ ಪಾಸ್ ಇದ್ರೂ ಬಸ್ ಇಲ್ಲದೆ ದಾವಣಗೆರೆಯ ಹೊನ್ನಾಳಿಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನ ಬಲಮುರಿ, ಎಚ್.ಜಿ.ಹಳ್ಳಿ ಹಾಗೂ ಎಸ್. ಮಲ್ಲಾಪುರ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಈ ಭಾಗದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ದಾವಣಗೆರೆ(ಜು.20): ತಾಲೂಕಿನ ಬಲಮುರಿ, ಎಚ್.ಜಿ.ಹಳ್ಳಿ ಹಾಗೂ ಎಸ್. ಮಲ್ಲಾಪುರ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಈ ಭಾಗದ ಸುಮಾರು 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹೊನ್ನಾಳಿ ಸರ್ಕಾರಿ ಬಸ್ ಡಿಪೋ ಮ್ಯಾನೇಜರ್ ಮಹೇಶ್ವರಪ್ಪ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಬಸ್ ಇಲ್ಲದೆ ವಿದ್ಯಾರ್ಥಿಗಳ ಗೋಳು:
ಮನವಿ ಸಲ್ಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ಹಿರೇಕೆರೂರು ಡಿಪೋದಿಂದ ಬರುವ ಬಸ್ಸು ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ತಡವಾಗಿ ಬರುವ ಬಸ್ಸು ಪ್ರಯಾಣಿಕರಿಂದ ತುಂಬಿಕೊಂಡಿರುತ್ತದೆ ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ 25 ರವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ
ಬಸ್ ಪ್ರಯಾಣಿಕರ ಸಂದಣಿಯಿಂದ ನಿಲ್ಲುವುದಕ್ಕೂ ಸಾಧ್ಯವಾಗದಿರುವುರಿಂದ ನಾವು ಹೊನ್ನಾಳಿಗೆ ಬಂದು ಹೋಗುವ ಖಾಸಗಿ ವಾಹನಗಳ ಮಾಲೀಕರ ಕೈ ಕಾಲು ಹಿಡಿದು ಬೈಕ್ ಗಳಲ್ಲೋ, ಆಟೋಗಳಲ್ಲೋ ಬರಬೇಕಾದ ದುಸ್ಥಿತಿ ಇದೆ. ಹೀಗಾಗಿ ಕಳೆದ ಮೂರು ವಾರಗಳಿಂದ ನಾವುಗಳು ಯಾರೂ ಶಾಲಾ -ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಂದು ಹೋಗಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸ್ ಪಾಸ್ ಮಾಡಿದ್ರೂ ಪ್ರಯೋಜನವಿಲ್ಲ:
ಇದರಿಂದ ಪಾಠ, ಪ್ರವಚನಗಳನ್ನು ಕೇಳುವ ಅವಕಾಶ ತಪ್ಪಿದಂತಾಗುತ್ತಿದೆ. ಬಸ್ ಪಾಸ್ ಮಾಡಿಸಿದ್ದರೂ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಹಿರೇಕೇರೂರಿನಿಂದ ಹೊನ್ನಾಳಿಗೆ ಬರುವ ಬಸ್ಸನ್ನು ಪುನಃ ಹೊನ್ನಾಳಿುಂದ ಎಸ್. ಮಲ್ಲಾಪುರಕ್ಕೆ ಮತ್ತೊಂದು ಬಾರಿ ಬಂದು ಹೋಗುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಜುಲೈ 23 ರಂದು ನಮ್ಮ ಗ್ರಾಮಗಳಿಗೆ ಬರುವ ಬಸ್ಸುಗಳನ್ನು ತಡೆದು ನಿಲ್ಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.