ಚಿಕ್ಕಬಳ್ಳಾಪುರಕ್ಕೆ ತಹಸೀಲ್ದಾರ್ ನೇಮಕವೇ ಆಗಿಲ್ಲ : ಕಡತ ವಿಲೇವಾರಿಯಾಗದೆ ಜನರು ಹೈರಾಣ

By Kannadaprabha NewsFirst Published Mar 25, 2021, 2:10 PM IST
Highlights

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಕಚೇರಿಗೆ ತಹಸಿಲ್ದಾರ್ ನೇಮಕವಾಗದೇ  ಜನರು ಸಮಸ್ಯೆ ಎದುರಿಸುವಂತಾಗಿದೆ. ಕಡತಗಳ ವಿಲೇವಾರಿ ಆಗದೇ   ಪರದಾಡುವಂತಾಗಿದೆ. 

 ಚಿಕ್ಕಬಳ್ಳಾಪುರ (ಮಾ.25):  ಜಿಲ್ಲಾ ಕೇಂದ್ರದ ತಾಲೂಕು ಕಚೇರಿ ನಾವಿಕನಿಲ್ಲದ ದೋಣಿಯಂತಾಗಿದ್ದು ಕಳೆದ ಒಂದೂವರೆ ತಿಂಗಳಿಂದ ತಹಸೀಲ್ದಾರ್‌ ನೇಮಕವಾಗದೇ ಅನಾಥವಾಗಿರುವ ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಸಾರ್ವಜನಿಕರ ಹಾಗೂ ರೈತರ ಪಾಲಿಗೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬತಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ತಾಲೂಕು ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ವರ್ಗಾವಣೆ ಬಳಿಕ ನೂತನ ತಹಸೀಲ್ದಾರ್‌ ಆಗಿ ಆಗಮಿಸಿದ ನಾಗಪ್ರಶಾಂತ್‌ ವರ್ಷ ಮುಗಿಯುವುದರೊಳಗೆ ವರ್ಗಾವಣೆ ಮಾಡಿಸಿಕೊಂಡು ತೆರಳಿದ ಪರಿಣಾಮ ಇಲ್ಲಿನ ತಾಲೂಕು ಕಚೇರಿ ಅನಾಥವಾಗಿದ್ದು, ಸಾರ್ವಜನಿಕರು, ರೈತರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಆಗದೇ ಕಡತಗಳ ರಾಶಿ ರಾಶಿ ಬಿದ್ದಿವೆ.

ಕಾಸು ಕೊಟ್ಟರೆ ಮಾತ್ರ ಕೆಲಸ :  ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಕಚೇರಿ ಸದಾ ಸಾರ್ವಜನಿಕರಿಂದ ರೈತರ ಕೂಲಿ ಕಾರ್ಮಿಕರಿಂದ ಗಿಜಿಡುತ್ತಿರುತ್ತದೆ. ಆದರೆ ಕಚೇರಿ ಕೆಲಸ ಕಾರ್ಯಗಳ ಮೇಲುಸ್ತುವಾರಿ ನಡೆಸಬೇಕಿದ್ದ ತಹಸೀಲ್ದಾರ್‌ ಇಲ್ಲದೇ ತಾಲೂಕು ಕಚೇರಿ ಹರಿದ ಗಾಳಿ ಪಟವಾಗಿದೆ. ಮೊದಲೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆಸರಾದ ತಾಲೂಕು ಕಚೇರಿ ಭೂಮಿ ಕೇಂದ್ರದಲ್ಲಿ ಕಾಸು ಕೊಡದೇ ಏನು ಕೆಲಸ ಆಗುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಸಿಬ್ಬಂದಿ ಕೊರತೆಗೆ ಸೊರಗಿದ ನಂದಿ ಗಿರಿಧಾಮ : ಖಾಲಿ ಇರುವ ಅನೇಕ ಹುದ್ದೆಗಳು

ಮಧ್ಯವರ್ತಿಗಳ ಹಾವಳಿ :  ಜಿಲ್ಲಾ ಕೇಂದ್ರವಾಗಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೀಯಲ್‌ ಎಸ್ಟೇಟ್‌ ಬೆಳೆದಂತೆ ತಾಲೂಕು ಕಚೇರಿಗಳಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಏನೇ ಕೆಲಸಕ್ಕೆ ಬಂದರೂ ಮಧ್ಯವರ್ತಿಗಳ ಮೊರೆ ಹೋಗಬೇಕಾದ ದುಸ್ಥಿತಿ ಇದೆ. ಆದರೆ ತಹಸೀಲ್ದಾರ್‌ ಇಲ್ಲದೇ ಕಚೇರಿ ಸಿಬ್ಬಂದಿಯ ಆಟೋಟಗಳಿಗೆ ಸಾರ್ವಜನಿಕರು ಇನ್ನಷ್ಟುಹೈರಾಣಗುತ್ತಿದ್ದು ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಖಾಲಿ ಇರುವ ತಹಸೀಲ್ದಾರ್‌ ಹುದ್ದೆಗೆ ಸರ್ಕಾರ ನೇಮಿಸುವರೆಗೂ ತಾತ್ಕಲಿಕವಾಗಿ ನಿಯೋಜನೆ ಮಾಡಬೇಕೆಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.

ಗ್ರಾಮ ವಾಸ್ತವ್ಯ ಹೆಸರಿಗಷ್ಟೇ! :  ಕಂದಾಯ ಇಲಾಖೆ ಮಹತ್ವಕಾಂಕ್ಷಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೂಡ ತಹಸೀಲ್ದಾರ್‌ ಇಲಾಖೆ ಇಲಾಖೆ ಕಾರ್ಯಕ್ರಮಕ್ಕೆ ಬರೀ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಗ್ರೇಡ್‌-2 ತಹಶೀಲ್ದಾರ್‌ ಇಡೀ ಕಚೇರಿಯನ್ನು ನಿರ್ವಹಿಸುವ ಸವಾಲು ಇದ್ದು ಇದರ ಪರಿಣಾಮ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಸರ್ಕಾರ ಆರಂಭಿಸಿದ ಗ್ರಾಮ ವಾಸ್ತವ್ಯಕ್ಕೂ ತಹಸೀಲ್ದಾರ್‌ ಇಲ್ಲದೇ ಚಿಕ್ಕಬಳ್ಳಾಪುರ ತಾಲೂಕಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೆಸರಿಗೆ ಮಾತ್ರ ಸೀಮಿತವಾಗಿದೆ.

click me!