ಶರಣರ ದೇವಾಲಯಕ್ಕೆ ಭೇಟಿ ನೀಡುವ ಬದಲು, ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಆಶೀರ್ವಾದ ಪಡೆಯಬೇಕು| ಕೋವಿಡ್-19 ಭೀತಿಯನ್ನು ಕೊನೆಗೊಳಿಸುವಂತೆ ಪ್ರಾರ್ಥಿಸಿ: ಡಾ. ದಾಕ್ಷಾಯಿಣಿ ಅಪ್ಪ|
ಕಲಬುರಗಿ(ಮಾ.25): ಇದೇ ಏ.2ರಂದು ನಡೆಯಲಿರುವ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜನರ ಆರಾಧ್ಯ ದೈವ, ಮಹಾ ದಾಸೋಹಿ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವ ಈ ಬಾರಿಯೂ ಅದ್ಧೂರಿಯಾಗಿ ನಡೆಯೋದಿಲ್ಲ. ಕೊರೋನಾ 2ನೇ ಅಲೆಯ ಆತಂಕ ಹೆಚ್ಚುತ್ತಿರುವುದರಿಂದ ಜಾತ್ರೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆಯನ್ನ ಮಹಾ ದಾಸೋಹ ಸಂಸ್ಥಾನ ಪೀಠವೇ ನಿರ್ಬಂಧಿಸಿದೆ.
ಕೊರೋನಾ ಆತಂಕ ಮತ್ತೆ ಧುತ್ತನೇ ಇದಿರಾಗಿರೋದರಿಂದ ಭಕ್ತರು ಯಾರೂ ಜಾತ್ರೆಯತ್ತ ಸುಳಿಯೋದು ಬೇಡ, ತಾವೆಲ್ಲರೂ ಮನೆಗಳಲ್ಲಿದ್ದುಕೊಂಡೆ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಬಾರಿಯೂ ಕೊರೋನಾ ಸೋಂಕಿನಿಂದಾಗಿಯೇ ಜಾತ್ರೆಯ ವಿಧಿ ವಿಧಾನಗಳು, ರಥೋತ್ಸವ ಆಚರಣೆಯಲ್ಲಿ ಉತಂಬ ಅಡಚಣೆಗಳು, ಗೊಂದಲಗಳು ಕಂಡು ಶರಣನ ಭಕ್ತ ಸಮೂಹದಲ್ಲಿ ತುಂಬ ಬೇಸರ ಉಂಟಾಗಿತ್ತು. ಈ ಬಾರಿಯೂ ಜಾತ್ರೆಯಲ್ಲಿ ಬಕ್ತರೇ ಪಾಲ್ಗೊಳ್ಳುವಂತಿಲ್ಲವೆಂದು ಸಂಸ್ಥಾನವೇ ನಿರ್ಬಂಧ ಹೇರುವ ಮೂಲಕ ಭಕ್ತರ ಸಹಕಾರ ಕೋರಿದೆ.
ಫಟಾಫಟ್ ರಥೋತ್ಸವ: 'ಕೊರೋನಾದಿಂದ ಕಲಬುರಗಿ ಕಾಪಾಡಪ್ಪ ಶರಣ ಬಸವ'
ಹೆಚ್ಚುತ್ತಿರುವ ಕೊರೋನಾ ಮತ್ತು ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿದ ಹೊಸ ಮಾರ್ಗಸೂಚಿಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಜಾತ್ರಾ ಮಹೋತ್ಸವ ಮತ್ತು ಇತರ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಳುವದನ್ನು ಮೊಟಕುಗೊಳಿಸಿದೆ ಎಂದು ಡಾ. ಶರಣಬಸವಪ್ಪ ಅಪ್ಪ ಅಧಿಕೃತ ಹೇಳಿಕೆ ಹೊರಡಿಸಿದ್ದಾರೆ.
ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡುತ್ತಿರುವ ಸರಕಾರಿ ಅಧಿಕಾರಿಗಳೊಂದಿಗೆ ಕೈಜೋಡಿಸುವುದು ಮತ್ತು ಸಹಕರಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಶರಣಬಸವೇಶ್ವರರ ಭಕ್ತರಿಗೆ ತಮ್ಮ ಧಾರ್ಮಿಕ ದಿನಚರಿಯಲ್ಲಿ ಜಾತ್ರೆ ಮಹತ್ವದ್ದು, ಭಕ್ತರೆಲ್ಲರೂ ದಿನಪೂರ್ತಿ ಉಪವಾಸವಿದ್ದು, ರಥೋತ್ಸವದ ನಂತರವೇ ಪ್ರಸಾದ ಸೇವಿಸುವುದು ಪರಂಪರೆ. ಆದರೆ ಈ ವರ್ಷ ಭಕ್ತರೆಲ್ಲರೂ ರಥೋತ್ಸವದಲ್ಲಿ ಭಾಗಿಯಾಗದೇ, ತಮ್ಮ ತಮ್ಮ ಮನೆಯಲ್ಲಿದ್ದುಕೊಂಡು ದೇವರ ದಯೆಗೆ ಪಾತ್ರರಾಗಬೇಕೆಂದು ಡಾ. ಅಪ್ಪ ಕೋರಿದ್ದಾರೆ.
ಭಕ್ತರೆಲ್ಲರೂ ಏ.2ರಂದು ಶರಣರ ದೇವಾಲಯಕ್ಕೆ ಭೇಟಿ ನೀಡುವ ಬದಲು, ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಆಶೀರ್ವಾದ ಪಡೆಯಬೇಕು, ಕೋವಿಡ್-19ರ ಭೀತಿಯನ್ನು ಕೊನೆಗೊಳಿಸುವಂತೆ ಪ್ರಾರ್ಥಿಸುವಂತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ. ದಾಕ್ಷಾಯಿಣಿ ಅಪ್ಪ ಹೇಳಿದ್ದಾರೆ.