ಉತ್ಸವದ ಅದ್ಧೂರಿ ಮೆರವಣಿಗೆಗೆ ಆದಿಚುಂಚನಗಿರಿ ಮಹಾ ಶ್ರೀಗಳಿಂದ ವಿದ್ಯುಕ್ತ ಚಾಲನೆ, ದಸರಾ ಜಂಬೂ ಸವಾರಿ ನೆನೆಪಿಸಿದ ಉತ್ಸವ ಮೆರವಣಿಗೆ. ಮೆರವಣಿಗೆಯಲ್ಲಿ 3000 ಕ್ಕೂ ಹೆಚ್ಚು ಕಲಾವಿದರು ಭಾಗಿ. ಉತ್ಸವಕ್ಕೆ ಕಳೆ ತಂದ 2 ಕಿ,ಮೀ ಉದ್ದದ ಭವ್ಯ ಮೆರವಣಿಗೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ(ಜ.08): ಹೆಜ್ಜೆ ಹೆಜ್ಜೆಗೂ ಜನ ಸಾಗರ, ಕಲಾವಿದರಿಂದ ಮೊಳಗಿದ ಕಹಳೆಯ ನಿನಾದ, ಗಮನ ಸೆಳೆದ ಡೊಳ್ಳು ಕುಣಿತ, ಪೂಜಿತ ಕುಣಿತ, ಕಂಸಾಳೆ, ಕರಡಿ ನೃತ್ಯ, ನಂದಿಕೋಲಿನ ಸಂಗಮ, ವೀರಗಾಸೆ, ಕೀಲು ಕುದರೆ, ಯಕ್ಷಗಾನ, ಸುಗ್ಗಿ ಕುಣಿತ, ಗಾರಡಿ ಬೊಂಬೆಗಳ ನೃತ್ಯ ವೈಭವ, ಕಲಾವಿದರ ತಮಟೆ, ತಾಳ ಮೇಳಕ್ಕೆ ಕುಣಿದು ಕುಪ್ಪಳಿಸಿದ ಜನ, ಅಕ್ಷರಶಃ ಮೈಸೂರು ಜಂಬೂ ಸವಾರಿ ನೆನಪಿಸಿದ ಚಿಕ್ಕಬಳ್ಳಾಪುರ ಉತ್ಸವದ ಅದ್ಧೂರಿ ಮೆರವಣಿಗೆ
8 ದಿನಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿರುವ ಚಿಕ್ಕಬಳ್ಳಾಪುರ ಉತ್ಸವದ ಮೊದಲ ದಿನ ಶನಿವಾರ ನಡೆದ ಬೃಹತ್ ಮೆರವಣಿಗೆಯಲ್ಲಿ ಕಂಡು ಬಂದ ಹಲವು ದೃಶ್ಯಗಳಿವು.
ಚುಂಚಶ್ರೀಗಳಿಂದ ಚಾಲನೆ
ನಗರದ ಸಿದ್ದೇಶ್ವರ ದೇವಾಲಯದ ಬಳಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳು ಚಿಕ್ಕಬಳ್ಳಾಪುರ ಉತ್ಸವಕ್ಕೆ ಹಸಿರು ನಿಶಾನೆ ತೋರಿದರು. ಈ ವೇಳೆ ಉತ್ಸವದ ಸಾರಥ್ಯ ವಹಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು. ನಗರದ ಜೈಭಿಮ್ ಹಾಸ್ಟಲ್‌ನಿಂದ ಸಾಂಸ್ಕೃತಿಕ ಮೆರವಣಿಗೆ ಆರಂಭಗೊಂಡು ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದವರೆಗೂ ಸಾಗಿತು. ಸಹಸ್ರಾರು ಸಂಖ್ಯೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಕಲಾವಿದರು ಮೆರವಣಿಗೆಯಲ್ಲಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
Chikkaballapura : ಹರಪನಹಳ್ಳಿ ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡನೆ
ಹಾವೇರಿ, ಗುಂಡ್ಲಪೇಟೆ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಕಲಾವಿದರು ಆಗಮಿಸಿ ಉತ್ಸವಕ್ಕೆ ಮೆರವಣಿಗೆ ನೀಡಿದರು. ನೂರಾರು ಲಂಬಾಣಿ ಮಹಿಳೆಯರು ನೃತ್ಯ ಪ್ರದರ್ಶಿಸಿದರು. ಕಲಾವಿದರು ಶ್ರೀರಾಮ, ಕೃಷ್ಣ, ಅರ್ಜುನ, ಧರ್ಮರಾಯನ ವೇಷಗಳನ್ನು ತೊಟ್ಟಗಮನ ಸೆಳೆದರು.
2 ಕಿ.ಮೀ ಮೆರವಣಿಗೆ
ಸುಮಾರು 2 ಕಿ.ಮೀನಷ್ಟು ದೂರ ಉತ್ಸವದ ಮೆರವಣಿಗೆ ಚಿಕ್ಕಬಳ್ಳಾಪುರ ಉತ್ಸವ ಕಳೆಗಟ್ಟುವಂತೆ ಮಾಡಿತು, ಕಳಶ ಹೊತ್ತ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮುಂಭಾಗದಲ್ಲಿ ಹೊರಟರೆ ಅವರನ್ನ ಹಿಂಬಾಲಿಸಿ ಕಲಾ ತಂಡಗಳು ಹೆಜ್ಜೆ ಹಾಕಿದವು. ಸೋಮನ ನೃತ್ಯ, ನವಿಲು ಕುಣಿತ, ನಗರದ ಎಂಜಿ ರಸ್ತೆಯಿಂದ ಸಾಹಿ ಕನಕದಾಸರ ವೃತ್ತ, ಅಂಬೇಡ್ಕರ್ ಭವನದ ರಸ್ತೆ ಮೂಲಕ ಶಿಡ್ಲಘಟ್ಟವೃತ್ತ ಅಲ್ಲಿಂದ ಬಿಬಿ ರಸ್ತೆಯ ಮೂಲಕ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದ ಕಡೆ ಸಾಗಿತು. ಸುಮಾರು ಮೂವರೆ ಗಂಟೆಕಾಲ ಉತ್ಸವದ ಮೆರವಣಿ ನಡೆಯಿತು.