ಚಿಕ್ಕಬಳ್ಳಾಪುರದಿಂದ ಮುಳಬಾಗಿಲುವರೆಗೆ 82 ಕಿ.ಮೀ ಚತುಷ್ಪಥ ರಸ್ತೆ

By Kannadaprabha NewsFirst Published Aug 18, 2023, 10:50 PM IST
Highlights

ಕಾರ್ಯ ಸಾಧ್ಯತಾ ವರದಿ ತಯಾರಿಸಿ, ವರ್ಷದೊಳಗೆ ಟೆಂಡರ್‌ ಕೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ

ಚಿಕ್ಕಬಳ್ಳಾಪುರ(ಆ.18):  ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44ರಿಂದ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಮುಳಬಾಗಿಲಿನ ರಾಷ್ಟ್ರೀಯ ಹೆದ್ದಾರಿ 4ರವರೆಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಮತ್ತು ಈ ವರ್ಷ ಟೆಂಡರ್‌ ಕೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ತುಮಕೂರು ಜಿಲ್ಲೆಯ ಶಿರಾ-ಕೋಲಾರ ಜಿಲ್ಲೆಯ ಮುಳಬಾಗಿಲುವರೆಗಿನ ರಾಷ್ಟ್ರೀಯ ಹೆದ್ದಾರಿ 234ನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು. ಹಾಲಿ ಇರುವ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಮುಂದಾಗಿದೆ.

ನಮ್ಮ ಮಾತಾಪಿತರೇ ನಮಗೆ ಮಾದರಿ: ಶಾಸಕ ಪ್ರದೀಪ್‌ ಈಶ್ವರ್‌

ಜಿಲ್ಲೆಯಲ್ಲಿ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಚಿಂತಾಮಣಿ ಹಾಗೂ ರೇಷ್ಮೆ ನಗರಿ ಶಿಡ್ಲಘಟ್ಟತಾಲೂಕನ್ನು ಗಮನದಲ್ಲಿ ಇರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ದಟ್ಟಣೆ ಹಾಗೂ ಬರುವ ದಿನಗಳಲ್ಲಿ ಚಿಂತಾಮಣಿ, ಚಿಕ್ಕಬಳ್ಳಾಪುರ ,ಬಾಗೇಪಲ್ಲಿ ತಾಲೂಕುಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲುವರೆಗಿನ ಹಾಲಿ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ಪರಿವರ್ತಿಸಿದರೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆಯೆಂಬ ಹಿನ್ನಲೆಯಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

82 ಕಿ.ಮೀ ಹೆದ್ದಾರಿ:

ಚಿಕ್ಕಬಳ್ಳಾಪುರದಿಂದ ವಯಾ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮೂಲಕ ಮುಳಬಾಗಿಲುವರೆಗೂ ಒಟ್ಟು 82 ಕಿ.ಮೀ ಅಂತರ ಇದ್ದು ಹಾಲಿ ಇರುವ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು ಸಾಧ್ಯವಿದೆಯೆ? ಸದ್ಯ ಹಾಲಿ ಇರುವ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೇಗಿದೆ? ಭೂ ಸ್ವಾಧೀನ ಅಗತ್ಯ ಇದೆಯೆ? ಮತ್ತಿತರ ಸಾಧಕ ಭಾದಕಗಳ ಕುರಿತು ಸಮಗ್ರವಾದ ಕಾರ್ಯ ಸಾಧ್ಯತಾ ವರದಿಯನ್ನು ತಯಾರಿಸಿ, ಈ ವರ್ಷವೇ ಹೆದ್ದಾರಿ ಪ್ರಾಧಿಕಾರ ಟೆಂಡರ್‌ ಕರೆಯಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಸಿಕ್ಕ ಬಳಿಕ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ 234 ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ.ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. 

ಮಕ್ಕಳಾಗಿಲ್ಲ ಅಂತ ದೇವರ ಮೊರೆ: ಭಕ್ತೆಯ ಜತೆ ಪರಾರಿಯಾಗಿದ್ದ ಪೂಜಾರಿ ತಾತ ಪತ್ತೆ!

ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದ ಸಚಿವ ಎಂ.ಸಿ.ಸುಧಾಕರ್‌:

ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಇತ್ತೀಚೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿರನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ದೆಹಲಿಯಲ್ಲಿ ಭೇಟಿ ಮಾಡಿ ಜಿಲ್ಲೆಯಲ್ಲಿ ಆಗಬೇಕಾದ ಹೆದ್ದಾರಿ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದರು.

ಅಂತರ ಜಿಲ್ಲೆ, ಅಂತರ ರಾಜ್ಯಕ್ಕೆ ಸಂಪರ್ಕ:

ಈಗಾಗಲೇ ತುಮಕೂರು ಜಿಲ್ಲೆಯ ಶಿರಾದಿಂದ ಕೊರಟಗೆರೆ, ಮಧುಗಿರಿ ಮೂಲಕ ಗೌರಿಬಿದನೂರಿನ ವರೆಗೂ ರಾಷ್ಟ್ರೀಯ ಹೆದ್ದಾರಿ 234 ಅಗಲೀಕರಣ ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ಗಡವು ಕೊಡಲಾಗಿದೆ. ಜಿಲ್ಲೆಯಿಂದ ಶಿರಾ ಸಂಪರ್ಕ ಕಲ್ಪಿಸುವ ಹೆದ್ದಾರಿಯು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಮೂಲಕ ಆಂಧ್ರಪ್ರದೇಶ ಮತ್ತು ತಮಿಳುನಾಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ.

click me!