ಮಂಗಳೂರಲ್ಲಿ ಪಾತಾಳಕ್ಕಿಳಿದ ಕೋಳಿ ಬೆಲೆ: ಕೆಜಿಗೆ 50 ರೂಪಾಯಿ

By Kannadaprabha NewsFirst Published Mar 15, 2020, 8:57 AM IST
Highlights

ಕೋಳಿ ಮಾಂಸ ಸುರಕ್ಷಿತವೆಂದು ವೈದ್ಯರು, ಸರ್ಕಾರ ದೃಢಪಡಿಸಿದರೂ ಜನರು ಮಾತ್ರ ಬಾಯ್ಲರ್‌ ಕೋಳಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ 130 ರು.ಗೂ ಹೆಚ್ಚಿದ್ದ ಕೋಳಿ ಬೆಲೆ ಈಗ ದಿಢೀರನೆ ಕೆಜಿಗೆ 50 ರು. ಆಸುಪಾಸಿಗೆ ಕುಸಿದುಬಿಟ್ಟಿದೆ. ಇನ್ನಷ್ಟುದರ ಕುಸಿತದ ಭೀತಿಯೂ ಆವರಿಸಿದೆ.

ಮಂಗಳೂರು(ಮಾ.15): ದಿನವೊಂದಕ್ಕೆ ಕೋಟ್ಯಂತರ ರು. ವಹಿವಾಟು ನಡೆಸುವ ಕುಕ್ಕುಟೋದ್ಯಮ ಈಗ ಕೊರೋನಾ ಎಫೆಕ್ಟ್ನಿಂದಾಗಿ ದ.ಕ. ಜಿಲ್ಲೆಯಲ್ಲಿ ಪಾತಾಳಕ್ಕೆ ಕುಸಿದಿದೆ. ಕೋಳಿ ಮಾಂಸ ಸುರಕ್ಷಿತವೆಂದು ವೈದ್ಯರು, ಸರ್ಕಾರ ದೃಢಪಡಿಸಿದರೂ ಜನರು ಮಾತ್ರ ಬಾಯ್ಲರ್‌ ಕೋಳಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ 130 ರು.ಗೂ ಹೆಚ್ಚಿದ್ದ ಕೋಳಿ ಬೆಲೆ ಈಗ ದಿಢೀರನೆ ಕೆಜಿಗೆ 50 ರು. ಆಸುಪಾಸಿಗೆ ಕುಸಿದುಬಿಟ್ಟಿದೆ. ಇನ್ನಷ್ಟುದರ ಕುಸಿತದ ಭೀತಿಯೂ ಆವರಿಸಿದೆ.

ಜಾಲತಾಣಗಳಲ್ಲಿ ಕೋಳಿಯಿಂದ ಕೊರೋನಾ ಹರಡುತ್ತದೆ ಎನ್ನುವ ಸುಳ್ಳು ವದಂತಿಗಳನ್ನು ಪಸರಿಸಲಾಗುತ್ತಿದೆ. ಹೀಗಾಗಿ ಜನರು ಹಿಂದೇಟು ಹಾಕುತ್ತಿದ್ದಾರೆ. ಕೊರೋನಾ ಎಫೆಕ್ಟ್ ತಟ್ಟಿರುವುದು ಕೇವಲ ಬಾಯ್ಲರ್‌ ಕೋಳಿಗೆ ಮಾತ್ರ! ನಾಟಿ ಕೋಳಿಯಾಗಲೀ, ಕುರಿ ಮಾಂಸ, ಮತ್ಸ್ಯೋದ್ಯಮಕ್ಕಾಗಲೀ ಯಾವುದೇ ಹೊಡೆತ ಬಿದ್ದಿಲ್ಲ ಎನ್ನುವುದು ವಿಶೇಷ.

ಹೊರ ರಾಜ್ಯಗಳಿಂದಲೂ ಬೇಡಿಕೆಯಿಲ್ಲ:

ಹಿಂದೆ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಜಿ ಬಾಯ್ಲರ್‌ ಕೋಳಿ ಏನಿಲ್ಲವೆಂದರೂ 130 ರು.ಗೆ ಮಾರಾಟವಾಗುತ್ತಿತ್ತು. ಈಗ ಗರಿಷ್ಠ ಎಂದರೆ 60 ರು.ಗೆ ಮಾರಾಟವಾಗುತ್ತಿದೆ. ಕೆಲವೆಡೆ 45-55 ರು.ಗೂ ಇಳಿದುಬಿಟ್ಟಿದೆ. ಕರ್ನಾಟಕ ಮಾತ್ರವಲ್ಲ, ತಮಿಳುನಾಡು, ಮಹಾರಾಷ್ಟ್ರದಿಂದಲೂ ಬೇಡಿಕೆಯೇ ಇಲ್ಲ. ಪ್ರಸ್ತುತ ಕೇರಳದಲ್ಲಿ ಹಕ್ಕಿಜ್ವರದಿಂದಾಗಿ ಅಲ್ಲಿಗೆ ಕೋಳಿ ಸಾಗಾಟವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಕುಕ್ಕುಟೋದ್ಯಮ ನಷ್ಟದಂಚಿಗೆ ಸಾಗಿದೆ ಎಂದು ಈ ಉದ್ದಿಮೆ ನಡೆಸುತ್ತಿರುವ ಪ್ರಕಾಶ್‌ ಸಾಲ್ಯಾನ್‌ ತಿಳಿಸಿದರು.

ಜಿಲ್ಲೆಯಲ್ಲಿ ಹಿಂದೆ ಕೆಲವೇ ಕೆಲವು ಬ್ರೀಡಿಂಗ್‌ ಫಾರಂ ಕಂಪೆನಿಗಳಿದ್ದವು. ಇದೀಗ ಫಾರಂ ಕಂಪೆನಿಗಳ ಸಂಖ್ಯೆ ಏರಿಕೆಯಾಗಿರುವುದರಿಂದ ಕೋಳಿ ಉತ್ಪಾದನೆಯೂ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಏನಿಲ್ಲವೆಂದರೂ ದಿನವೊಂದಕ್ಕೆ 4-5 ಲಕ್ಷ ಕೋಳಿಗಳು ಉತ್ಪಾದನೆಯಾಗುತ್ತಿವೆ. ನಿತ್ಯ ಉತ್ಪಾದನೆಯ ಉದ್ದಿಮೆಯಾಗಿರುವುದರಿಂದ ಕೋಳಿಯನ್ನು ಹೆಚ್ಚು ದಿನ ಇಡುವುದಕ್ಕೂ ಆಗುವುದಿಲ್ಲ. ಕೆಲವರು ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವುದರಿಂದ ದರ ತೀವ್ರ ಇಳಿಮುಖವಾಗಿ ಈಗ ಕಾರ್ಮಿಕರಿಗೆ ಸಂಬಳ ನೀಡಲಾಗದ ಸ್ಥಿತಿಗೆ ಕುಕ್ಕುಟೋದ್ಯಮಿಗಳು ತಲುಪಿದ್ದಾರೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಮೊಟ್ಟೆಬೆಲೆಯೂ ಡೌನ್‌!:

ಬಾಯ್ಲರ್‌ ಕೋಳಿ ಮಾತ್ರವಲ್ಲ, ಮೊಟ್ಟೆಗೂ ಬೇಡಿಕೆ ಕುಸಿದಿದೆ. ಕೆಲವು ವಾರಗಳ ಹಿಂದೆ ಚಿಲ್ಲರೆ ವ್ಯಾಪಾರದಲ್ಲಿ ಒಂದು ಮೊಟ್ಟೆಯ ಬೆಲೆ 5.50 ರು. ಇದ್ದದ್ದು ಈಗ 4.50 ರು.ಗೆ ಇಳಿದಿದೆ.

ಬಂದ್‌ನಿಂದ ಮತ್ತಷ್ಟುಸಂಕಟ: ಇದೀಗ ರಾಜ್ಯ ಸರ್ಕಾರ ಒಂದು ವಾರ ‘ಬಂದ್‌’ ಘೋಷಿಸಿರುವುದರಿಂದ ಕೋಳಿ ಉದ್ಯಮದ ಮೇಲೆ ಮತ್ತಷ್ಟುಹೊಡೆತ ಬಿದ್ದಿದೆ. ಅನೇಕ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಕೋಳಿ ಮಾಂಸವನ್ನು ಕ್ಯಾಟರಿಂಗ್‌ನವರು ಕೇಳುತ್ತಲೇ ಇಲ್ಲ. ಹೊಟೇಲ್‌ಗಳಲ್ಲೂ ಕೋಳಿ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ ಬೆಲೆ ಇನ್ನಷ್ಟುಇಳಿಕೆಯಾದರೂ ಅಚ್ಚರಿಯಿಲ್ಲ ಎನ್ನುವುದು ವ್ಯಾಪಾರಸ್ಥರ ಅಳಲು.

ನಾಟಿ ಕೋಳಿ ಬೆಲೆ ಸ್ಥಿರ

ಕೊರೋನಾ ಅಪಪ್ರಚಾರದ ನಡುವೆಯೂ ನಾಟಿ ಕೋಳಿ ಬೆಲೆಯಲ್ಲಾಗಲೀ, ವ್ಯಾಪಾರದಲ್ಲಾಗಲೀ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗಿಲ್ಲ. ಬಾಯ್ಲರ್‌ ಕೋಳಿ ಕೇಳುವವರೇ ಇಲ್ಲವಾಗಿದ್ದರೆ, ನಾಟಿ ಕೋಳಿ ಮಾತ್ರ ಪ್ರತಿ ಕೆಜಿಗೆ 500 ರು.ಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲೂ ನಾಟಿ ಕೋಳಿ ಬೆಲೆ ಸ್ಥಿರವಾಗಿಯೇ ಉಳಿಯಲಿದೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.

ಕೊರೋನಾಗೂ ಕೋಳಿಗೂ ಸಂಬಂಧ ಇಲ್ಲ

ಜಾಲತಾಣಗಳ ಅಪಪ್ರಚಾರಗಳನ್ನು ಅಲ್ಲಗಳೆದಿರುವ ನಗರದ ಹಿರಿಯ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಕೊರೋನಾಗೂ ಕೋಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏನೋ ಸೋಂಕು ಬಂದರೂ ಎಲ್ಲದಕ್ಕೂ ಕೋಳಿಯನ್ನು ‘ಬಲಿ’ ಮಾಡಲಾಗುತ್ತಿದೆ. ಕೋಳಿ ಮಾನವನಿಗೆ ಅತ್ಯುತ್ತಮ ಆಹಾರವಾಗಿದ್ದು, ಇದರ ವಿರುದ್ಧ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

click me!