ಕೊರೋನಾ ಎಂಬ ಮಹಾಮಾರಿ ತಡೆಗಟ್ಟಲು ಹಲವು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು[ಮಾ.15]: ಶಾಪಿಂಗ್ ಮಾಲ್, ಪಬ್, ಕ್ಲಬ್, ಚಿತ್ರಮಂದಿರ, ರೆಸ್ಟೋರೆಂಟ್‌ಗಳು ಬಂದ್ ಆದ ಶನಿವಾರದಂದು ಸಿಲಿಕಾನ್ ಸಿಟಿ ಬೆಂಗಳೂರು ನಗರವು ಏಕಾಏಕಿ 90ರ ದಶಕಕ್ಕೆ ಜಾರಿದಂತೆ ಕಂಡುಬಂತು.
ನಗರದಾದ್ಯಂತ ಈಗ 22ಕ್ಕೂ ಹೆಚ್ಚು ಬೃಹತ್ ಮಾಲ್‌ಗಳು, 70ಕ್ಕೂ ಅಧಿಕ ಸೂಪರ್ ಮಾರ್ಕೆಟ್, 1 ಸಾವಿರಕ್ಕೂ ಅಧಿಕ ಪಬ್ ಮತ್ತು ಬಾರ್, ನೂರಾರು ಕ್ಲಬ್ ಮತ್ತು ಚಿತ್ರಮಂದಿರಗಳನ್ನು ಹೊಂದಿರುವ ಒಂದೂಕಾಲು ಕೋಟಿ ಜನಸಂಖ್ಯೆಯ ಈ ಉದ್ಯಾನ ನಗರಿ ವಾರಾಂತ್ಯದಲ್ಲಿ ಮೇಲಿನ ತಾಣಗಳಲ್ಲಿ ನೆರೆದು ಮೊರೆಯುತ್ತಿತ್ತು. ಆದರೆ, ಈ ಶನಿವಾರ ಅಪವಾದವಾಗಿತ್ತು.
undefined
ತೊಂಭತ್ತರ ದಶಕದ ಫ್ಲಾಷ್‌ಬ್ಯಾಕ್ ಕಣ್ಮುಂದೆ ಬಂದಂತೆ ನಗರ ರೂಪಾಂತರಗೊಂಡಿತ್ತು. ವಾಹನ ದಟ್ಟಣೆ ಇರಲಿಲ್ಲ. ಜನ ಸಂದಣಿ ವಿರಳವಾಗಿತ್ತು. ಎಲ್ಲೋ ಅಲ್ಲೊಂದು ಬಾರ್, ರೆಸ್ಟೋರೆಂಟ್‌ಗಳಲ್ಲಿ ಕೆಲ ಜನ ಕಾಣಿಸಿಕೊಂಡರೆ ಮಾಲ್‌ಗಳನ್ನು ಬಾಗಿ ಹಾಕಿಕೊಂಡಿದ್ದವು. ಜನ ಮನೆ ಬಿಟ್ಟು ಹೊರ ಬರಲಿಲ್ಲ. ಇಡೀ ನಗರ ಪ್ರಶಾಂತವಾಗಿತ್ತು. ಥೇಟ್ 90 ದಶಕದಂತೆ!
ಇದೆಲಕ್ಕೂ ಕಾರಣ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧ. ಶನಿವಾರದಿಂದ ಏಳು ದಿನ ಶಾಪಿಂಗ್ ಮಾಲ್, ಕ್ಲಬ್, ಪಬ್, ಚಿತ್ರಮಂದಿರ, ರೆಸ್ಟೋರೆಂಟ್‌ಗಳ ಬಂದ್‌ಗೆ ಸೂಚಿಸಿ, ಸಭೆ-ಸಮಾರಂಭ ನಡೆಸದಂತೆ ಕಟ್ಟಪ್ಪಣೆ ಹೊರಡಿಸಿದ್ದರಿಂದ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ನಗರ ಶಾಂತವಾಗಿತ್ತು. ಅದರಲ್ಲೂ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾ ನಗರ ಸೇರಿದಂತೆ ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ, ಬಸ್, ಆಟೋ, ಕ್ಯಾಬ್ ಸಂಚಾರ ಸಂಖ್ಯೆವಿರಳವಾಗಿತ್ತು. ಇನ್ನು ದರ್ಶಿನಿ, ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಕುಸಿದಿತ್ತು. ವಿಕೆಂಡ್ ಬಂದರೆ ಸಾಕು ಮಕ್ಕಳು, ಯುವಕರಿಂದ ತುಂಬಿ ತುಳುಕುತ್ತಿದ್ದ ನಗರದ ಆಟದ ಮೈದಾನಗಳು ಖಾಲಿ-ಖಾಲಿಯಾಗಿದ್ದವು. ನಡುಗೆದಾರರು ಸಾಮಾನ್ಯ ದಿನಗಳಂತೆ ಉದ್ಯಾನವನÜಗಳಿಗೆ ಮಾಸ್ಕ್ ಧರಿಸಿಕೊಂಡು ಬಂದರಾದರೂ ವಾರಾಂತ್ಯದ ಮೋಜು ಮಸ್ತಿಗೆ ಉದ್ಯಾಮವನಗಳಿಗೆ ಆಗಮಿಸಿದವರ ಸಂಖ್ಯೆ ಅರ್ಧದಷ್ಟುಕಡಿಮೆಯಾಗಿತ್ತು.
ಬೆಚ್ಚಗೆ ಗೂಡು ಸೇರಿದ ಮಂದಿ:
ವೀಕೆಂಡ್ ಮತ್ತು ರಜೆ ಸಿಕ್ಕರೆ ಸಾಕು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ದಿನವಿಡಿ ಹೋಟೆಲ್, ಪಾರ್ಕ್, ಸಿನಿಮಾ, ಕ್ಲಬ್, ಪಬ್ ಎಂದು ಸುತ್ತುವ ಬೆಂಗಳೂರಿಗರು ಶನಿವಾರ ಮನೆಯಿಂದ ಹೊರಗೆ ಬರುವುದಕ್ಕೆ ಹಿಂದೇಟು ಹಾಕಿದರು. ಇಡೀ ದಿನ ಟಿವಿ ಮುಂದು ಕುಳಿತು ಕಳೆದರು. ಇನ್ನು ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ನೀಡಿದರಿಂದ ಟೆಕಿಗಳು ಸ್ವಂತ ಊರುಗಳಿಗೆ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಾಲ್ ಗೇಟ್‌ಗೆ ಬಂದ್ ಬೋರ್ಡ್:
ನಗರದಲ್ಲಿ 22 ಮಾಲ್‌ಗಳಿದ್ದು, ಶನಿವಾರ ಬೆಳಗ್ಗೆಯಿಂದಲೇ ಬಹುತೇಕ ಮಾಲ್‌ಗಳ ಗೇಟ್‌ಗೆ ಕರ್ನಾಟಕ ಸರ್ಕಾರದ ಆದೇಶದ ಹಿನ್ನೆಲೆ ಬಂದ್ ಮಾಡಲಾಗಿದೆ ಎಂದು ಬೋರ್ಡ್‌ಗಳನ್ನು ನೇತು ಹಾಕಿದ ದೃಶ್ಯಗಳು ಕಂಡು ಬಂದವು. ಕೆಲವು ಮಾಲ್‌ಗಳು ಸರ್ಕಾರದ ಆದೇಶ ಮೀರಿ ತೆರೆಯಲಾಗಿತ್ತು. ಬಳಿಕ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹೋಗಿ ಮುಚ್ಚಿಸಿದ ಘಟನೆ ನಡೆಯಿತು. ಮಾಲ್‌ಗಳ ಜೊತೆಗೆ ಸೂಪರ್ ಮಾರ್ಕೆಟ್‌ಗಳಾದ ಬಿಗ್‌ಬಜಾರ್, ರಿಲಯನ್ಸ್ ಫ್ರೆಶ್, ಮೋರ್ ಸೇರಿದಂತೆ ಇನ್ನಿತರ ಸುಮಾರು 70ಕ್ಕೂ ಅಧಿಕ ಸೂಪರ್ ಮಾರ್ಕೆಟ್‌ಗಳ ಬಂದ್‌ಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದರು. ಇದರಿಂದ ಎಲ್ಲ ಸೂಪರ್ ಮಾರುಕಟ್ಟೆಗಳು ಬಂದ್ ಆಗಿದ್ದವು. ಕೆಲ ಗ್ರಾಹಕರು ಮಾಲ್‌ಗಳತ್ತ ಹೋಗಿ ಬಂದ್ ಆಗಿರುವ ಬಗ್ಗೆ ಮಾಹಿತಿ ಪಡೆದು ಮನೆಕಡೆಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶೇ.50 ವ್ಯಾಪಾರ ನಷ್ಟ: ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಬಂದ್‌ನ ವಾತಾವರಣ ನಿರ್ಮಾಣಗೊಂಡಿದ್ದರಿಂದ ಶನಿವಾರ ನಗರದಲ್ಲಿ ಸಾರ್ವಜನಿಕ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದಿದ್ದು, ಶೇ.50ರಷ್ಟುವ್ಯಾಪಾರ ವಹಿವಾಟು ನಷ್ಟಉಂಟಾಗಿದೆ. ದಿನಕ್ಕೆ .25 ಸಾವಿರ ವ್ಯಾಪಾರವಾಗುತ್ತಿದ್ದ ಹೋಟೆಲ್‌ಗಳಲ್ಲಿ ಕೇವಲ 10 ರಿಂದ 12 ಸಾವಿರ ರು. ವ್ಯಾಪಾರವಾಗಿದೆ. ಹೋಟೆಲ್ ಪಾರ್ಟಿ ಹಾಲ್‌ಗಳಲ್ಲಿ 100 ಮಂದಿಗೂ ಹೆಚ್ಚಿನ ಸಂಖ್ಯೆಜನ ಸೇರಿದರೆ ಆಹಾರ ವಿತರಣೆ ಮಾಡದಂತೆ ಸರ್ಕಾರ ಸೂಚಿಸಿದ್ದು ಹೋಟೆಲ್ ಬಂದ್‌ಗೆ ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ನಗರದ ಕೆಲವು ಭಾಗದಲ್ಲಿ ಪೊಲೀಸರು ಒತ್ತಾಯ ಪೂರ್ವಕವಾಗಿ ಹೋಟೆಲ್‌ಗಳನ್ನು ಮುಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಲಾಲ್ ಬಾಗ್‌ನಲ್ಲಿ ವೀಕ್ಷಕರ ಸಂಖ್ಯೆ ಇಳಿಕೆ
ಲಾಲ್‌ಬಾಗ್, ಕಬ್ಬನ್ ಪಾರ್ಕ್ಗಳಿಗೆ ಬರುವ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ವಾರಾಂತ್ಯದಲ್ಲಿ ಲಾಲ್‌ಬಾಗ್‌ಗೆ ಸುಮಾರು 8-10 ಸಾವಿರ ಮಂದಿ ಆಗಮಿಸುತ್ತಿದ್ದವರ ಪೈಕಿ ಶನಿವಾರ ಸುಮಾರು 500-600 ಮಂದಿ ಮಾತ್ರ ಆಗಮಿಸಿದ್ದರು. ಲಾಲ್‌ಬಾಗ್‌ಗೆ ವಾಯುವಿಹಾರಿಗಳು ಎಂದಿನಂತೆ ಬರುತ್ತಿದ್ದಾರೆ. ಹೀಗೆ ಬರುವವರಿಗೆ ಗುಂಪು ಗುಂಪಾಗಿ ಓಡಾಡುವುದಕ್ಕೆ ಅವಕಾಶ ನೀಡದಂತೆ ಉದ್ಯಾನವನದ ಭದ್ರತಾ ಸಿಬ್ಬಂದಿ ಸೂಚಿಸಲಾಗಿದೆ. ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಾಲ್‌ಬಾಗ್‌ನ ಉಸ್ತುವಾರಿದಾರರಾದ ಎಂ.ಆರ್. ಚಂದ್ರಶೇಖರ್ ತಿಳಿಸಿದರು.
ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ
ಕಬ್ಬನ್‌ಪಾರ್ಕನಲ್ಲಿ ಕಾರ‍್ಯಕ್ರಮ ರದ್ದು
ಪ್ರತಿ ಭಾನುವಾರ ಕಬ್ಬನ್‌ಪಾರ್ಕ್ನಲ್ಲಿ ವಾಹನಗಳ ಸಂಚಾರ ನಿಷೇಧಿಸಿ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಆದರೆ, ಇದೀಗ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಭಾನುವಾರ ಉದ್ಯಾನದಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕಬ್ಬನ್‌ಪಾರ್ಕ್ನಲ್ಲಿ ಸಾಮಾನ್ಯ ದಿನಗಳಿಂತ ಶನಿವಾರ ಶೇ.60ರಷ್ಟುಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಕಳೆದೊಂದು ವಾರದಿಂದಲೇ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ, ಕಬ್ಬನ್‌ಪಾರ್ಕ್ನ ಉಸ್ತುವಾರಿದಾರರಾದ ಜಿ. ಕುಸುಮಾ ತಿಳಿಸಿದರು. ಇದೇ ರೀತಿ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನಕ್ಕೂ ಆಗಮಿಸುವ ಜನರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಬಿಬಿಎಂಪಿಗೆ ಸೇರಿದ 1,020 ಉದ್ಯಾನವನಗಳಲ್ಲಿಯೂ ಜನರ ಸಂಖ್ಯೆ ಕಡಿಮೆಯಾಗಿತ್ತು.
ಕಲ್ಯಾಣ ಮಂಟಪದಲ್ಲಿ ಮೂರು ಮತ್ತೊಬ್ಬರು!
ಹಲವಾರು ತಿಂಗಳಿಂದ ಮದುವೆಗೆ ಅದ್ದೂರಿ ಸಿದ್ಧತೆ ಮಾಡಿಕೊಂಡವರಿಗೆ ಕೊರೋನಾ ವೈರೆಸ್ ಬೇಸರ ತಂದೊಡ್ಡಿದೆ. ನಗರದ ವಿವಿಧ ಕಲ್ಯಾಣ ಮಂಟಪಗಳಲ್ಲಿ ಶನಿವಾರ ನಡೆದ ಮದುವೆ ಸಮಾರಂಭದಲ್ಲಿ ತೀರಾ ಹತ್ತಿರದ ಸಂಬಂಧಿಗಳು ಬಿಟ್ಟರೆ ಬೇರೆ ಯಾರೂ ಆಗಮಿಸಲಿಲ್ಲ. ಇದರಿಂದ ವಧು-ವರನ ಕುಟುಂಬಸ್ಥರು ಬೇಸರಗೊಂಡ ಘಟನೆ ನಡೆದಿವೆ. ಇನ್ನುಸರ್ಕಾರ ಸರಳವಾಗಿ ಮದುವೆ ನಡೆಸುವುದಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ನಗರದ ಕಲ್ಯಾಣ ಮಂಟಪಗಳಲ್ಲಿ ಈಗಾಗಲೇ ಬುಕ್ಕಿಂಗ್ ಆಗಿರುವ ಯಾವುದೇ ಮದುವೆ ರದ್ದು ಆಗಿಲ್ಲ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರೆದ ಮದುವೆ ಸಮಾರಂಭಗಳು ರದ್ದಾಗಲಿವೆ ಎಂದು ಶುಭರಾಮ್ ಕಲ್ಯಾಣ ಮಂಟಪದ ಮಾಲೀಕರು ಆತಂಕವ್ಯಕ್ತಪಡಿಸಿದ್ದಾರೆ.
ಮದುವೆಗೆ ಜನ ಬರಲಿಲ್ಲ ಎಂದು ಕಣ್ಣೀರು!
ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಶುಭರಾಮ್ ಕಲ್ಯಾಣ ಮಂಟಪದಲ್ಲಿ ಸತ್ಯನಾರಾಯಣ್ ಕುಟುಂಬದ ಮದುವೆ ಸಮಾರಂಭ ಶನಿವಾರ ನಡೆಯಿತು. ಮದುವೆ ಸಮಾರಂಭಕ್ಕೆ 500ಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ವಧು-ವರನ ಕುಟುಂಬಸ್ಥರು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮದುವೆಗೆ ಕೇವಲ 70-80 ಮಂದಿ ಮಾತ್ರ ಆಗಮಿಸಿದರು. ಇದರಿಂದ ವಧು-ವರನ ಕುಟುಂಬಸ್ಥರು ತೀವ್ರ ಬೇಸರಗೊಂಡು ಕಣ್ಣೀರು ಹಾಕಿದ ಘಟನೆ ನಡೆಯಿತು.
2 ವರ್ಷದ ಹಿಂದೆ ಕಲ್ಯಾಣ ಮಂಟಪ ಬುಕ್: ಈ ಮದುವೆಗೆ ಕಳೆದ ಎರಡು ವರ್ಷದ ಹಿಂದೆ 2018ರಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ, ವರನ ತಂದೆ ಮೃತಪಟ್ಟಿದರಿಂದ ಮದುವೆ ಮುಂದೂಡಲಾಗಿತ್ತು. ಎರಡು ವರ್ಷದಿಂದ ಕಾದು ಶನಿವಾರ ನಡೆಸಿದ ಮದುವೆಗೆ ಆಗಮಿಸಿದವರ ಸಂಖ್ಯೆ ಕಡಿಮೆಯಾಗಿದ್ದರಿಂದ ಸಂಬಂಧಿಕರು ಬೇಸರಗೊಂಡಿದ್ದಾರೆ ಎಂದು ಕಲ್ಯಾಣ ಮಂಟಪದ ಮಾಲಿಕರು ಮಾಹಿತಿ ನೋಡಿದ್ದಾರೆ.
ಆನ್‌ಲೈನ್ ಫುಡ್ ಡಿಲವರಿ ಯಥಾಸ್ಥಿತಿ
ನಗರದಲ್ಲಿ ದೊಡ್ಡ ಮಟ್ಟದಲ್ಲಿ ಆನ್‌ಲೈನ್ ಫುಡ್ ಡಿಲವರಿ ವ್ಯಾಪಾರ ನಡುತ್ತಿದ್ದು, ಶನಿವಾರ ಹೋಟೆಲ್ ವ್ಯಾಪಾರ ಭಾರೀ ಕುಸಿತ ಗೊಂಡರೂ ಆನ್‌ಲೈನ್ ಫುಡ್ ಡಿಲವರಿಯಲ್ಲಿ ಯಾವುದೇ ವ್ಯತ್ಯಾಸವಾಗದೇ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಆದರೆ, ಮಾಂಸ ಆಹಾರದ ಬುಕ್ಕಿಂಗ್ ಹಾಗೂ ಡಿಲವರಿಯಲ್ಲಿ ಶೇ.5 ರಷ್ಟುಕುಸಿತಗೊಂಡಿದೆ ಎಂದು ಸ್ವಿಗ್ಗಿ ಫುಡ್ ಡಿಲವರಿ ಸಂಸ್ಥೆ ಮಾಹಿತಿ ನೀಡಿದೆ.
ಶೇ.70ರಷ್ಟುಹೋಟೆಲ್ ರೂಂ ಖಾಲಿ ಖಾಲಿ
ನಗರದಲ್ಲಿ ಎರಡು ಸ್ಟಾರ್‌ನಿಂದ ಐದು ಸ್ಟಾರ್ ವರೆಗೆ ಒಟ್ಟು 580 ಹೋಟೆಲ್‌ಗಳಿವೆ. ಶೇ.70 ರಷ್ಟುಹೋಟೆಲ್‌ಗಳ ರೂಂಗಳು ಖಾಲಿ ಇವೆ. ಕೇವಲ 20 ರಷ್ಟುಮಾತ್ರ ರೂಂ ಬುಕ್ಕಿಂಗ್ ಆಗುತ್ತಿದೆ. ವಿದೇಶಿ ಪ್ರವಾಸಿಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಸ್ಥಳೀಯರು ಸಹ ಹೋಟೆಲ್‌ಗಳಿಗೆ ಬರುತ್ತಿಲ್ಲ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.