ಕೊರೋನಾ ಭೀತಿ| ಹೊರಗೆ ಬಾರದ ಜನರು| ಶಾಲೆ-ಕಾಲೇಜುಗಳು ಬಂದ್ ದೇವಸ್ಥಾನಗಳಲ್ಲಿ ಜನರಿಲ್ಲ| ಎಲ್ಲ ಅಂಗಡಿಗಳೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ|
ಹರಪನಹಳ್ಳಿ(ಮಾ.15): ಸಿನಿಮಾ ಟಾಕೀಸ್ ಬಂದ್, ಬಿಕೋ ಎನ್ನುತ್ತಿರುವ ಕೋಳಿ ಅಂಗಡಿಗಳು, ಮಿಲ್ಟರಿ ಹೋಟೆಲ್‌ಗಳ ಗ್ರಾಹಕರ ಇಳಿಮುಖ, ಮಧ್ಯಾಹ್ನ ಹೊರಗೆ ಬಾರದ ಜನರು. ಶಾಲೆ-ಕಾಲೇಜುಗಳು ಬಂದ್ ದೇವಸ್ಥಾನಗಳಲ್ಲಿ ಜನರಿಲ್ಲ. ಇದು ಹರಪನಹಳ್ಳಿಯಲ್ಲಿ ಕೊರೋನಾ ಭೀತಿಯ ನಂತರದ ಸ್ಥಿತಿ.
ಇರುವ ಎರಡು ಸಿನಿಮಾ ಟಾಕೀಸುಗಳಲ್ಲಿ ಜನರು ಬಾರದ ಹಿನ್ನೆಲೆಯಲ್ಲಿ ಒಂದು ಟಾಕೀಸ್ ಬಂದ್ ಆಗಿ ಒಂದು ವರ್ಷ ಕಳೆದಿದೆ. ಇರುವ ಒಂದು ಕುಸುಮಾ ಟಾಕೀಸ್ ಸಹ ಕುಂಟುತ್ತಾ ಸಾಗಿತ್ತು, ಅದೂ ಈಗ ಕರೋನಾ ಭೀತಿ ಹಿನ್ನಲೆಯಲ್ಲಿ ಬಂದ್ ಆಗಿದೆ.
ಸಂಪೂರ್ಣ ಬೆಂಗಳೂರು ಖಾಲಿ ಖಾಲಿ! ಎಲ್ಲವೂ ಬಂದ್
ಅಯ್ಯನಕೆರೆ ಬಳಿ 13-14 ಕೋಳಿ ಅಂಗಡಿಗಳಿದ್ದು, ಈಗ ಎಲ್ಲ ಅಂಗಡಿಗಳೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ದಿನವೊಂದಕ್ಕೆ ಒಂದು ಅಂಗಡಿಯಲ್ಲಿ 3 ರಿಂದ 4 ಸಾವಿರ ವ್ಯಾಪಾರ ಆಗುತ್ತಿತ್ತು. ಈಗ 500 ಆಗುವುದು ಕಷ್ಟವಾಗುತ್ತಿದೆ ಎಂದು ಕೋಳಿ ಅಂಗಡಿ ಮಾಲೀಕ ಕಾರ್ತಿಕ ಹೇಳುತ್ತಾರೆ.
ಮಂಗಳೂರು ವ್ಯಕ್ತಿಗೆ ಕೊರೋನಾ ನೆಗೆಟಿವ್: ಡಿಸ್ಚಾರ್ಜ್
ಕೋಳಿ ಅಂಗಡಿಗಳ ಮುಂದೆ ಮಾಲೀಕರು ಹರಟೆ ಹೊಡೆಯುತ್ತಾ ಕಾಲ ತಳ್ಳುತ್ತಿದ್ದಾರೆ. ಹೊಸಪೇಟೆ -ಶಿವಮೊಗ್ಗ ರಾಜ್ಯ ಹೆದ್ದಾರಿ ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
ಮಿಲ್ಟರಿ ಹೋಟೆಲ್‌ಗಳು ಸಹ ಗ್ರಾಹಕರ ಕೊರತೆ ಎದುರಿಸುತ್ತಿವೆ. ದೇವಸ್ಥಾನಗಳಲ್ಲಿ ಭಕ್ತರು ಸಂಖ್ಯೆ ಇಳಿಮುಖವಾಗಿದೆ. ಶಾಲೆ, ಕಾಲೇಜುಗಳು ಸರ್ಕಾರದ ಆದೇಶದಂತೆ ಮುಚ್ಚಲ್ಪಟ್ಟಿದ್ದವು. ಆದರೆ ವಾರದ ಸಂತೆ ಮಾತ್ರ ಶನಿವಾರ ಎಂದಿನಿಂತೆ ಜರುಗಿತು. ಒಟ್ಟಿನಲ್ಲಿ ತಾಲೂಕಿನಾದ್ಯಂತಹ ಕೊರೋನಾದ್ದೇ ಮಾತು.