
ತುಮಕೂರು(ಡಿ.22): ಆಹಾರ ಹುಡುಕಿ ಗ್ರಾಮಕ್ಕೆ ಬಂದ ಚಿರತೆಯೊಂದು ಅಡಕೆ ತೋಟದ ನೀರಿಲ್ಲದ ಬಾವಿಗೆ ಬಿದ್ದ ಘಟನೆ ತಾಲೂಕಿನ ಮಂಚೀಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಮಂಚೀಹಳ್ಳಿ ಗ್ರಾಮದ ಸುರೇಶ್ ಎಂಬ ರೈತರ ತೋಟದ ಬಾವಿಯಲ್ಲಿ ಬಿದ್ದ ಚಿರತೆ ಶುಕ್ರವಾರ ರಾತ್ರಿ ಆಹಾರ ಅರಸಿ ಬೇಟೆಗೆ ಮುಂದಾಗಿ ಆಯ ತಪ್ಪಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಚಿರತೆಯ ದನಿಗೆ ಗಾಬರಿಗೊಂಡ ಗ್ರಾಮಸ್ಥರು ತಂಡೋಪತಂಡವಾಗಿ ಬಾವಿಯತ್ತ ಧಾವಿಸಿದರು. ಬಳಿಕ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ತುಮಕೂರು: ನರಹಂತಕ ಚಿರತೆಯಿಂದ ಜನತೆ ಹೈರಾಣ!
ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ರಕ್ಷಣೆಗೆ ಮುಂದಾಗಿದರು. ಹಾಸನ ವಿಭಾಗದ ಅರವಳಿಕೆ ತಜ್ಞ ಡಾ.ಮರುಳೀಧರ್ ತಂಡ ಚಿರತೆ ಸಂರಕ್ಷಣೆಗೆ ಆಗಮಿಸಿ ಅರವಳಿಕೆ ಮದ್ದು ನೀಡಲು ತಯಾರು ನಡೆಸಿದರು. ಈ ವೇಳೆ ನೂರಾರು ಜನ ಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡ ಚಿರತೆ ಬಾವಿಯಲ್ಲಿ ಸುತ್ತಾಟ ನಡೆಸಿದೆ. ಗಾಯಗೊಂಡು ಆಕ್ರೋಶದಲ್ಲಿದ್ದ ಚಿರತೆಗೆ ಮದ್ದು ನೀಡಲು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿ ಯಶಸ್ವಿ ಕಂಡರು. ನಂತರ ಬೋನಿನ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದ್ದಾರೆ.
15 ದಿನಗಳಲ್ಲಿ 3 ಚಿರತೆ:
ಕಡಬ ಮತ್ತು ಸಿ.ಎಸ್.ಪುರ ಹೋಬಳಿಯಲ್ಲಿ ಸಾಕಷ್ಟುಚಿರತೆಗಳು ಕಾಣಿಸಿಕೊಂಡಿದೆ. ಕಳೆದ 15 ದಿನದಲ್ಲಿ ಮೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ತೋಟದಸಾಲಿನಲ್ಲಿ ಅನಾಯಾಸವಾಗಿ ಓಡಾಡುವ ಚಿರತೆಗಳು ತೋಟದಲ್ಲಿ ನಿರತರ ಕೃಷಿಕರ ಮೇಲೆರೆಗುವ ಸಾಧ್ಯತೆಗಳು ಹೆಚ್ಚಾಗಿವೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮವಹಿಸಿ ಚಿರತೆ ಹಾವಳಿ ತಪ್ಪಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈಗಾಗಲೇ ಗ್ರಾಮಗಳ ಸಮೀಪದಲ್ಲೇ ಹಗಲಿರುಳು ಓಡಾಡುತ್ತಿವೆ. ಹೆಚ್ಚಾಗಿ ಮುಂಜಾನೆ ಸಮಯದಲ್ಲೇ ಕಾಣಿಸಿಕೊಳ್ಳುತ್ತಿವೆ ಎಂದು ದೂರಿದ್ದಾರೆ.
ನಿಧಿಗಾಗಿ 25 ಅಡಿ ಆಳದ ಹೊಂಡ ಅಗೆದ ಖತರ್ನಾಕ್ ಕಳ್ಳರು..!