ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ವಚ್ಛ, ನೈಜ ರಾಜಕಾರಣದ ಅವಶ್ಯವಿದ್ದು, ಯುವ ಜನಾಂಗ ಜನ ಸೇವೆ ಮಾಡುವ ನಿಟ್ಟಿನಲ್ಲಿ ರಾಜಕೀಯ ಪ್ರವೇಶಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆಯಿತ್ತರು.
ಮಧುಗಿರಿ : ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ವಚ್ಛ, ನೈಜ ರಾಜಕಾರಣದ ಅವಶ್ಯವಿದ್ದು, ಯುವ ಜನಾಂಗ ಜನ ಸೇವೆ ಮಾಡುವ ನಿಟ್ಟಿನಲ್ಲಿ ರಾಜಕೀಯ ಪ್ರವೇಶಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆಯಿತ್ತರು.
ತಾಲೂಕಿನ ದೊಡ್ಡೇರಿಯಲ್ಲಿ ನೂತನ ವಾಲ್ಮೀಕಿ ಭವನ ನಿರ್ಮಾಣ, ಗ್ರಾಪಂ ಸಭಾಂಗಣದ ನವೀಕರಣ, ಗ್ರಾಮಸ್ಥರಿಂದ ಸನ್ಮಾನ ಹಾಗೂ ಹೋಬಳಿಯ 9 ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನಗೆ ದೊಡ್ಡೇರಿ ಹೋಬಳಿ ಜನತೆ 2004ರಲ್ಲಿ ರಾಜಕೀಯ ಜನ್ಮ ನೀಡಿದ್ದನ್ನು ನಾನು ಎಂದಿಗೂ ಮರೆಯಲಾರೆ. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೂದಲೆಳೆ ಅಂತರದಲ್ಲಿ ಸೋಲುಂಡೆ. 2013ರಲ್ಲಿ ಮತ್ತೆ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಉದ್ದಗಲಕ್ಕೂ ಜನ ಮೆಚ್ಚುವ ರೀತಿ ಅಭಿವೃದ್ಧಿ ಕೆಲಸ ಮಾಡಿದೆ. ಮತ್ತೆ 2018ರಲ್ಲಿ ಪರಾಜಿತನಾದೆ. ಪ್ರಸ್ತುತ 2023ರ ಅಸೆಂಬ್ಲಿ ಚುನಾವಣೆಯಲ್ಲಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಸಚಿವನಾಗಿದ್ದೇನೆ. ಈ ಹಿಂದೆ ಮನೆ ಇಲ್ಲದರಿಗೆ 16,400 ಮನೆಗಳ ನಿರ್ಮಾಣ ಹಾಗೂ ಅಧಿಕಾರಿಗಳ ಜತೆ ಜನರ ಮನೆ ಬಾಗಿಲಿಗೆ ಹೋಗಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಿದ್ದೇನೆ. ಈಗಲೂ ನನ್ನ ಕಷ್ಟಕಾಲದಲ್ಲಿ ಜೊತೆಗಿದ್ದು ನನಗೆ ಸಹಾಯ ಮಾಡಿದವರ ಮತ್ತು ಬಡವರ ಋುಣ ತೀರಿಸುವ ಕೆಲಸ ಮಾಡುತ್ತೇನೆ. ವಿದ್ಯೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1 ರಿಂದ 10ನೇ ತರಗತಿಯ ತಾಲೂಕಿನ ಎಲ್ಲ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ತಲುಪಿಸುವ ಜವಾಬ್ದಾರಿ ನನ್ನದು. ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಓದಿ ಮುಂದೆ ಬರಬೇಕು. ಶಾಲಾ ಕೊಠಡಿ, ಶೌಚಾಲಯ, ಅಂಗನವಾಡಿಗಳ ದುರಸ್ತಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ, ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೇತ್ರಾವತಿ, ಕುಮಾರಧಾರ ನದಿಗಳ ನೀರನ್ನು ತಡೆಯುವ ಉದ್ದೇಶದಿಂದ 1ಲಕ್ಷ 36 ಸಾವಿರ ಕೋಟಿ ರು. ವೆಚ್ಚದಲ್ಲಿ ದಕ್ಷಿಣ ಕರ್ನಾಟಕದ ಎಲ್ಲ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಅಂದಾಜು ಪಟ್ಟಿತಯಾರಿಸಲಾಗಿದೆ. ಇದರಿಂದ 125 ಟಿಎಂಸಿ ನೀರನ್ನು ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಮಧುಗಿರಿ, ಕೊರಟಗೆರೆ ಸೇರಿ 3.5 ಟಿಎಂಸಿ ನೀರು ನಿಗದಿಯಾಗಿದ್ದು ಅದರಲ್ಲಿ 1.5 ಟಿಎಂಸಿ ನೀರು ಹರಿಸಲು ಹೋರಾಟ ನಡೆಸಬೇಕಿದೆ. ಅಭಿವೃದ್ಧಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಗೂಬಲಗುಟ್ಟೆಕೆರೆಯ ಏರಿ ಎತ್ತರಿಸಿದರೆ ಹೆಚ್ಚು ನೀರು ಸಂಗ್ರಹಣೆ ಆಗಲಿದ್ದು ಕ್ಷೇತ್ರದ ಜನತೆಗೆ ನೀರು, ವಿದ್ಯುತ್ ನೀಡಿದರೆ ಜನರ ಬದುಕು ಹಸನಾಗಲಿದೆ ಎಂದರು.
ಉಪವಿಭಾಗಾಧಿಕಾರಿ ರಿಷಿ ಆನಂದ್ ಮಾತನಾಡಿ, ವಿದ್ಯೆ ಸಕಲ ಸಂಪತ್ತನ್ನು ತಂದು ಕೊಡುತ್ತದೆ. ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಕಾರ್ಯಕ್ರಮ. ಪೋಷಕರು ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿ. ಸಚಿವರ ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯ ಹಮ್ಮಿಕೊಂಡಿದ್ದು, ನಮ್ಮ ಕಂದಾಯ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ ಉಲ್ಲಾ, ತಾಪಂ ಇಓ ಲಕ್ಷ್ಮಣ್, ಎಡಿಓ ಮಧುಸೂದನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ತಾಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಮುಖಂಡರಾದ ತುಂಗೋಟಿ ರಾಮಣ್ಣ, ಶಿವಣ್ಣ, ಲಿಂಗರಾಜು, ಗ್ರಾಪಂ ಅಧ್ಯಕ್ಷೆ ನಾಗಮಣಿ ರಂಗಸ್ವಾಮಿ, ಹರೀಶ್, ವಿಜಯ ಪ್ರಕಾಶ್, ಮಂಜುನಾಥ್, ಡಿ.ಎಲ್.ರಾಮಯ್ಯ, ಪಿಡಿಓ ಶಿಲ್ಪಾ , ಸದಸ್ಯರಾದ ಲಕ್ಷ್ಮಮ್ಮ, ಮಂಜಮ್ಮ ರಾಮಯ್ಯ, ಮಂಜುನಾಥ್, ಪೂಜಾರ್ ಜಯಣ್ಣ, ಸತೀಶ್, ಚಂದ್ರಶೇಖರರಾಧ್ಯ, ಗ್ರಾಪಂ ಸದಸ್ಯ ಲಕ್ಕಮ್ಮ , ಡಿಎಲ್.ಕಣಿಮಯ್ಯ ಸೇರಿದಂತೆ ಅನೇಕರಿದ್ದರು.
ಜನರ ಕಷ್ಟಸುಖ ಅರಿತು ಕೆಲಸ ಮಾಡುವ ಮತ್ತು ರಾಜಕೀಯದಲ್ಲಿ ಆಸಕ್ತಿಯಿಂದ ಕೆಲಸ ಮಾಡುವ ಯುವ ಜನಾಂಗ ರಾಜಕೀಯಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ರಾಜಕೀಯದಲ್ಲಿ ಹೆಚ್ಚು ಸ್ಥಾನ ಮಾನಗಳನ್ನು ನೀಡಿ ಯುವಕರನ್ನು ಬೆಳಸುವ ಜವಾಬ್ದಾರಿ ಹಿರಿಯ ನಾಯಕರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ಸೂರಿಲ್ಲದವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕಿದೆ.
ಕೆ.ಎನ್.ರಾಜಣ್ಣ ಸಹಕಾರ ಸಚಿವ.