48 ಕೋಟಿ ಹಣ ವಂಚನೆ: DGM ಸೇರಿ 12 ಮಂದಿ ವಿರುದ್ಧ ಚಾರ್ಜ್‌ಶೀಟ್‌!

By Kannadaprabha NewsFirst Published May 1, 2020, 7:40 AM IST
Highlights

ಕೃಷಿ ಮಾರಾಟ ಮಂಡಳಿಯ ಮಾರುಕಟ್ಟೆ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆಯ ವ್ಯವಸ್ಥಾಪಕ ಸೇರಿ 12 ಮಂದಿ ವಿರುದ್ಧ ಸಿಸಿಬಿ ಪೊಲೀಸರಿಂದ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಕೆ|ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು| ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನ|

ಬೆಂಗಳೂರು(ಮೇ.01): ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಮಾರಾಟ ಮಂಡಳಿಯ ಮಾರುಕಟ್ಟೆ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆಯ ವ್ಯವಸ್ಥಾಪಕ ಸೇರಿ 12 ಮಂದಿ ವಿರುದ್ಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದಾರೆ.

"

ಮಂಡಳಿಯ ಮಾರುಕಟ್ಟೆ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ(ಡಿಜಿಎಂ) ಸಿದ್ದಗಂಗಯ್ಯ, ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ ಮಂಜುನಾಥ್‌, ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಯ್ಯ ಹಾಗೂ ಭರತ್‌, ಆಶಾ, ಮುಸ್ತಫಾ, ಕೃಷ್ಣಕುಮಾರ್‌, ಸಲೀಂ ಮತ್ತು ರೇವಣ್ಣ ಎಂಬುವರ ವಿರುದ್ಧ 1,400 ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಕೊರೋನಾ ಆತಂಕ: ವಿದೇಶದಲ್ಲಿ ಸಿಲುಕಿದವರ ಕರೆತರಲು ಸರ್ಕಾರ ಸಿದ್ಧತೆ

ಏನಿದು ಪ್ರಕರಣ?

ಮಂಡಳಿಯು ತನ್ನ ಆವರ್ತ ನಿಧಿಯ ಹಣದಿಂದ ಉತ್ತರಹಳ್ಳಿಯ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿ 100 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಜ.20ರಂದು ಬ್ಯಾಂಕಿನಲ್ಲಿ ವಿಚಾರಿಸಿದಾಗ 52 ಕೋಟಿ ಎಫ್‌ಡಿ ಹೂಡಿಕೆಗೆ ದಾಖಲಾತಿ ಕೊಟ್ಟಿದ್ದರು. ಉಳಿದ ಮೊತ್ತಕ್ಕೆ ಸೂಕ್ತ ದಾಖಲಾತಿ ನೀಡಿರಲಿಲ್ಲ. ಉಳಿದ ಮೊತ್ತಕ್ಕೆ ನಕಲಿ ದಾಖಲಾತಿ ಕೊಟ್ಟಿರುವುದು ಗಮನಕ್ಕೆ ಬಂದಿತ್ತು.
ಈ ಸಂಬಂಧ ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಅವರು ನೀಡಿದ ದೂರಿನ ಮೇರೆಗೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಬಳಿಕ ಪ್ರಕರಣವನ್ನು ಗೃಹ ಸಚಿವರ ಸೂಚನೆ ಮೇರೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸಿಸಿಬಿ ಪೊಲೀಸರು ನಡೆಸಿದ ತನಿಖೆ ವೇಳೆ ಹಣವನ್ನು ನಿಶ್ಚಿತ ಠೇವಣಿ ಇಡುವ ಬದಲಿಗೆ ವ್ಯವಸ್ಥಾಪಕ ಮಂಜುನಾಥ್‌ ಮತ್ತು ಅದೇ ಬ್ಯಾಂಕಿನ ಉಪ ವ್ಯವಸ್ಥಾಪಕ ಜಯರಾಮ್‌ ಅವರು ಮಂಡಳಿಯ ಫೈನಾನ್ಸ್‌ ಅಧಿಕಾರಿ ಎಂದು ಮಹಮ್ಮದ್‌ ಮುಸ್ತಫಾ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ತೆರೆದು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿದ್ದರು. ಬಳಿಕ, ಈ 100 ಕೋಟಿಯಲ್ಲಿ 48 ಕೋಟಿಯನ್ನು ಚೆನ್ನೈ ನಗರದ 106 ಇತರ ಚಾಲ್ತಿ ಖಾತೆಗಳಿಗೆ ವಿವಿಧ ಹಂತಗಳಲ್ಲಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. 

ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಮಂಜುನಾಥ್‌, ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಯ್ಯ, ಡಿಜಿಎಂ ಸಿದ್ಧಗಂಗಯ್ಯ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.
 

click me!