
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ತಿಂಗಳ ಮಾಮನ ತೇರು ಹಬ್ಬವನ್ನು 9 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಕಾರ್ಯಕ್ರಮವನ್ನು ಮಾಡುವ ಉದ್ದೇಶವೇನೆಂದರೆ ಮಳೆಗಾಗಿ ಮಾಡುವಂತ ಹಬ್ಬ, ಈ ಹಬ್ಬವನ್ನು ಗ್ರಾಮದ ಮಹಿಳೆಯರು ಪುರುಷರು ಸೇರಿ ಮಾಡುವಂತಹ ಹಬ್ಬವಾಗಿದ್ದು ಹಬ್ಬದಲ್ಲಿ ಮೊದಲನೇ ದಿನ ತಿಂಗಳ ಮಾವನ ತೇರನ್ನು ಬಿಡಿಸಿ ಆಂಜನೇಯನ ಪ್ರತಿಮೆಯನ್ನು ರಂಗೋಲಿಯಲ್ಲಿ ಬಿಡಿಸಿ ಪ್ರತಿದಿನ ಪೂಜೆ ಮಾಡಿ ಒಂದು ರೊಟ್ಟಿಯಿಂದ ಒಂಬತ್ತು ರೊಟ್ಟಿವರೆಗೆ ಇಟ್ಟು ಪೂಜಿಸಲಾಗುವುದು. ವಿಶೇಷವೇನೆಂದರೆ ಪೂಜೆ ಮುಗಿದ ನಂತರ ಒಂದು ರೊಟ್ಟಿಗೆ ಪೂಜೆ ಮಾಡಿ ಪೂಜೆ ಮುಗಿದ ನಂತರ ರೊಟ್ಟಿಯನ್ನು ಇಟ್ಟಿ ಕದ್ದಂಥವರಿಗೆ ನೀರನ್ನು ಎರಚುವ ಪದ್ಧತಿ. ಅಂದರೆ ಕೊನೆ ದಿನ ಒಂಬತ್ತು ರೊಟ್ಟಿಯನ್ನು ಇಟ್ಟು ಪೂಜಿಸಿ ಸೋಬಾನೆ ಪದ ಹಾಡಿ ಹೆಣ್ಣು-ಗಂಡಿಗೆ ಮದುವೆ ಮಾಡಿ ಆಚರಣೆ ಮಾಡಲಾಗುವುದು. ಈ ಕೊನೆ ದಿನ ಗ್ರಾಮಸ್ಥರೆಲ್ಲ ಸೇರಿ ಸಂತೋಷದಿಂದ ಆಚರಣೆ ಮಾಡಲಾಗುವುದು. ಈ ಆಚರಣೆಯ ಉದ್ದೇಶ ಮಳೆರಾಯನನ್ನು ಒಲಿಸುವುದು.
ಗ್ರಾಮದ ಮಹಿಳೆಯರಾದ ಸಣ್ಣಮ್ಮ, ಗೌರಮ್ಮ, ಪೂರ್ಣಿಮಾ, ಸುಜಾತ, ಮಂಜಮ್ಮ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಭಾಗವಹಿಸಿ ಸೋಬಾನೆ ಪದ ಹಾಡಿ ರಂಜಿಸಿದರು. ಸೋಮನಾಥ್, ಕಲಾನಾಥ್, ಗೋಪಿನಾಥ್, ನಾಗೇಶ್ ಅವರು ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಂದಂತ ಸಾರ್ವಜನಿಕರಿಗೆ ಕೊನೆಯ ದಿನ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಸಕಲೇಶಪುರ ತಾಲೂಕಿನ ಕರಗೂರು ಕೂಡಿಗೆ ಪಾಲಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾವಿ 16 ಅಡಿ ಎತ್ತರದ ಕಲ್ಲಿನ ಏಕಶಿಲಾ ನೂತನ ವಿಗ್ರಹದ ಪ್ರತಿಷ್ಠಾಪನೆ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಹಾಸನ ಹಾಗೂ ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಂಜನೇಯ ಸ್ವಾಮಿ ಸೇವೆಯ ಪ್ರತೀಕವಾಗಿದ್ದು, ಎಲ್ಲಾ ಯುಗಗಳಲ್ಲೂ ಭಕ್ತರ ಪಾಲಿಗೆ ಶಕ್ತಿಯ ಮೂಲವಾಗಿದ್ದಾರೆ. ಭಕ್ತರು ನಿರಂತರ ರಾಮನಾಮ ಜಪ ಮಾಡಬೇಕು ಎಂದು ಹೇಳಿದರು. ತುಳಸಿ ಪೂಜೆ, ಗೋ ಪೂಜೆ ಮಾಡುವ ಮನೆಗಳು ಪವಿತ್ರವಾಗುತ್ತವೆ ಎಂದೂ ಅವರು ತಿಳಿಸಿದರು. ಆಂಜನೇಯನು ಬ್ರಹ್ಮಚಾರಿ, ಜಾಗೃತಿಯ ಪ್ರತೀಕವಾಗಿದ್ದು, ಯುವಜನತೆಗೆ ಆದರ್ಶ ಎಂದರು.
ಹೆಗ್ಗಡಹಳ್ಳಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಮೂರು ದಿನಗಳಿಂದ ಯಜ್ಞ, ಹೋಮ-ಹವನ ಸೇರಿದಂತೆ ಸನಾತನ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಈ ವಿಗ್ರಹದ ಮುಂದೆ ಕೆಲ ಕ್ಷಣ ಪ್ರಾರ್ಥನೆ ಮಾಡಿದರೂ ಆತ್ಮಶಕ್ತಿ ಹೆಚ್ಚುತ್ತದೆ. ಕರಗೂರಿನ ಇತಿಹಾಸದಲ್ಲಿ ಇದು ಸುವರ್ಣ ಕ್ಷಣವಾಗಿದ್ದು, ಗ್ರಾಮಸ್ಥರಿಗೆ ಆರೋಗ್ಯ ಹಾಗೂ ಆಯುಷ್ಯ ಲಭಿಸಲಿ ಎಂದು ಆಶಿಸಿದರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಶ್ರೀ ಸಮರ್ಥ ಸದ್ಗುರು ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಗ್ಗೆಯಿಂದಲೇ ಬಾಬಾರಿಗೆ ಹೋಮ ಹವನ ಪೂಜಾ ವಿಧಿ ವಿಧಾನಗಳು ಜರುಗಿದವು. ಸಾಯಂಕಾಲ ಬಾಬಾರ ಪಲ್ಲಕ್ಕಿ ಉತ್ಸವ ಮಂಗಳವಾದ್ಯ ತಮಟೆ ನಗಾರಿಗಳ ಝೇಂಕಾರಗಳು ಮೊಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸಿ ಬಾಬಾರವರ ದಿವ್ಯ ದರ್ಶನ ಪಡೆದು ಪುನೀತರಾದರು.
ಗ್ರಾಮದ ಪ್ರಮುಖ ಬೀದಿಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಭಾನುವಾರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಸಂಜೆ ಗೋವಿನ ಪೂಜೆ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು.
ಕಲಾವಿದ ಗೌತಮ್ ವಳಗೆರೆಹಳ್ಳಿ ತಂಡದವರಿಂದ ಭಕ್ತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮ ಮನಸೂರೆಗೊಂಡಿತು. ಪೂಜಾ ವಿಧಿ ವಿಧಾನಗಳನ್ನು ಬಾಬಾಸೇವಕ ಮುನಿ ಶಂಕರಯ್ಯ ನೆರವೇರಿಸಿದರು. ವಳಗೆರೆಹಳ್ಳಿ ಸೊಳ್ಳೆಪುರ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಬಾಬಾರವರ ದಿವ್ಯ ದರ್ಶನ ಪಡೆದರು.