
ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಕೇರಳದ ಕೋಯಿಕ್ಕೋಡ್‌ನ ನಾಡಾಪುರಂ ನಿವಾಸಿ ಟೆಕ್ಕಿ ಶರಣ್ಯ, ಬರೋಬ್ಬರಿ 3 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಶೋಧ ತಂಡದವರು ಶರಣ್ಯರನ್ನು ಪತ್ತೆ ಮಾಡಿದ ತಕ್ಷಣ, ಅವರು ತಮ್ಮ ತಾಯಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮಗಳು ಸಿಕ್ಕ ಖುಷಿಯಲ್ಲಿ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. ಆದರೆ, ತಾಯಿ ಮಗಳೊಂದಿಗೆ ಮಾತನಾಡುವ ಕೇಳಿದ ಮೊದಲ ಮಾತು ಏನೆಂಬುದು ನೀವೇ ನೋಡಿ..
ಕೊಡಗಿನ ದಟ್ಟಾರಣ್ಯದಲ್ಲಿ ಕಳೆದು ಹೋಗಿದ್ದ ಕೇರಳದ ಟೆಕ್ಕಿ ಶರಣ್ಯಗಾಗಿ ಕರ್ನಾಟಕದ ಅರಣ್ಯ ಇಲಾಖೆ ತಂಡ ಹಗಲು-ರಾತ್ರಿ ಜೀವಭಯವನ್ನು ಬಿಟ್ಟು ಶೋಧ ಕಾರ್ಯ ಮಾಡಿತ್ತು. ಸತತ 4ನೇ ದಿನದ ಶೋಧ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಆದಿವಾಸಿಗಳ ತಂಡ ಶರಣ್ಯರನ್ನು ಪತ್ತೆ ಮಾಡಿದೆ. ಸದ್ಯ ಶರಣ್ಯ ಅವರು ಆರೋಗ್ಯವಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷೆಗಳ ನಂತರ ಅವರನ್ನು ಊರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರಣ್ಯ ಅವರಿಗೆ ಈ ಹಿಂದಿನ ಟ್ರೆಕ್ಕಿಂಗ್ ಅನುಭವವೇ ಈ ಕಠಿಣ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಲು ಸಹಾಯ ಮಾಡಿದೆ. ತಂಡದ ಜೊತೆ ಹೋಗುತ್ತಿದ್ದಾಗ ಅವರು ದಾರಿ ತಪ್ಪಿ ಒಂಟಿಯಾಗಿದ್ದರು.
'ಈ ಖುಷಿಯನ್ನು ಹೇಳಲು ಪದಗಳೇ ಸಿಗುತ್ತಿಲ್ಲ' ಎಂದು ಶರಣ್ಯರ ಸಹೋದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಸಹೋದರ ಕೂಡ ಇದೊಂದು ಸಂತೋಷದ ಸುದ್ದಿ ಎಂದಿದ್ದಾರೆ. ಥರ್ಮಲ್ ಡ್ರೋನ್ ಬಳಸಿ ನಡೆಸಿದ ತಪಾಸಣೆಯಲ್ಲಿ ಶರಣ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ತಕ್ಷಣ ಅವರನ್ನು ತಡಿಯಂಡಮೋಳ್ ಟ್ರೆಕ್ಕಿಂಗ್ ಕ್ಯಾಂಪ್ ಕಚೇರಿಗೆ ಕರೆತರಲಾಯಿತು. ಶೋಧ ಕಾರ್ಯಾಚರಣೆಗಾಗಿ ಒಟ್ಟು ಎಂಟು ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಆರು ತಂಡಗಳು ಈಗಾಗಲೇ ವಾಪಸ್ ಆಗಿದ್ದವು. ಇನ್ನೊಂದು ತಂಡ ಕೂಡ ವಾಪಸ್ ಹೊರಡಲು ಸಿದ್ಧವಾಗುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ನಕ್ಸಲ್ ನಿಗ್ರಹ ದಳ ಕೂಡ ಈ ಶೋಧದಲ್ಲಿ ಭಾಗಿಯಾಗಿತ್ತು.
ಶರಣ್ಯಳನ್ನು ಫೋನ್ ಸಿಗ್ನಲ್ ಸಿಗುವ ಪ್ರದೇಶಕ್ಕೆ ಕರೆತಂದ ಕೂಡಲೇ ಆಕೆಯ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಶರಣ್ಯ ಸಿಕ್ಕಿರುವ ಮಾಹಿತಿ ಕೇಳುತ್ತಿದ್ದಂತೆ ಕಣ್ಣಾಲಿಗಳನ್ನು ತುಂಬಿಕೊಂಡ ಅವರ ತಾಯಿ, ನನಗೆ ಸಂತೋಷವನ್ನ ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ತುಂಬಾ ಧನ್ಯವಾದ, ನಿಮಗೆ ಇಲ್ಲಿಂದಲೇ ಕೋಟಿ ನಮಸ್ಕಾರ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಶರಣ್ಯ ಕೂಡ ಅಮ್ಮನೊಂದಿಗೆ ಮಾತನಾಡಿ, 'ಆರೋಗ್ಯವಾಗಿದ್ದೇನೆ ನಾನು ಚಿಂತೆ ಬೇಡ, ಬೇಗ ಮನೆಗೆ ಬರ್ತೇನೆ' ಎಂದು ಹೇಳಿದ್ದಾರೆ.
ಕಾಡಿನಲ್ಲಿ ಅನ್ನ-ಆಹಾರ ಇಲ್ಲದಿದ್ದರೂ ಬದುಕುಳಿದ ಬಗ್ಗೆ ಮಾತನಾಡಿದ ಶರಣ್ಯ, 'ನಾನು ನನ್ನ ಸ್ನೇಹಿತರಿಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಒಂದೇ ಒಂದು ಬಾಟಲಿ ನೀರು ಮಾತ್ರ. ಡ್ರೋನ್ ಬಳಸಿ ಹುಡುಕಾಟ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಡ್ರೋನ್‌ಗೆ ಕಾಣಿಸುವಂತಹ ತೆರೆದ ಜಾಗದಲ್ಲಿಯೇ ಉಳಿದುಕೊಂಡಿದ್ದೆ' ಎಂದು ಹೇಳಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ವರದಿ ಮಾಡಿದ ಏಷ್ಯಾನೆಟ್ ನ್ಯೂಸ್‌ಗೆ ಶರಣ್ಯ ಕುಟುಂಬ ವಿಶೇಷ ಧನ್ಯವಾದ ತಿಳಿಸಿದೆ.
ಕಾಡಿನಲ್ಲಿ ಡ್ರೋನ್ ಹಾರಾಟ ಮಾಡುತ್ತಿದ್ದಂತೆ, ಎತ್ತರದ ಮತ್ತು ಸ್ವಲ್ಪ ಬಯಲಾದ ಜಾಗದಲ್ಲಿಯೇ ನಿಂತುಕೊಂಡಿದ್ದ ಶರಣ್ಯ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾಗೆ ಕಂಡ ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿದೆ. ಇದಾದ ನಂತರ ಶರಣ್ಯ ಇದ್ದ ದುರ್ಗಮ ಹಾದಿಯತ್ತ ಸಾಗಿದ ಅರಣ್ಯ ಇಲಾಖೆ ಸಿಬ್ಬಂದಿ ನಂತರ ಆಕೆಯನ್ನು ರಕ್ಷಣೆ ಕರೆತರಲಾಯಿತು. ಒಂದು ವೇಳೆ ಅರಣ್ಯದಲ್ಲಿ ಕಾಡು ಪ್ರಾಣಿಗಳ ಭಯದಿಂದ ಎಲ್ಲಿಯಾದಗೂ ಮರದ ಪೊಟರೆಗಳು ಅಥವಾ ಕಲ್ಲಿನ ಬಂಡೆಗಳ ಪಕ್ಕದಲ್ಲಿ ಅಡಗಿ ಕುಳಿತಿದ್ದರೆ ಅರಣ್ಯ ಇಲಾಖೆಯ ಡ್ರೋನ್ ಕ್ಯಾಮೆರಾಗೂ ಸಿಗುತ್ತಿರಲಿಲ್ಲ.