
ಚಾಮರಾಜನಗರ: ರಾಜಕೀಯ ಇಚ್ಛಾಶಕ್ತಿ ಇದ್ದರೆ ಎಂತೆಂತಹ ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನಲ್ಲಿ ತುಂಬಿ ತುಳುಕುತ್ತಿರುವ ರಾಮನಗುಡ್ಡ ಜಲಾಶಯ ಸಾಕ್ಷಿಯಾಗಿದೆ. ಭೀಕರ ಬರಗಾಲದ ನಡುವೆಯೂ ಈ ಜಲಾಶಯ ತುಂಬಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಗಳು ನಳನಳಿಸುತ್ತಿವೆ.
ಈಗ ಎಲ್ಲೆಡೆ ಬರ, ಈ ನಡುವೆಯು ಕಾವೇರಿ ನದಿಯಲ್ಲಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಬರಗಾಲದಲ್ಲಿ ವ್ಯವಸಾಯ ಮಾಡುವುದಿರಲಿ ಕುಡಿಯುವ ನೀರಿಗು ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ದುಸ್ಥಿತಿಯಲ್ಲು ಆ ಜಲಾಶಯ ತುಂಬಿ ತುಳುಕುತ್ತಿದೆ. ಜಲಾಶಯ ಹಾಗು ಜಲಾಶಯಕ್ಕೆ ನೀರು ಹರಿದು ಬರುವ ಕಾಲವೆಯ ಎರಡೂ ಬದಿಗಳಲ್ಲಿ ಒಂದು ಕಿಲೋಮೀಟರ್ ಉದ್ದಕ್ಕೂ ಅಂತರ್ಜಲ ಮಟ್ಟ ವೃದ್ಧಿಸಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಹೌದು, ನಾವೀಗ ಹೇಳಲು ಹೊರಟಿರೋದು ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ರಾಮನಗುಡ್ಡ ಜಲಾಶಯದ ಬಗ್ಗೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ತಮಿಳುನಾಡಿಗೆ ಹನೂರು ತಾಲೂಕಿನ ಮೂಲಕವೇ ಕಾವೇರಿ ಹರಿದು ಹೋದರು, ಇಲ್ಲಿನ ಜನರಿಗೆ ಮಾತ್ರ ಕಾವೇರಿ ನೀರಿನ ಪ್ರಯೋಜನ ಸಿಗದಂತಾಗಿತ್ತು. ಹನೂರು ಸಮೀಪ ನಲವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಾಮನ ಗುಡ್ಡ ಜಲಾಶಯ ಮಳೆ ಇಲ್ಲದ ಕಾರಣ ನೀರಿಲ್ಲದೆ ಬಣಗುಡುತ್ತಿತ್ತು.
ಇಲ್ಲಿಗೆ ಕಾವೇರಿ ನದಿಯಿಂದ 2016ರಲ್ಲೇ 20 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ ಆರ್ಥಿಕ ಹೊರೆಯ ಕಾರಣ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ ಸ್ವತಃ ಸಿವಿಲ್ ಇಂಜಿನಿಯರ್ ಪದವೀಧರರಾಗಿರುವ ಹನೂರು ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ಈ ಯೋಜನೆಗೆ ಬೇರಯದೆ ಸ್ವರೂಪ ನೀಡುವ ಮೂಲಕ ರಾಮನ ಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ. ಕೊಳ್ಳೇಗಾಲ ತಾಲೋಕು ಸರಗೂರು ಬಳಿ ಹರಿಯುವ ಕಾವೇರಿ ನದಿಯಿಂದ ಹನೂರು ತಾಲೋಕಿನ ಬೂದಬಾಳು ಗ್ರಾಮದವರೆಗೆ ಎರಡೂವರೆ ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮೂಲಕ ಕಾವೇರಿ ನೀರು ತಂದು ಬಳಿಕ ಬೂದಬಾಳು ಗ್ರಾಮದಿಂದ ನೈಸರ್ಗಿಕವಾಗಿ ಇರುವ ದೊಡ್ಡಹಳ್ಳದ ಮೂಲಕ ನೀರು ಹರಿಸಿ ರಾಮನ ಗುಡ್ಡ ಜಲಾಶಯ ತುಂಬಿಸುವ ಯೋಜನೆ ಸಾಕಾರಗೊಳಿಸುವಲ್ಲಿ ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ.
80 ಎಕರೆ ವಿಸ್ತೀರ್ಣದ ರಾಮನಗುಡ್ಡ ಜಲಾಶಯ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಬೂದಬಾಳು ಗ್ರಾಮದಿಂದ ರಾಮನಗುಡ್ಡದವರೆಗೆ ಇರುವ ದೊಡ್ಡ ಹಳ್ಳದ ಮಾರ್ಗದಲ್ಲಿ 27 ಚೆಕ್ ಡ್ಯಾಂಗಳಿವೆ. ದೊಡ್ಡ ಹಳ್ಳದ ಮೂಲಕ ಕಾವೇರಿ ನೀರು ಹರಿಯುವುದರಿಂದ ಚೆಕ್ ಡ್ಯಾಂಗಳು ತುಂಬಿ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಹಲವಾರು ಹಳ್ಳಿಗಳಿಗೆ ಕೃಷಿ ಹಾಗು ಜನಜಾನುವಾರುಗಳಿಗೆ ನೀರಿನ ಬವಣೆ ತಪ್ಪಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.
ಜಲಾಶಯ ತುಂಬಿ ಕೋಡಿ ಬೀಳುವ ಹಂತದಲ್ಲಿದ್ದು ಕೋಡಿ ಬೀಳುವ ನೀರು ಮಣಗಳ್ಳಿ, ಬಂಡಳ್ಳಿ, ಶ್ಯಾಗ್ಯ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲು ಸಹ ಹತ್ತಾರು ಗ್ರಾಮಗಳ ನೀರಿನ ಬವಣೆ ನೀಗುವ ನಿರೀಕ್ಷೆ ಇದೆ. ಒಟ್ಟಾರೆಇಲ್ಲಿ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿ ಕೆಲಸ ಮಾಡಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ತಮ್ಮ ಇತಿಮಿತಿಯಲ್ಲಿ ಜನರ ಬದುಕು ಹಸನುಗೊಳ್ಳುವ ಕೆಲಸ ಕಾರ್ಯ ಮಾಡಬಹುದು ಎಂಬುದಕ್ಕೆ ಬರಗಾಲದಲ್ಲು ತುಂಬಿ ತುಳುಕುತ್ತಿರುವ ರಾಮನಗುಡ್ಡ ಜಲಾಶಯ ಜ್ವಲಂತ ನಿದರ್ಶನವಾಗಿದೆ. (ವರದಿ: ಪುಟ್ಟರಾಜು ಆರ್‌ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ)