Chamarajanagar : ಸಮಗ್ರ ಕುಡಿಯುವ ನೀರಿನ ಕ್ರಿಯಾಯೋಜನೆ ತಯಾರಿಸಲು ಸೂಚನೆ

By Kannadaprabha NewsFirst Published Oct 5, 2023, 9:13 AM IST
Highlights

:  ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.

 , ಚಾಮರಾಜನಗರ :  ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ಎದುರಾಗಿರುವುದರಿಂದ ಬರ ನಿರ್ವಹಣೆ ಸಂದರ್ಭವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. ಸಮರ್ಪಕವಾಗಿ ಜನರಿಗೆ ದೊರೆಯುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಚಾಮರಾಜನಗರ 22, ಗುಂಡ್ಲುಪೇಟೆ 24, ಹನೂರು 19, ಕೊಳ್ಳೇಗಾಲ 5 ಹಾಗೂ ಯಳಂದೂರಿನ 9 ಗ್ರಾಮಗಳು ಸೇರಿದಂತೆ ಒಟ್ಟು 29 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಆರ್.ಒ. ಪ್ಲಾಂಟ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಖಾಸಗಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದರೆ (ರೀಬೋರಿಂಗ್) ರೀಚಾರ್ಜ್ ಮಾಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ವೇಗಗೊಳಿಸಬೇಕು. ಕಾಮಗಾರಿಯಲ್ಲಿ ದುಂದುವೆಚ್ಚಕ್ಕೆ ಅವಕಾಶವಾಗಬಾರದು. ಪೈಪ್‌ಲೈನ್ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಲುಷಿತ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರದಂತೆ ಎಚ್ಚರ ವಹಿಸಬೇಕು. 15ನೇ ಹಣಕಾಸು ಯೋಜನೆ ಹಾಗೂ ವಿಶೇಷ ಅನುದಾನ ಸೇರಿದಂತೆ ಇತರೆ ಅವಶ್ಯ ಅನುದಾನಗಳನ್ನು ಬಳಸಿಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯೋನ್ಮಖರಾಗುವಂತೆ ನಿರ್ದೇಶನ ನೀಡಿದರು.

ನೀರಿನ ಲಭ್ಯತೆ ಕುರಿತು ಜಿಯಾಲಾಜಿಸ್ಟ್ (ಭೂಗರ್ಭ ಶಾಸ್ತçಜ್ಞ) ರಿಂದ ಪಾಯಿಂಟ್ ಗುರುತಿಸಬೇಕು. ಖಾಸಗಿ ಬೋರ್‌ವೆಲ್‌ಗಳಿಗೆ ಜಿಯೋ ಟ್ಯಾಗ್ ಮಾಡಿಸಬೇಕು. ತಹಶೀಲ್ದಾರರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಕ್ಷೇತ್ರ ಭೇಟಿ ಸಂದರ್ಭದಲ್ಲಿ ನೀರಿನ ಪರೀಕ್ಷೆ ಮಾಡಿಸಬೇಕು. ವಹಿ ನಿರ್ವಹಿಸಬೇಕು. ಈ ಬಗ್ಗೆ ತಾಲೂಕುವಾರು ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಳೆ ಸಮೀಕ್ಷೆ ವಿಳಂಬಕ್ಕೆ ಅವಕಾಶವಾಗದಂತೆ ನಿಗದಿತ ಅವಧಿಯಲ್ಲಿ ಕೆಲಸ ಆಗಬೇಕು. ಪಿ.ಆರ್. ಗಳಿಗೆ ಅವಶ್ಯವಾಗಿರುವ ಗುರುತಿನ ಚೀಟಿ ನೀಡಬೇಕು. ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ 31ನೇ ಸ್ಥಾನದಲ್ಲಿದ್ದು, ಸಮೀಕ್ಷೆ ಕಾರ್ಯ ಅದಷ್ಟು ಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಇನ್ನುಳಿದಂತೆ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಲಸಿಕೆ ಕಾರ್ಯ, ಮಾರ್ಚ್ ಅಂತ್ಯದವರೆಗೆ ಮೇವಿನ ಲಭ್ಯತೆ, ಸಾಂಕ್ರಾಮಿಕ ರೋಗಗಳು ಹರಡುವಿಕೆ ತಡೆಯಲು ಜಾಗೃತಿ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪರಿಶೀಲಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

click me!