Chamarajanagar: ಡಾ. ರಾಜ್‌ಕುಮಾರ್ ದೂರದ ಸಂಬಂಧಿಯ ಮನೆ ಮುಂದೆ ಭಾರೀ ಸ್ಫೋಟ, ಕಿಟಕಿ ಗಾಜುಗಳು ಪುಡಿಪುಡಿ

Published : Nov 10, 2026, 05:05 PM IST
chamarajanagar blast

ಸಾರಾಂಶ

ಚಾಮರಾಜನಗರ ಗಡಿಭಾಗದ ದೊಡ್ಡ ಗಾಜನೂರಿನಲ್ಲಿರುವ ಡಾ. ರಾಜ್‌ಕುಮಾರ್ ಸಂಬಂಧಿಯ ಮನೆ ಮುಂದೆ ಸ್ಫೋಟ ಸಂಭವಿಸಿತ್ತು. ಇದು ಕಚ್ಚಾ ಬಾಂಬ್ ದಾಳಿ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲಿ ಇದು ಎರಡು ಆಟಂಬಾಂಬ್ ಪಟಾಕಿಗಳನ್ನು ಒಟ್ಟಿಗೆ ಸಿಡಿಸಿದಾಗ ಆದ ಸ್ಫೋಟ ಎಂದು ದೃಢಪಟ್ಟಿದೆ.

ಚಾಮರಾಜನಗರ: ಅದು ವರನಟ ಡಾ. ರಾಜ್ಕುಮಾರ್ ಅವರ ದೂರದ ಸಂಬಂಧಿಯ ಮನೆ ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿರುವ ಆ ಮನೆಯ ಮುಂದೆ ಸಂಭವಿಸಿದ ಸ್ಪೋಟ ಭಾರೀ ಆತಂಕವನ್ನೇ ಸೃಷ್ಟಿಸಿತ್ತು. ಮನೆ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದರೆ, ಇದು ಪಟಾಕಿ ಸ್ಫೋಟ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕಚ್ಚಾ ಬಾಂಬ್ ದಾಳಿ ಎಂದು ಕುಟುಂಬದ ಆರೋಪ

ಚಾಮರಾಜನಗರ ಗಡಿಭಾಗ ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಏಕಾಏಕಿ ಭಾರೀ ಶಬ್ದದೊಂದಿಗೆ ಸ್ಫೋಟವೊಂದು ಸಂಭವಿಸಿತ್ತು. ಡಾ. ರಾಜ್ಕುಮಾರ್ ಅವರ ದೂರದ ಸಂಬಂಧಿ ಮಂಗಮ್ಮ ಎಂಬುವರ ಮನೆಯ ಮುಂದೆ ಈ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಶಬ್ದ ಕೇಳಿ ಹೊರಬಂದು ನೋಡಿದಾಗ ಮನೆ ತುಂಬಾ ಹೊಗೆ ಆವರಿಸಿಕೊಂಡಿದ್ದು, ಪಲ್ಸರ್ ಬೈಕ್ನಲ್ಲಿ ಬಂದಿದ್ದ ಐವರು ಯುವಕರು ನಿಂತಿದ್ದರು. ತಕ್ಷಣವೇ ಜಾಗರೂಕರಾದ ಕುಟುಂಬಸ್ಥರು ಯುವಕರ ವಿಡಿಯೋ ಮಾಡಿಕೊಂಡು, ಪ್ರಾಣಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದು ಆರೋಪಿಸಿ ತಾಳವಾಡಿ ಪೊಲೀಸರಿಗೆ ವೀಡಿಯೋ ನೀಡಿದ್ದರು.

ಪೊಲೀಸ್ ತನಿಖೆಯಲ್ಲಿ ಪಟಾಕಿ ಸ್ಫೋಟ ಎಂದು ದೃಢ

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಾಳವಾಡಿ ಪೊಲೀಸರು ಸ್ಥಳದಲ್ಲಿದ್ದ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಸ್ಪಷ್ಟನೆ ನೀಡಿದ ಪೊಲೀಸರು, "ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಇದು ಕಚ್ಚಾ ಬಾಂಬ್ ಸ್ಫೋಟ ಅಲ್ಲ. ಕೆಲ ಯುವಕರು ನಿಗದಿತ ಸಮಯಕ್ಕಿಂತ ಹೆಚ್ಚು ಜೋರಾಗಿ ಪಟಾಕಿ ಸಿಡಿಸಿದ್ದರಿಂದ ಉಂಟಾದ ಕಂಪನಕ್ಕೆ ಗಾಜುಗಳು ಒಡೆದಿವೆ" ಎಂದು ತಿಳಿಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಯತ್ನ ಮಾಡಿದರು. ಆದರೆ, ಪೊಲೀಸರ ಈ ಸ್ಪಷ್ಟನೆಯನ್ನು ಕುಟುಂಬಸ್ಥರು ಸಂಪೂರ್ಣವಾಗಿ ನಿರಾಕರಿಸಿ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದರು.

ಎರಡು ಆಟಂ ಬಾಂಬ್ ಪಟಾಕಿ ಜೋಡಿಸಿ ಸಿಡಿಸಿದ ಯುವಕರು

ತನಿಖೆ ಚುರುಕುಗೊಳಿಸಿದ ತಾಳವಾಡಿ ಪೊಲೀಸರು ನೈಜ ಸಂಗತಿ ಏನೆಂಬುದನ್ನು ವಶಕ್ಕೆ ಪಡೆದಿದ್ದ ಯುವಕರಿಂದ ಬಾಯಿ ಬಿಡಿಸಿದ್ದಾರೆ. ಅಭಿ ಮತ್ತು ಶಿವಕುಮಾರ್ ಎಂಬ ಇಬ್ಬರು ಯುವಕರು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಈ ಇಬ್ಬರು ಯುವಕರು ಎರಡು ಆಟಂಬಾಂಬ್ ಪಟಾಕಿಗಳನ್ನು ಒಟ್ಟಿಗೆ ಸೇರಿಸಿ ಸಿಡಿಸಿದ್ದು ಇದರಿಂದ ಹಾರಿದ ಕಿಡಿ ಪಕ್ಕದಲ್ಲಿದ್ದ ಆಟಂಬಾಂಬ್ ಪಟಾಕಿ ಬಾಕ್ಸ್ ಗೆ ಬಿದ್ದು ಒಟ್ಟಿಗೆ ಸ್ಫೋಟಗೊಂಡಿದೆ. ಈ ಭಾರೀ ಸ್ಫೋಟದ ಕಂಪನದಿಂದಾಗಿಯೇ ಮನೆಯ ಗಾಜುಗಳು ಪುಡಿಯಾಗಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

ಆರಂಭದಲ್ಲಿ ಕಚ್ಚಾ ಬಾಂಬ್ ದಾಳಿ ಎನ್ನಲಾಗಿದ್ದ ಪ್ರಕರಣ ಕೊನೆಗೂ ಪಟಾಕಿ ಸ್ಫೋಟವೆಂದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯುವುದರ ಮೂಲಕ ತಾಳವಾಡಿ ಪೊಲೀಸರು ಸದ್ಯಕ್ಕೆ ಹರಡಿದ್ದ ಆತಂಕದ ವಾತಾವರಣಕ್ಕೆ ತೆರೆ ಎಳೆದಿದ್ದಾರೆ. (ವರದಿ: ಪುಟ್ಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ) 

PREV
Read more Articles on
click me!

Recommended Stories

ಗದಗದಲ್ಲಿ ಭಾವೈಕ್ಯತೆಯ ಬೆಳಕು, 35 ವರ್ಷಗಳಿಂದ ಮುಸ್ಲಿಂ ಕುಟುಂಬದಿಂದ ಲಕ್ಷ್ಮೀಯ ಆರಾಧನೆ
ಸುದೀರ್ಘ ದೀಪಾವಳಿ ರಜೆ ಮಗಿಯುತ್ತಿದ್ದಂತೆ ಆಫೀಸ್ ಚಿಂತೆ, ಇಂಟರ್‌ನೆಟ್‌ನಲ್ಲಿ ಫುಲ್ ಮೀಮ್ಸ್